

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾಧ್ಯಮ ಪ್ರತಿನಿಧಿಗಳಿಗೂ ಕೊವಿಡ್-19 ತಪಾಸಣಾ ಶಿಬಿರ ಏರ್ಪಡಿಸುವಂತೆ ವಾರ್ತಾ ಇಲಾಖೆಯ ಆಯುಕ್ತ ಎಸ್ ಎನ್ ಸಿದ್ದರಾಮಪ್ಪ ಅವರಿಗೆ ಆದೇಶಿಸಿದ್ದಾರೆ.
ರಾಜ್ಯದಲ್ಲಿ ಕೊವಿಡ್-19 ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಾಧ್ಯಮ ಪ್ರತಿನಿಧಿಗಳು ಕೂಡ ಸತತವಾಗು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಆರೋಗ್ಯ ತಪಾಸಣೆ ಮಾಡುವಂತೆ ಒತ್ತಾಯಿಸಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು.
ಸಚಿವರ ಪತ್ರಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಮಾಧ್ಯಮ ಪ್ರತಿನಿಧಿಗಳ ಆರೋಗ್ಯ ತಪಾಸಣೆ ಮಾಡುವಂತೆ ವಾರ್ತಾ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.
ಹೀಗಾಗಿ ಬೆಂಗಳೂರು ನಗರದಲ್ಲಿ ಸುಮಾರು 1000 ಪತ್ರಕರ್ತರು ಆರೋಗ್ಯ ತಪಾಸಣೆ ಒಳಪಡುವ ನಿರೀಕ್ಷೆ ಇದೆ. ಆರೋಗ್ಯ ತಪಾಸಣಾ ಶಿಬಿರದ ಸಂಬಂಧ ಸಮನ್ವಯ ಕಾರ್ಯವನ್ನು ಇಲಾಖೆಯ ಜಂಟಿ ನಿರ್ದೇಶಕ ಡಿಪಿ ಮುರುಳಿಧರ್ ಅವರು ಕಾರ್ಯ ನಿರ್ವಹಿಸಲಿದ್ದು, ಹೆಚ್ಚಿನ ಮಾಹಿತಿಗಾಗಿ ಅವರ ಮೊ.ಸಂಖ್ಯೆ 9480841207 ಸಂಪರ್ಕಿಸಬಹುದು ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.