ಕೋವಿದ್ 19 ವಿರುದ್ಧ ಹೋರಾಡಲು ಪ್ರತಿ ವಾರ್ಡ್ ಗೆ 20 ಲಕ್ಷ ರು. ಅನುದಾನ: ಬಿಬಿಎಂಪಿ ಮೇಯರ್

ಬಿಬಿಎಂಪಿ 2020–21ನೇ ಸಾಲಿನ ಬಜೆಟ್‌ನಲ್ಲಿ ಕೋವಿಡ್‌–19 ನಿಯಂತ್ರಣಕ್ಕೆ ಹಾಗೂ ಲಾಕ್‌ಡೌನ್‌ ವೇಳೆ ಸಂತ್ರಸ್ತರ ನೆರವಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಆದ್ಯತೆ ನೀಡದ ಬಗ್ಗೆ ಪಕ್ಷಭೇದ ಮರೆತು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. 
ಮೇಯರ್ ಗೌತಮ್ ಕುಮಾರ್ ಜೈನ್
ಮೇಯರ್ ಗೌತಮ್ ಕುಮಾರ್ ಜೈನ್

ಬೆಂಗಳೂರು: ಬಿಬಿಎಂಪಿ 2020–21ನೇ ಸಾಲಿನ ಬಜೆಟ್‌ನಲ್ಲಿ ಕೋವಿಡ್‌–19 ನಿಯಂತ್ರಣಕ್ಕೆ ಹಾಗೂ ಲಾಕ್‌ಡೌನ್‌ ವೇಳೆ ಸಂತ್ರಸ್ತರ ನೆರವಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಆದ್ಯತೆ ನೀಡದ ಬಗ್ಗೆ ಪಕ್ಷಭೇದ ಮರೆತು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. 

ಬಜೆಟ್‌ ಕುರಿತು ಚರ್ಚಿಸಲು ವಿಡಿಯೊ ಕಾನ್ಫರೆನ್ಸ್‌ ಮೂಲಕ ಬುಧವಾರ ನಡೆದ ಸಭೆಯಲ್ಲಿ, ‘ಕೋವಿಡ್‌ –19 ನಿಯಂತ್ರಣಕ್ಕೆ ಸಂಬಂಧಿಸಿ ವಾರ್ಡ್‌ ಮಟ್ಟದಲ್ಲಿ ಬಳಸುವುದಕ್ಕೆ ಅನುದಾನ ನೀಡಬೇಕು’ ಎಂದು ಎಲ್ಲ ಪಕ್ಷಗಳ ಸದಸ್ಯರು ಒತ್ತಾಯಿಸಿದರು.

ಇದಕ್ಕೆ ಮಣಿದ ಆಡಳಿತ ಪಕ್ಷ, ವಾರ್ಡ್‌ ಅಭಿವೃದ್ಧಿ ಕಾಮಗಾರಿಗಳಿಗೆ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನದಲ್ಲಿ ₹ 20 ಲಕ್ಷವನ್ನು ಕೋವಿಡ್‌ ಸಂಬಂಧಿ ಕಾರ್ಯಗಳಿಗೆ ಬಳಸಲು ಅವಕಾಶ ಕಲ್ಪಿಸುವ ಕುರಿತು ನಿರ್ಣಯ ಕೈಗೊಂಡಿತು. ‘ವಾರ್ಡ್‌ನ ಪಾಲಿಕೆ ಸದಸ್ಯರು ಸೂಚಿಸುವ ಕಾರ್ಯಕ್ರಮಗಳಿಗೆ ಹಣ ಬಿಡುಗಡೆ ಮಾಡಲು ಆಯುಕ್ತರು ಕ್ರಮಕೈಗೊಳ್ಳಬೇಕು’ ಎಂದು ಮೇಯರ್‌ ಎಂ.ಗೌತಮ್‌ ಕುಮಾರ್‌ ಸೂಚಿಸಿದ್ದಾರೆ.

ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌, ‘ಮುಖ್ಯಮಂತ್ರಿ ಪರಿಹಾರ ನಿಧಿಗೆ ₹100 ಕೋಟಿ ಬೇಕಾದರೂ ನೀಡಿ. ಆದರೆ, ವಾರ್ಡ್‌ ಅಭಿವೃದ್ಧಿ ಅನುದಾನವನ್ನು ಆಯಾ ವಾರ್ಡ್‌ನಲ್ಲೇ ಕೋವಿಡ್‌ –19 ಸಂಬಂಧಿ ಕಾರ್ಯಗಳಿಗೆ ಬಳಸಬೇಕು. ಇಲ್ಲದಿದ್ದರೆ ಈ ಸಲುವಾಗಿ ₹ 1000 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿ’ ಎಂದು ಒತ್ತಾಯಿಸಿದರು.

‘ಜನ ಈಗ ಅಭಿವೃದ್ಧಿ ಕಾಮಗಾರಿಗಳ ಬದಲು ಸಾಂಕ್ರಾಮಿಕ ಪಿಡುಗಿನ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಪೌರಕಾರ್ಮಿಕರು, ಆಶಾಕಾರ್ಯಕರ್ತೆಯರು ಹಾಗೂ ಆರೋಗ್ಯ ಅಧಿಕಾರಿಗಳ ಸುರಕ್ಷತೆ ಹಾಗೂ ಬೀದಿಗೆ ಬಿದ್ದ ಬಡವರಿಗೆ ನೆರವಾಗುವುದೇ ಈಗಿನ ತುರ್ತು’ ಎಂದು ನೆನಪಿಸಿದರು.

ಮಾಜಿ ಮೇಯರ್ ಆರ್‌.ಸಂಪತ್‌ರಾಜ್‌, ‘ಕೋವಿಡ್‌ ನಿಯಂತ್ರಣದ ಕೆಲಸಗಳನ್ನು ಸರ್ಕಾರವೇ ಮಾಡಲಿ ಎಂದು ಕೈಕಟ್ಟಿ ಕುಳಿತುಕೊಳ್ಳುವುದು ಸರಿಯಲ್ಲ. ಕೋವಿಡ್‌ ತಪಾಸಣೆಗೆ ಒಳಪಡಿಸುವ ಕಿಟ್‌ ಖರೀದಿಸಿ. ಮನೆ ಮನೆಗೆ ಮಾಸ್ಕ್‌, ಸ್ಯಾನಿಟೈಸರ್‌ ಪೂರೈಸಿ. ವೈದ್ಯರಿಗೆ, ಆರೋಗ್ಯ ಸಿಬ್ಬಂದಿಗೆ ವೈಯಕ್ತಿಕ ಸುರಕ್ಷತಾ ಸಾಧನಗಳ (ಪಿಪಿಇ) ಕಿಟ್‌ ಖರೀದಿಸಿ.  
ಮುಂಬೈನಲ್ಲಿ ಪೌರಕಾರ್ಮಿಕರಲ್ಲೂ ಈ ಸೋಂಕು ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲೂ ಎಚ್ಚೆತ್ತುಕೊಳ್ಳಿ‘ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com