ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ ಕ್ವಾರಂಟೈನ್, ತಪಾಸಣೆ ಇಲ್ಲ: ರಾಜ್ಯ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ

ಮಾರಕ ಕೊರೋನಾ ವೈರಸ್ ನಿರ್ವಹಣೆ ನಿಮಿತ್ತ ರಾಜ್ಯ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ ಕ್ವಾರಂಟೈನ್, ತಪಾಸಣೆ ಇಲ್ಲ ಎಂದು ಹೇಳಿದೆ,
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಾರಕ ಕೊರೋನಾ ವೈರಸ್ ನಿರ್ವಹಣೆ ನಿಮಿತ್ತ ರಾಜ್ಯ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ ಕ್ವಾರಂಟೈನ್, ತಪಾಸಣೆ ಇಲ್ಲ ಎಂದು ಹೇಳಿದೆ,

ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪರಿಷ್ಕೃತ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಅಂತರ್ ರಾಜ್ಯ ಪ್ರಯಾಣಕ್ಕೆ ಸಂಬಂಧಿಸಿದ ಹಿಂದಿನ ಎಲ್ಲ ಸುತ್ತೋಲೆಗಳನ್ನೂ ರದ್ದುಗೊಳಿಸಿರುವುದಾಗಿ ಹೇಳಿದೆ. ಇತರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ 14 ದಿನಗಳ ಕ್ವಾರಂಟೈನ್‌, ಕೈಗಳ  ಮೇಲೆ ಮುದ್ರೆ ಹಾಕುವುದು, ರಾಜ್ಯದ ಗಡಿಗಳು ಹಾಗೂ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ವೈದ್ಯಕೀಯ ತಪಾಸಣೆ, ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡುವುದು ಸೇರಿದಂತೆ ಹಿಂದಿನ ಸುತ್ತೋಲೆಗಳನ್ನು ರದ್ದುಗೊಳಿಸಿರುವುದಾಗಿ ಸರ್ಕಾರ ತಿಳಿಸಿದೆ. 

ಹೊರ ರಾಜ್ಯದಿಂದ ಬಂದ ಪ್ರಯಾಣಿಕರು ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೆ, ಕ್ವಾರಂಟೈನ್‌ಗೆ ಒಳಗಾಗುವ ಅಗತ್ಯವಿರುವುದಿಲ್ಲ ಹಾಗೂ ನೇರವಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದು ಎಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ಪ್ರಕಟಿಸಲಾಗಿದೆ. ಇದೇ ವೇಳೆ ಹೊರ ರಾಜ್ಯಗಳಿಂದ ಬಂದವರು ರೋಗ  ಲಕ್ಷಣಗಳ ಕಡೆಗೆ ಸ್ವಯಂ ನಿಗಾವಹಿಸುವುದು ಹಾಗೂ ಕೆಮ್ಮು, ಜ್ವರ, ಶೀತ, ಉಸಿರಾಟ ತೊಂದರೆಯಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ವೈದ್ಯಕೀಯ ಸಮಾಲೋಚನೆ ಪಡೆಯಲು ಸೂಚಿಸಲಾಗಿದೆ. ರಾಜ್ಯಕ್ಕೆ ಬರುವಾಗಲೇ ರೋಗ ಲಕ್ಷಣಗಳಿದ್ದರೆ ತಾವಾಗಿಯೇ ಪ್ರತ್ಯೇಕವಾಗಿ ವಾಸಿಸಬೇಕು ಮತ್ತು  ವೈದ್ಯಕೀಯ ಸಮಾಲೋಚನೆ ಪಡೆಯಬೇಕು. ಆಪ್ತಮಿತ್ರ ಸಹಾಯವಾಣಿಗೆ (14410) ಕರೆ ಮಾಡಬಹುದು. 

ಇದಲ್ಲದೆ ಕೋವಿಡ್‌ ತಡೆಗಟ್ಟಲು ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಹಾಗೂ ಆಗಾಗ್ಗೆ ಸೋಪಿನಲ್ಲಿ ಕೈತೊಳೆಯುವುದನ್ನು ಮಾಡುವಂತೆ ಸೂಚಿಸಲಾಗಿದೆ. ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಇತ್ತೀಚೆಗೆ ಅನ್‌ಲಾಕ್‌–3ಗಾಗಿ ಹೊರಡಿಸಲಾದ ಮಾರ್ಗಸೂಚಿಗಳ ಅನ್ವಯ ಅಂತರ್ ರಾಜ್ಯ  ಚಾಲನೆಗೆ ವ್ಯಕ್ತಿ ಮತ್ತು ಸರಕುಗಳ ಸಾಗಣೆಯಲ್ಲಿ ಯಾವುದೇ ನಿರ್ಬಂಧಗಳಿರುವುದಿಲ್ಲ. ಹಾಗಾಗಿ, ರಾಜ್ಯ ಸರ್ಕಾರ ಮಾರ್ಗ ಸೂಚಿ ಪರಿಷ್ಕರಿಸಿದೆ. ರಾಜ್ಯಕ್ಕೆ ಬರುವ ವಿದ್ಯಾರ್ಥಿಗಳು, ಕಾರ್ಮಿಕರು, ವಾಪ್ಯಾರಿಗಳು, ಸಾರಿಗೆ ಮಧ್ಯಂತರ ಪ್ರಯಾಣಿಕರು ಎಲ್ಲರಿಗೂ ಪರಿಷ್ಕೃತ ಮಾರ್ಗಸೂಚಿ ಅನ್ವಯಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com