ಪ್ರಧಾನಿಯ ಮನ್ ಕಿ ಬಾತ್ ನಲ್ಲಿ ಶ್ವಾನದ ಕುರಿತು ಹೊಗಳಿಕೆ: ದೇಶಿ ವಸ್ತುಗಳ ಆದ್ಯತಾ ಪಟ್ಟಿಗೆ ಸೇರಿದ ಮುಧೋಳ ನಾಯಿ

ಕವಿಚಕ್ರವರ್ತಿ ರನ್ನನ ಊರು ಮುಧೋಳ ಮತ್ತೊಮ್ಮೆ ರಾಷ್ಟೀಯ ಮಟ್ಟದಲ್ಲಿ ಮತ್ತೊಮ್ಮೆ ಭಾರಿ ಸದ್ದು ಮಾಡಿದೆ. ಆತ್ಮ ನಿರ್ಭರ ಭಾರತ ನಿರ್ಮಾಣದಲ್ಲಿ ಮುಧೋಳ ದೇಶಿ ತಳಿ ನಾಯಿ ಪ್ರಾಮುಖ್ಯತೆಯನ್ನು ಸಾರಿ ಹೇಳಿದ್ದಾರೆ.
ಮುಧೋಳ ನಾಯಿ
ಮುಧೋಳ ನಾಯಿ

ಬಾಗಲಕೋಟೆ: ಕವಿಚಕ್ರವರ್ತಿ ರನ್ನನ ಊರು ಮುಧೋಳ ಮತ್ತೊಮ್ಮೆ ರಾಷ್ಟೀಯ ಮಟ್ಟದಲ್ಲಿ ಮತ್ತೊಮ್ಮೆ ಭಾರಿ ಸದ್ದು ಮಾಡಿದೆ. ಆತ್ಮ ನಿರ್ಭರ ಭಾರತ ನಿರ್ಮಾಣದಲ್ಲಿ ಮುಧೋಳ ದೇಶಿ ತಳಿ ನಾಯಿ ಪ್ರಾಮುಖ್ಯತೆಯನ್ನು ಸಾರಿ ಹೇಳಿದ್ದಾರೆ.

ಭಾರತೀಯ ಸೇನೆ ಸೇರುವ ಮೂಲಕ ತನ್ನನ್ನು ರಾಷ್ಟ್ರ ಸೇವೆಗೆ ಸಮರ್ಪಿಸಿಕೊಂಡಿರುವ ಮುಧೋಳ ತಳಿ ನಾಯಿಯ ವೈಶಿಷ್ಟ್ಯತೆ ಪ್ರಧಾನಿ ನರೇಂದ್ರ ಮೋದಿ ಅವರ ಮನ್‌ಕಿ ಬಾತ್‌ನಲ್ಲಿ ಪ್ರಸ್ತಾಪಗೊಳ್ಳುವ ಮೂಲಕ ರಾಷ್ಟ್ರ ಮಟ್ಟದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿದೆ. 

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ಮುಧೋಳ ನಾಯಿಯ ಪ್ರಾಮುಖ್ಯತೆಯನ್ನು ಸಾರಿದ್ದಾರೆ. ಕೊಪ್ಪಳ ಜಿಲ್ಲೆಯ ಕಿನ್ನಾಳ ಆಟಿಕೆಗಳ ವಸ್ತುಗಳ ನಿರ್ಮಾಣದ ಜತೆಗೆ ಭಾರತೀಯರು ಮುಂದೆ ನಾಯಿಗಳನ್ನು ಸಾಕುವುದಾದಲ್ಲಿ ಮುಧೋಳ ದೇಶಿ ತಳಿ ನಾಯಿಗಳನ್ನೇ ಸಾಕಿ ಎಂದು ಹೇಳಿರುವುದು ಕನ್ನಡಿಗರ ಪಾಲಿಗೆ ಅಭಿಮಾನದ ಸಂಗತಿಯೇ ಸರಿ.

ಮುಧೋಳ ನಾಯಿಯ ದೈಹಿಕ ಮಾಟ ಮತ್ತು ಅದರ ಚಾಕಚಕ್ಯತೆಯನ್ನು ಅರಿತು ಭಾರತೀಯ ಸೇನೆಯಲ್ಲಿ ಅದರ ಸೇವೆ ಪಡೆದುಕೊಳ್ಳಲು ಸೇನಾ ಪಡೆ 20 ಮುಧೋಳ ತಳಿ ನಾಯಿಗಳನ್ನು ಪಡೆದು ಸೇನಾ ತರಬೇತಿ ನೀಡುತ್ತಿದೆ. ಇಂತಹ ಸನ್ನಿವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾವಲಂಬಿ ಭಾರತ ನಿರ್ಮಾಣ ಹಿನ್ನೆಲೆಯಲ್ಲಿ ಶ್ವಾನ ಪ್ರೀಯರು ಇನ್ನು ಮುಂದೆ ದೇಶಿ ತಳಿಗಳ ಸಾಕಣೆ ವೇಳೆ ಮುಧೋಳ ತಳಿ ಸಾಕಣೆಗೂ ಆದ್ಯತೆ ನೀಡಿ ಎಂದು ಹೇಳಿರುವುದು ಅದರ ಜನಪ್ರೀಯತೆ ಇನ್ನಷ್ಟು ಹೆಚ್ಚಳವಾಗಲು ಕಾರಣವಾಗಲಿದೆ.

ತೆಳ್ಳನೆಯ ಶರೀರ ಹಾಗೂ ಉದ್ದನೆಯ ಮೈಮಾಟ ಹೊಂದಿರುವ ಮುಧೋಳ ತಳಿ ನಾಯಿ ಓಟದಲ್ಲಿ ಬಲು ಮುಂದು. ಈ ತಳಿ ಕ್ರಿ.ಪೂರ್ವ ೫೦೦೦ ವರ್ಷಗಳಿಗೂ ಪೂರ್ವದಿಂದ ಇತ್ತು ಎಂದು ಹೇಳಲಾಗುತ್ತಿದೆ. ೧೯ ನೇ ಶತಮಾನದಲ್ಲಿ ಮುಧೋಳದ ಮಹಾರಾಜರು ಈ ತಳಿ ಸಾಕಣೆ ಮತ್ತು ಸಂವರ್ಧನೆ ಆದ್ಯತೆ ನೀಡಿದ ಪರಿಣಾಮ ಇಂದಿಗೂ ಇದು ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಇಂದಿಗೂ ಜನಸಾಮಾನ್ಯರು ಮುಧೋಳ ನಾಯಿ ಸಾಕಣೆಗೆ ಆದ್ಯತೆ ನೀಡುತ್ತಾರೆ. ಈ ತಳಿಯನ್ನು ಉಳಿಸಿಕೊಂಡು ಹೋಗಬೇಕು ಎನ್ನುವ ಕಾರಣಕ್ಕಾಗಿಯೇ ರಾಜ್ಯ ಸರ್ಕಾರ ಮುಧೋಳ ತಾಲೂಕು ತಿಮ್ಮಾಪುರ ಬಳಿ ಮುಧೋಳ ನಾಯಿ ತಳಿ ಸಾಕಣೆ ಹಾಗೂ ಸಂವರ್ಧನೆ ಕೇಂದ್ರವನ್ನು ಆರಂಭಿಸಿದೆ. ಜತೆಗೆ ಸುತ್ತಲಿನ ಗ್ರಾಮಗಳಲ್ಲಿ ರೈತರು ತಳಿ ಸಂವರ್ಧನೆ ಮಾಡುತ್ತಿದ್ದಾರೆ. ಈ ತಳಿಗೆ ಉತ್ತಮ ಬೇಡಿಕೆ ಕೂಡ ಇದೆ.
 
ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನಪ್ರೀಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಈ ತಳಿಯ ಬಗ್ಗೆ ಪ್ರಸ್ತಾಪಿಸಿ ಸ್ವಾವಲಂಬಿ ಭಾರತ ನಿರ್ಮಾಣಕ್ಕಾಗಿ ಮುಧೋಳ ತಳಿ ನಾಯಿ ಸಾಕಣೆಗೆ ಆದ್ಯತೆ ನೀಡಿ ಎಂದು ಹೇಳಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ದೇಶದಾದ್ಯಂತ ಈ ತಳಿ ಸಾಕಷ್ಟು ಬೇಡಿಕೆ ಪಡೆದುಕೊಳ್ಳುವ ನಿರೀಕ್ಷೆಗಳು ಹೆಚ್ಚಾಗಿವೆ.

ರಾಜ್ಯ ಸರ್ಕಾರ ಕೂಡ ಪ್ರಧಾನಿಗಳ ಮಹತ್ವಾಕಾಂಕ್ಷಿಯ ಆತ್ಮ ನಿರ್ಭರ ಭಾರತದ ಪರಿಕ್ಷಲ್ಪನೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಧೋಳ ತಳಿ ರಕ್ಷಣೆ ಮತ್ತು ಸಂವರ್ಧನೆಗಾಗಿ ಹೆಚ್ಚಿನ ಒತ್ತು ಕೊಡಬೇಕಿದೆ. ಆ ಮೂಲಕ ರಾಜ್ಯದಲ್ಲಿನ ಈ ತಳಿಗೆ ದೇಶದಾದ್ಯಂತ ಉತ್ತಮ ಮಾರುಕಟ್ಟೆ ಕಲ್ಪಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ವಹಿಸಬೇಕಿದೆ.

ಸುದೈವವಶಾತ್ ಮುಧೋಳ ಮೀಸಲು ವಿಧಾನ ಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಗೋವಿಂದ ಕಾರಜೋಳರು ಪ್ರಭಾವಿ ಉಪಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ. ತಮ್ಮ ಕ್ಷೇತ್ರದಲ್ಲಿನ ಮುಧೋಳ ತಳಿ ನಾಯಿಯ ವೈಶಿಷ್ಟö್ಯತೆಯನ್ನು ಇನ್ನಷ್ಟು ಮತ್ತಷ್ಟು ಪ್ರಚುರ ಪಡಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಎಷ್ಟೆಲ್ಲ ನೆರವು ಪಡೆಯಲು ಸಾಧ್ಯವೋ ಅಷ್ಟೆಲ್ಲ ನೆರವನ್ನು ತಂದು ಈಗಾಗಲೇ ಈ ತಳಿ ಸಂವರ್ಧನೆಯಲ್ಲಿ ತೊಡಗಿರುವವರಿಗೆ ಹಾಗೂ ತಳಿ ಸಂವರ್ಧನೆಯನ್ನು ಪ್ರೋತ್ಸಾಹಿಸಲು ಮುಂದಾಗಬೇಕಿದೆ.

ಸ್ವಾವಲಂಬಿ ಭಾರತ ನಿರ್ಮಾಣಕ್ಕಾಗಿ ಪ್ರಧಾನಿಗಳ ಆಶಯದಂತೆ ದೇಶಿ ತಳಿಯಾಗಿರುವ ಮುಧೋಳ ತಳಿ ಶ್ವಾನಗಳಿಗೆ ಬಹುದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಲು ಸಾಧ್ಯವಾದಷ್ಟು ಜನಪ್ರಿಯ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ರೂಪಿಸುವ ಮೂಲಕ ಹೆಮ್ಮೆಯ ಮುಧೋಳ ತಳಿ ನಾಯಿಗೆ ಬಹುದೊಡ್ಡ ಮಾರುಕಟ್ಟೆ ಕಲ್ಪಿಸಲು ಹೆಚ್ಚಿನ ಒತ್ತು ಕೊಡುವ ಕೆಲಸ ಆಗಬೇಕಿದೆ.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com