ಬೆಂಗಳೂರು: ಅವೈಜ್ಞಾನಿಕ ಲಾಕ್ ಡೌನ್ ಜಾರಿ ಮಾಡಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಬರೆ ಎಳೆದಿದ್ದ ಸರ್ಕಾರ, ಇದೀಗ ನೆರವು ನೀಡುವುದಾಗಿ ನಂಬಿಸಿ ಲಕ್ಷಾಂತರ ಚಾಲಕರನ್ನು ನಡು ನೀರಿನಲ್ಲಿ ಕೈಬಿಟ್ಟಿದೆ.
ಸೇವಾ ಸಿಂಧು ಪೋರ್ಟಲ್ ಮೂಲಕ ಚಾಲಕರಿಗೆ 5 ಸಾವಿರ ರೂ. ಹಣ ನೀಡುವ ಯೋಜನೆಯನ್ನು ಅರ್ಧಕ್ಕೆ ಕೈಬಿಟ್ಟಿದೆ. ಸೇವಾಸಿಂಧು ಆಪ್ ನ ಮೂಲಕ ಒಟ್ಟು 2 ಲಕ್ಷ 37 ಸಾವಿರದ 313 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ ತಿರಸ್ಕತಗೊಂಡ ಅರ್ಜಿಗಳ ಸಂಖ್ಯೆ 937. ಸೇವಾಸಿಂಧುವಿನಲ್ಲಿ ಅರ್ಜಿ ಸಲ್ಲಿಕೆಯಾದರೂ ಹಣ ಬಿಡುಗಡೆ ಮಾಡದೆ ಸರ್ಕಾರ ಚಾಲಕ ವಿರೋಧಿ ಧೋರಣೆ ಎಸಗುತ್ತಿದೆ ಎಂದು ಇಂಡಿಯನ್ ವೆಹಿಕಲ್ಸ್ ಡ್ರೈವರ್ಸ್ ಟ್ರೇಡ್ ಯೂನಿಯನ್ನ ಅಧ್ಯಕ್ಷ ಗಂಡಸಿ ಸದಾನಂದ್ ಅವರು ಆರೋಪಿಸಿದ್ದಾರೆ.
ರಾಜ್ಯದಲ್ಲಿ 2.34 ಲಕ್ಷ ಆಟೋಚಾಲಕರು, 4.33ಲಕ್ಷ ಟ್ಯಾಕ್ಸಿ ಚಾಲಕರಿದ್ದಾರೆ. ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ತಲಾ ಐದು ಸಾವಿರ ರೂ ಪರಿಹಾರ ನೀಡುವುದಾಗಿ ಘೋಷಿಸಿ 3 ತಿಂಗಳು ಕಳೆದಿವೆ. ಚಾಲಕರಿಗೆ ಛಾರ್ಸಿ ನಂಬರ್, ಆಧಾರ್, ಪ್ಯಾನ್ ಎಂದು ಸಬೂಗಳನ್ನು ಹೇಳಿ ಕಾಲಹರಣ ಮಾಡುವ ಮೂಲಕ ಹಲವು ದಿನ ಚಾಲಕರನ್ನು ಸರ್ಕಾರ ಗೊಂದಲದಲ್ಲಿ ಸಿಲುಕಿಸಿತ್ತು. ಇವರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಇದೀಗ ರಾಜ್ಯ ಸರ್ಕಾರ ಸೇವಾಸಿಂಧು ಆಪ್ ಮೂಲಕ ಚಾಲಕರು ಅರ್ಜಿಸಲ್ಲಿಸುವ ಕಾಲಂನ್ನು ಅಳಿಸುವ ಮೂಲಕ ಚಾಲಕರಿಗೆ ದ್ರೋಹ ಬಗೆದಿದೆ ಎಂದು ಹೇಳಿದರು.
ಒಟ್ಟು 387 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಬೇಕಾಗಿತ್ತು. ಕೇವಲ 60 ಕೋಟಿ ಹಣವನ್ನು ಬಿಡುಗಡೆ ಮಾಡಿ ಚಾಲಕ ಸಮುದಾಯಕ್ಕೆ ಬಹುದೊಡ್ಡ ಅನ್ಯಾಯ ಎಸಗಿದೆ. ಕೂಡಲೇ ಸರ್ಕಾರ ಸೇವಾಸಿಂಧು ಮೂಲಕ ಅರ್ಜಿಸಲ್ಲಿಸಿರುವ ಚಾಲಕರಿಗೆ ಹಣ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿ ಉಗ್ರ ಪ್ರತಿಭಟನೆ ಮಾಡವುದಾಗಿ ಎಚ್ಚರಿಕೆ ನೀಡಿದರು. ಇಷ್ಟೆಲ್ಲಾ ಆದರೂ ಸಹ ಇತ್ತೀಚೆಗಷ್ಠೇ ಸರ್ಕಾರ ಒಂದು ವಾರ ಲಾಕ್ಡಾನ್ ಮಾಡಿ ಮತ್ತೆ ಚಾಲಕರ ಹೊಟ್ಟೆಯ ಮೇಲೆ ಬರೆ ಎಳೆದಿದೆ. ಅದರ ಜೊತೆಗೆ ಕ್ಯಾಬ್ ಚಾಲಕರಿಗೆ ಟ್ರಿಪ್ಗಳು ಸಿಗದೆ, ದುಡಿಯಲು ಸಾಧ್ಯವಾಗದ ಪರಿಸ್ಥಿತಿಯಿದೆ. ಎಷ್ಟೋ ಚಾಲಕರು ಬೆಂಗಳೂರು ನಗರ ತೊರೆದು ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಖಂಡನೀಯ ಎಂದು ಹೇಳಿದರು.
ಕೂಡಲೇ ಚಾಲರಿಗೆ ಅರ್ಜಿಸಲ್ಲಿಸಲು ಅವಕಾಶ ಮಾಡಿಕೊಡಿ. ಜತೆಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಚಾಲಕರಿಗೆ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
Advertisement