ಕೇಂದ್ರದಿಂದ ರಾಜ್ಯಕ್ಕೆ ಉಚಿತವಾಗಿ ಬರುವ ಅಕ್ಕಿ ಕಾಳಸಂತೆಯಲ್ಲಿ ಮಾರಾಟ: ಡಿಕೆಶಿ ಆರೋಪ

 ಕೊರೊನಾ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಉಚಿತವಾಗಿ ಬರುವ ಅಕ್ಕಿಯನ್ನು ತಮಿಳುನಾಡು ಪಾಲಾಗುತ್ತಿದ್ದು, ಹರಿಯಾಣದಿಂದ ಬಂದ ಅಕ್ಕಿಯನ್ನು‌ ಕಾಳಸಂತೆಯಲ್ಲಿ ಮಾರಿಕೊಳ್ಳಲಾಗಿದೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಂಗಳೂರು: ಕೊರೊನಾ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಉಚಿತವಾಗಿ ಬರುವ ಅಕ್ಕಿಯನ್ನು ತಮಿಳುನಾಡು ಪಾಲಾಗುತ್ತಿದ್ದು, ಹರಿಯಾಣದಿಂದ ಬಂದ ಅಕ್ಕಿಯನ್ನು‌ ಕಾಳಸಂತೆಯಲ್ಲಿ ಮಾರಿಕೊಳ್ಳಲಾಗಿದೆ. 1829 ಕ್ವಿಂಟಾಲ್ ಅಕ್ಕಿ ಅಕ್ರಮವಾಗಿ ಮಾರಾಟವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. 

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಕಿ ಗೋಲ್‌ಮಾಲ್ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿದೆಯೇ ಇಲ್ಲವೋ ಎಂಬುದು ತಿಳಿದಿಲ್ಲ. ಆದರೂ ಮುಖ್ಯಮಂತ್ರಿಗಳ ಗಮನಕ್ಕೆ ನಾವು ಇದನ್ನು ತರಬೇಕಿದೆ. ಆಹಾರ ನಿರೀಕ್ಷಕರಿಗೆ ಒಂದು ಲೋಡ್ ಅಕ್ಕಿ ಕಳಿಸಲಾಗಿದೆ. ಅಕ್ಕಿಯ ಭ್ರಷ್ಟಾಚಾರದ ಬಗ್ಗೆ ಆಗಲೇ ಸುಳಿವು ಕೊಟ್ಟಿದ್ದೆ.
ತಮಿಳುನಾಡು ಗಡಿಗೆ ಸಾಗಿಸಲಾಗಿದೆ. ಇದನ್ನು ಬಿಜೆಪಿಯ ಸಕ್ರಿಯ ನಾಯಕರೇ ವ್ಯಾಪಾರ ಮಾಡಿದ್ದಾರೆ. ತಮಿಳುನಾಡಿನ ಹೊಸೂರು ವ್ಯಾಪಾರಿಗೆ ಮಾರಿದ್ದಾರೆ ಎಂದರು.


ಅಕ್ಕಿ ದಾಸ್ತಾನು ಮಾಡಿದವರ ರಕ್ಷಣೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೋಗಬಾರದು. ಒಂದು ವೇಳೆ ಹೋಗಿದ್ದೇ ಆದಲ್ಲಿ ಅದು ಮುಖ್ಯಮಂತ್ರಿಗಳ ಕುತ್ತಿಗೆಗೆ ಕುತ್ತು ತರುತ್ತದೆ ಎಂದು ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ಎಚ್ಚರಿಸಿದರು.

ಆಹಾರ ಕಾಯಿದೆಗೆ ಒಂದು ನಿಯಮ ಇದೆ. ಕಾನೂನು ಬಾಹಿರವಾಗಿ ಅಕ್ಕಿ ದಾಸ್ತಾನು ಮಾಡಿದವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಮಂತ್ರಿಯೋರ್ವರ ಕೈವಾಡ ಇದೆ ಎಂದು ಆರೋಪಿಸಿದರಾದರೂ ಮಂತ್ರಿಯ ಹೆಸರನ್ನು ಅವರು ಬಹಿರಂಗಪಡಿಸದೇ ಈಗ ರಾಜಕೀಯ ಬೇಡ ಎಂದು ಸೂಚ್ಯವಾಗಿ ಹೇಳಿದರು.

ಸರ್ಕಾರಕ್ಕೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಿದೆ. ಕೊರೊನಾ ಸೋಂಕು ತಡೆಗೆ ಬೆಂಬಲ ನೀಡುತ್ತೇವೆ. ಸರ್ಕಾರಗಳ ಪಾರದರ್ಶಕ ಎಲ್ಲಾ ಕೆಲಸಕ್ಕೆ ಸಹಕಾರವಿದೆ. ಮುಖ್ಯಮಂತ್ರಿಗಳು ತಮ್ಮ ಇತಿಮಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಕಾರ್ಯಕ್ರಮಗಳ ಅನುಷ್ಠಾನ ಮಾಡುವ ವೇಳೆ ಭ್ರಷ್ಟಾಚಾರ ನಡೆಯುತ್ತಿದೆ. ತಹಶೀಲ್ದಾರ್ ಕೂಡ ಅಕ್ಕಿ
ಭ್ರಷ್ಟಾಚಾರದ ಬಗ್ಗೆ ತಮಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ. ಗೋಡೌನ್ ನಲ್ಲಿಟ್ಟಿರುವ ಅಕ್ಕಿ ಗೊತ್ತಿಲ್ಲ ಎನ್ನುತ್ತಿದ್ದಾರೆ. ಗೋಡೌನ್ ನಲ್ಲಿ ಶೇಖರಿಸಿಟ್ಟು ಅಕ್ಕಿ ಮಾರಿದ್ದಾರೆ ಎಂದು ಅಕ್ಕಿ ಅಕ್ರಮ ವ್ಯಾಪಾರದ ಚಿತ್ರವನ್ನು ಶಿವಕುಮಾರ್ ಬಿಡುಗಡೆ ಮಾಡಿದರು
.
ಸರ್ಕಾರ ನಿರ್ದಾಕ್ಷಿಣ್ಯವಾಗಿ ಇಂತವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ದಾಖಲೆ ಸಮೇತ ನಾವು ಪತ್ತೆ ಹಚ್ಚಿದ್ದೇವೆ. ಹರಿಯಾಣದ ಅಕ್ಕಿಯನ್ನು ನಾವು ಸೀಜ್ ಮಾಡಿಸಿದ್ದೇವೆ. ಸರ್ಜಾಪುರದ ಗೋಡೌನ್ ನಲ್ಲಿ ಅಕ್ಕಿ ಸಂಗ್ರಹಿಸಿದ್ದಾರೆ. ಸಂಗ್ರಹ ಮಾಡಬೇಕಾದರೆ ತಹಶೀಲ್ದಾರ್ ಅನುಮತಿ ಬೇಕು. ಈಗ ತಹಶೀಲ್ದಾರ್ ಗೆ ಧಮ್ಕಿ ಹಾಕುತ್ತಿದ್ದಾರೆ. ಅಕ್ಕಿ
ಶೇಖರಿಸಿಟ್ಟಿದ್ದ ಉಗ್ರಾಣ ಬಿಜೆಪಿ ಮುಖಂಡ ಬುಲೆಟ್ ಬಾಬುಗೆ ಸೇರಿದ್ದಾಗಿದೆ ಎಂದು ಬಹಿರಂಗಪಡಿಸಿದರು.ಇದು ಸರ್ಕಾರದ ಸ್ವತ್ತಾಗಿದ್ದರೆ ಅದನ್ನು ಡಿಕ್ಲೇರ್ ಮಾಡಿಕೊಳ್ಳಬೇಕು. ಆದರೆ ಯಾವುದೇ ಅನುಮತಿಯಿಲ್ಲದೆ ಆಹಾರ ಶೇಖರಿಸಿಡಲಾಗಿದೆ. ಇದನ್ನು ತಮ್ಮ ಕಾಂಗ್ರೆಸ್ ಕಾರ್ಯಕರ್ತರು ಸಾಕ್ಷಿಸಹಿತ ಪತ್ತೆ ಹಚ್ಚಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಸರ್ಕಾರ ಆಹಾರ ಕಾಯಿದೆ ಪ್ರಕಾರ ಇದರ ಬಗ್ಗೆ ಕಠಿಣ ಕ್ರಮತೆಗೆದುಕೊಳ್ಳಬೇಕು. ಬಿಜೆಪಿ ಮುಖಂಡನನ್ನು ಬಂಧಿಸಬೇಕು. ಪ್ರತಿಯೊಂದು ಜಿಲ್ಲೆಯಲ್ಲಿಯೂ ಇದೇ ರೀತಿ ಅಕ್ರಮ ವ್ಯಾಪಾರವಾಗುತ್ತಿದೆ. ಅಕ್ಕಿಯನ್ನು ಪಾಲಿಶ್ ಮಾಡಿ ಕಾಳಸಂತೆಯಲ್ಲಿ ಕೆಜಿಗೆ 30-40 ರೂ. ನಂತೆ ಅಕ್ಕಿ ಮಾರಾಟ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು‌.


ಬ್ಯಾಂಕುಗಳು ಸಹ ಗ್ರಾಹಕರಿಗೆ ವಂಚನೆ ಮಾಡುತ್ತಿವೆ. ಕೈಗಾರಿಕೋದ್ಯಮಿ ಗಳಿಗೆ ಅಕೌಂಟ್ ಇರುವವರಿಗೆ ವಂಚನೆ ಮಾಡಿ, ಆರ್ ಬಿಐ ನಿಯಮಗಳನ್ನು ಬ್ಯಾಂಕುಗಳು ಉಲ್ಲಂಘಿಸುತ್ತಿವೆ. ಗ್ರಾಹಕರು,ವ್ಯಾಪಾರಿಗಳು,ವಾಣಿಜ್ಯೋದ್ಯಮಿಗಳನ್ನ ವಂಚಿಸುತ್ತಿವೆ ಮೂರು ತಿಂಗಳು ಯಾವುದೇ ಬಲವಂತ ಮಾಡುವಂತಿಲ್ಲ. ಆದರೆ ಈಗಲೇ ಗ್ರಾಹಕರ ಮೇಲೆ
ಒತ್ತಡ ಏರುತ್ತಿವೆ. ಎಲ್ಲಾ ಬ್ಯಾಂಕುಗಳು ಆರ್ ಬಿ ಐ ಕಾನೂನು ಕಡೆಗಣಿಸಿವೆ ಎಂದು ಆಕ್ರೋಶಿಸಿದರು.

ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರಿಗೆ ತಿರುಗೇಟು ನೀಡಿದ ಶಿವಕುಮಾರ್, ಐಟಿಬಿಟಿ ಬಗ್ಗೆ ಮಾತನಾಡಲು ಸಾಕಷ್ಟು ಇದೆ. ಪರಪ್ಪನ ಅಗ್ರಹಾರ ಖಾಲಿ ಇಲ್ಲ ಅಂದರೆ ಅವರು ಬೇಕಾದರೆ ಮನೆಯಲ್ಲಿಯೇ ಇಟ್ಟುಕೊಳ್ಳಲಿ. ಇಲ್ಲವೇ ಅವರ ಕ್ಷೇತ್ರ ಮಲ್ಲೇಶ್ವರಂಗಾದರೂ ಹಾಕಿಕೊಳ್ಳಲಿ. ನಮ್ಮಲ್ಲಿ ಏಕೆ ಅವರನ್ನು ಇಡಬೇಕು. ಅದೇನು ನಮ್ಮ‌ ಮೇಲೆ ಕೋಪ
ಇದೆಯೋ ಗೊತ್ತಿಲ್ಲ.

ರಾಮನಗರ ಗ್ರೀನ್ ಝೋನ್ ಇತ್ತು. ಗ್ರೀನ್ ಝೋನ್ ಪ್ರದೇಶಕ್ಕೆ ಪಾದರಾಯನಪುರದ ಜನರನ್ನು ತಂದಿರಿಸಿರುವುದು ಏಕೆ?. ನಮ್ಮ ಜಿಲ್ಲೆಯ ಜನ ಇಡೀ ರಾತ್ರಿ ನಿದ್ದೆ ಮಾಡಲು ಬಿಡದೆ ಖಾಲಿ ಮಾಡಿಸಿ ಖಾಲಿ ಮಾಡಿಸಿ ಅಣ್ಣ ಎಂದು ಒಂದೇ ಸಮನೆ ಒತ್ತಡ ಹೇರುತ್ತಿದ್ದಾರೆ ಎಂದರು.

ಕುಮಾರಸ್ವಾಮಿ ಬಗ್ಗೆ ಮೃಧುಭಾವ ತೋರಿದ ಶಿವಕುಮಾರ್, ಅವರೊಬ್ಬ "ವೆಲ್ ಸೆನ್ಸಿಬಲ್ ಮ್ಯಾನ್". ಅವರಿಗೆ ರಾಜಕೀಯ ಅನುಭವ ಇದೆ. ಕುಮಾರಸ್ವಾಮಿ ಮಗನ ಮದುವೆ ಮಾಡಿದ್ದು ತಪ್ಪು ಎಂದು ಬಿಜೆಪಿಗರು ಹೇಳಿದ್ದರಾದರೂ ಯಡಿಯೂರಪ್ಪ ತಪ್ಪಿಲ್ಲ ಎಂದಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸಂಸದ ಡಿ.ಕೆ.ಸುರೇಶ್,ಮಾಜಿ ಸಂಸದ ಉಗ್ರಪ್ಪ,
ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಉಪಸ್ಥಿತರಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com