ಹೊಸಪೇಟೆ: ಆಹಾರದ ಕಿಟ್ ಪಡೆಯೋಕೆ ನೂಕುನುಗ್ಗಲು, ಕಣ್ಣಿದ್ದು ಕುರುಡಾದ ಅಧಿಕಾರಿಗಳು!
ಹೊಸಪೇಟೆ: ರಾಜ್ಯಾದ್ಯಂತ ಮಾರಕ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ವೈರಸ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಠಿಣ ಲಾಕ್ ಡೌನ್ ಜಾರಿಗೆ ಮುಂದಾಗಿದೆ. ಆದರೆ ಅತ್ತ ಹೊಸಪೇಟೆಯಲ್ಲಿ ಸರ್ಕಾರದ ಇಡೀ ಕ್ರಮಗಳನ್ನು ಅಣಕಿಸುವಂತಹ ಘಟನೆ ಸಂಭವಿಸಿದೆ.
ಹೌದು.. ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರವೊಂದರಲ್ಲೇ ಈ ವರೆಗೂ ಹನ್ನೊಂದು ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಲಾಕ್ ಡೌನ್ ಹೇರಲಾಗಿದೆ. ಹೀಗಿದ್ದೂ ಇಲ್ಲಿನ ಅಧಿಕಾರಿ ವರ್ಗಕ್ಕೆ ಬುದ್ದಿ ಬಂದಂತೆ ಕಾಣುತ್ತಿಲ್ಲ. ಲಾಕ್ ಡೌನ್ ನಿಂದಾಗಿ ಇಡೀ ನಗರದಲ್ಲಿ ವಾಣಿಜ್ಯ ಚಟುವಟಿಕೆ ಸ್ಥಬ್ಧವಾಗಿದೆ. ಇತ್ತ ಇಲ್ಲಿನ ಜನರ ಅಗತ್ಯ ವಸ್ತುಗಳಿಗೆ ಪರದಾಡುತ್ತಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಕೇವಲ ಆಹಾರದ ಕಿಟ್ ಪಡೆಯೋಕೆ ಪ್ರಾಣವನ್ನೂ ಲೆಕ್ಕಿಸದೇ ಜನ ಸಹಸ್ರೋಪಾದಿಯಲ್ಲಿ ಧಾವಿಸಿದ್ದು, ಆಹಾರ್ ಕಿಟ್ ಪಡೆಯಲು ನೂಕಾಟ ತಳ್ಳಾಟ ನಡೆಸಿದ್ದಾರೆ. ಆ ಮೂಲಕ ಆಹಾರ ಕಿಟ್ ಗಾಗಿ ಪ್ರಾಣವನ್ನು ಪಣಕ್ಕಿಟ್ಟಿರುವ ಜನ ಸಾಮಾಜಿಕ ಅಂತರ ಎಂಬ ಕಲ್ಪನೆಯನ್ನೇ ಮರೆತು ಬಿಟ್ಟಿದ್ದಾರೆ. ಅದರೆ ವಿಪರ್ಯಾಸವೆಂದರೆ ಇಲ್ಲಿನ ಅಧಿಕಾರಿ ವರ್ಗ ಕಣ್ಣಿದ್ದೂ ಕುರುಡಾಗಿದೆ. ಸಾಮಾಜಿಕ ಅಂತರವಿರಲಿ ಸಾಮಾಜಿಕ ನ್ಯಾಯ ಕೂಡ ಇಲ್ಲ ಎಂಬಂತಾಗಿದೆ.
ಇಷ್ಟಕ್ಕೂ ಏನಾಯಿತು?
ಹೊಸಪೇಟೆ ಹೊರ ವಲಯದ ಕಾರಿಗನೂರು ಪ್ರದೇಶದ 23ವಾರ್ಡ್ ನ ಸರ್ಕಾರಿ ಶಾಲೆಯ ಆವರಣದಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್ ಆಹಾರ ಕಿಟ್ ವಿತರಿಸುತ್ತಾರೆ ಎಂಬ ಸುದ್ದಿ ಕೇಳಿದ ಜನ ಇಲ್ಲಿಗೆ ಆಗಮಿಸಿದ್ದಾರೆ. ಕೆಲವೇ ಗಂಟೆಗಳ ಅಂತರದಲ್ಲಿ ಆಹಾರ ಕಿಟ್ ಪಡೆಯಲು ನೂರಾರು ಜನ ಇಲ್ಲಿ ಸೇರಿದ್ದಾರೆ. ಕಾರಿಗನೂರು ಪ್ರದೇಶ ಮಾತ್ರವಲ್ಲದೇ ಹನ್ನೊಂದು ಕೊರೊನ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವ ಎಸ್.ಆರ್. ನಗರದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಇತ್ತು. ಎಸ್.ಆರ್. ನಗರದ ರಸ್ತೆಯಲ್ಲಿ ಕಿಲೊಮಿಟರ್ ದೂರದಷ್ಟು ರಸ್ತೆಯಲ್ಲೇ ಬಡ ಜನಗಳು ಕಾದು ಕುಳಿತಿದ್ದರು. ಎಸ್ ಆರ್ ನಗರ ಪ್ರದೇಶ ರೆಡ್ ಜೋನ್ ಹಂತ ತಲುಪಿದ್ದರೂ ಅಧಿಕಾರಿಗಳ ನಿರ್ಲಕ್ಷ ಯಾಕೆ ಎಂಬ ಪ್ರಶ್ನೆ ಮೂಡಿದೆ.
ಯಾರ ತಪ್ಪಿನಿಂದ ಇಂತದ್ದೊಂದು ಅಚಾತುರ್ಯ ನಡೆದಿದೆ..? ಹಸಿವಿನಿಂದ ಕಂಗೆಟ್ಟಿರುವ ಬಡವರ ತಪ್ಪಾ ಇದು..? ಇಲ್ಲಾ ಪರಿಸ್ಥಿತಿ ನಿಯಂತ್ರಿಸಬೇಕಾದ ಅಧಿಕಾರಿ ವರ್ಗದ ತಪ್ಪಾ ಇದು..? ಇಲ್ಲ ಹಸಿವನ್ನ ಹಿಂಗಿಸಲು ಆನಂದ್ ಸಿಂಗ್ ಅವರು ಆಹಾರದ ಕಿಟ್ ನೀಡಲು ಮುಂದಾಗಿರುವುದು ತಪ್ಪಾ...?
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ