

ಬೆಂಗಳೂರು: ಕೋವಿಡ್-19 ನಿಂದಾಗಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ರಾಜ್ಯ ಸರ್ಕಾರಕ್ಕೆ ಸಹಕಾರಿಯಾಗುವಂತೆ 30,000 ಕೋಟಿ ರೂಪಾಯಿ ಬೊಕ್ಕಸಕ್ಕೆ ತರಲು ಬಿಡಿಎ ಯೋಜನೆ ರೂಪಿಸಿದೆ.
12,000 ಕಾರ್ನರ್ ಸೈಟ್ ಗಳನ್ನು ಮಾರಾಟ ಮಾಡುವುದು ಹಾಗೂ 72,000 ಅಕ್ರಮ ಕಟ್ಟಡಗಳನ್ನು ದಂಡ ಕಟ್ಟಿಸಿಕೊಂಡು ಸಕ್ರಮ ಮಾಡುವ ಮೂಲಕ ಮಾ.2021 ರ ವೇಳೆಗೆ 30,000 ಕೋಟಿ ರೂಪಾಯಿಗಳನ್ನು ಸರ್ಕಾರದ ಬೊಕ್ಕಸಕ್ಕೆ ತರಲು ಯೋಜನೆ ಹೊಂದಿತ್ತು. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಹ ಬಿಡಿಎ ಸ್ವತ್ತುಗಳಿಂದ ಬರುವ ಹಣವನ್ನು ಸರ್ಕಾರದ ಆದಾಯಕ್ಕೆ ಬಳಸಿಕೊಳ್ಳುವ ಬಗ್ಗೆ ಘೋಷಿಸಿದ್ದರು. ಆದರೆ ಬಿಡಿಎ ಒಳಗೇ ಇರುವ ಕೆಲವರು ಹಾಗೂ ತಜ್ಞರು ಈ ಕೆಲಸ ಕಷ್ಟಸಾಧ್ಯ ಎನ್ನುತ್ತಿದ್ದಾರೆ.
ಬಿಡಿಎ ತನ್ನ ಪುನಶ್ಚೇತನಕ್ಕಾಗಿಯೇ ಒಂದಷ್ಟು ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದೆ. ಕೋವಿಡ್-19 ಪರಿಸ್ಥಿತಿಯಿಂದ ಉಂಟಾಗಿರುವ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸರ್ಕಾರಕ್ಕೆ ಬಿಡಿಎಯಿಂದ ಸರ್ಕಾರಕ್ಕೆ ಸಾಧ್ಯವಾದಷ್ಟು ಸಹಕಾರ ನೀಡಬೇಕಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಬಿಡಿಎ ಆಯುಕ್ತ ಜಿ.ಸಿ ಪ್ರಕಾಶ್ ಹೇಳಿದ್ದಾರೆ.
ಬಿಡಿಎ ಕಾಯ್ದೆಯ 38(D) ಗೆ ತಿದ್ದುಪಡಿ ತರುವ ಮೂಲಕ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವ ಯೋಜನೆಯಲ್ಲಿದೆ ಬಿಡಿಎ.
12,000 ಕಾರ್ನರ್ ಸೈಟ್ ಗಳಿದೆ ಎನ್ನಲಾಗುತ್ತಿದೆಯಾದರೂ ನಿಖರ ಅಂಕಿ-ಅಂಶಗಳು ತಿಳಿದಿಲ್ಲ. ವಿಶ್ವೇಶ್ವರಯ್ಯ ಲೇಔಟ್ ನಲ್ಲಿರುವ ಕಾರ್ನರ್ ಸೈಟ್ ಗಳನ್ನು ಮಾರಾಟ ಮಾಡಲು ಮುಂದಾಗಿದ್ದ ಬಿಡಿಎ ಪ್ರತಿ ಸೈಟ್ ನ ಬೆಲೆಯನ್ನು ಚದರ ಅಡಿಗೆ 7,500 ರೂಪಯಿ ನಿಗದಿಪಡಿಸಿತ್ತು. ಆದರೆ ಯಾರೂ ಆಸಕ್ತಿ ತೋರದ ಕಾರಣ ಅದನ್ನು 5,000 ಗೆ ಇಳಿಕೆ ಮಾಡಲಾಗಿತ್ತು. ಆದರೂ ನಿರೀಕ್ಷಿತ ಪ್ರತಿಕ್ರಿಯೆ ದೊರೆತಿಲ್ಲ. ಇನ್ನು ಅಕ್ರಮ ಕಟ್ಟಡಗಳನ್ನು ಸಕ್ರಮ ಮಾಡುವ ಪ್ರಕ್ರಿಯೆ ಮತ್ತಷ್ಟು ಕಷ್ಟಸಾಧ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಕ್ರಮಗೊಳಿಸಲು ವಿಧಿಸಲಾಗುವ ದಂಡ ಅತಿ ಹೆಚ್ಚಿನ ಮೊತ್ತವನ್ನು ಹೊಂದಿರುತ್ತದೆ ಅಷ್ಟು ಹಣವನ್ನು ಯಾರು ಪಾವತಿಸುತ್ತಾರೆ ಎಂಬುದು ಅಧಿಕಾರಿಗಳ ಪ್ರಶ್ನೆಯಾಗಿದೆ.