
ತಲಕಾಡು: ಐತಿಹಾಸಿಕ ಪಂಚಲಿಂಗ ದರ್ಶನ ಉತ್ಸವಕ್ಕೆ ಸೋಮವಾರ ಸಚಿವ ಎಸ್ ಟಿ ಸೋಮಶೇಖರ್ ಚಾಲನೆ ನೀಡಿದರು.
ಸೋಮವಾರದ ಕುಹುಯೋಗ ಜ್ಯೇಷ್ಠ ನಕ್ಷತ್ರದಲ್ಲಿ ಮುಂಜಾನೆ 4.30ರ ವೇಳೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಪಂಚಲಿಂಗ ದರ್ಶನ ಮಹೋತ್ಸವದ ಮಹಾಪೂಜೆ, ಮಾಹಾಭಿಷೇಕವು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಸಮ್ಮುಖದಲ್ಲಿ ನೆರವೇರಿತು. ಈ ಮೂಲಕ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು.
ಈ ಹಿಂದೆ 2013ರಲ್ಲಿ ಪಂಚಲಿಂಗ ದರ್ಶನ ಮಹೋತ್ಸವ ನಡೆದಿತ್ತು. ಈಗ ಏಳು ವರ್ಷಕ್ಕೆ ಬಂದಿರುವುದು ತಮ್ಮ ಸೌಭಾಗ್ಯ ಎಂದು ತಿಳಿಸಿದ ಸಚಿವರು, ಈ ಪಂಚಲಿಂಗ ದರ್ಶನ ಮಹೋತ್ಸವದಲ್ಲಿ ಸ್ವಾಮಿ ವೈದ್ಯನಾಥೇಶ್ವರನು ಎಲ್ಲರಿಗೂ ಒಳಿತನ್ನು ಮಾಡಲಿ, ನಾಡಿಗೆ ಅಂಟಿರುವ ಕೊರೋನಾ ಮಹಾಮಾರಿ ದೂರವಾಗಲಿ, ಸಕಲರಿಗೂ ಆರೋಗ್ಯ ಹಾಗೂ ಸನ್ಮಂಗಳವನ್ನು ಕರುಣಿಸಲಿ ಎಂದು ಸಚಿವರಾದ ಸೋಮಶೇಖರ್ ಅವರು ಪ್ರಾರ್ಥಿಸಿದರು.
ರುದ್ರಾಭಿಷೇಕ, ಹಾಲು, ಮೊಸರು, ತುಪ್ಪ, ಜೇನುತುಪ್ಪ, ಮೊಸರು, ಎಳನೀರು, ಭಸ್ಮೋದಿಕೆ, ಗಂಧ, ರುದ್ರೋದಕ, ಸುವರ್ಣ, ಅಕ್ಷತೋದಿಕೆ ಸೇರಿದಂತೆ ವೈದ್ಯನಾಥೇಶ್ವರನಿಗೆ 11 ರೀತಿಯ ಅಭಿಷೇಕಗಳನ್ನು ನೆರವೇರಿಸಲಾಯಿತು.
ಋಗ್ವೇದ, ಯಜುರ್ವೇದ, ಸಾಮವೇದಗಳ ಸಹಿತ ಶ್ರೀಸೂಕ್ತ, ದುರ್ಗಾ ಸೂಕ್ತ, ರುದ್ರಾ, ಚಮೆ ಸೇರಿದಂತೆ ವಿವಿಧ ಮಂತ್ರಘೋಷಗಳ ಪಠಣ ಮಾಡಲಾಯಿತು. ಈ ಮೂಲಕ ವೈದ್ಯನಾಥೇಶ್ವರ, ಮರಳೇಶ್ವರ, ಪಾತಾಳೇಶ್ವರ, ಅರ್ಕೇಶ್ವರ, ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿ ದೇವರುಗಳಿಗೆ ಏಕ ಕಾಲದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು.
ವರ್ಚುವಲ್ ಪ್ರಸಾರ: ಕೋವಿಡ್ 19ರ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಮೈಸೂರು ವಾರ್ತಾ ಇಲಾಖೆ ವತಿಯಿಂದ ವರ್ಚುವಲ್ ಆಗಿ ಪ್ರಸಾರವನ್ನು ಮಾಡಲಾಯಿತು. ಮೈಸೂರು ಸೇರಿದಂತೆ ರಾಜ್ಯ, ಅಂತಾರಾಜ್ಯಗಳ ಜನತೆ ಮನೆಯಿಂದಲೇ ದರ್ಶನ ಮಾಡಿದರು.
ತಲಕಾಡು ಪಂಚಲಿಂಗ ದರ್ಶನ
ವೈದ್ಯನಾಥೇಶ್ವರ: ತಲ ಮತ್ತು ಕಾಡ ಎಂಬ ಬೇಡರಿಗೆ ಮೋಕ್ಷ ಪ್ರದಾನಿಸಿದ ಪರಮೇಶ್ವರ ಇಲ್ಲಿ ತಾನೇ ಸ್ವಯಂ ವೈದ್ಯ ಮಾಡಿಕೊಂಡಿದ್ದನಂತೆ.ಇದರಿಂದ ಶಿವನನ್ನ ಇಲ್ಲಿ ವೈದ್ಯನಾಥೇಶ್ವನಾಗಿ ಪೂಜೆ ಮಾಡಲಾಗುತ್ತೆ. ಈ ಕಾರಣದದ ಇಲ್ಲಿ ಪೂಜೆ ಮಾಡಿದರೆ ಸಕಲ ರೋಗ ರುಜಿನಗಳು ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ. ಇದರಿಂದ ಇಲ್ಲಿ ವೈದ್ಯನಾಥನಿಗೆ ಅಗ್ರ ಪೂಜೆಯನ್ನು ಮಾಡಲಾಗುತ್ತದೆ.
ಅರ್ಕನಾಥೇಶ್ವರ: ಗ್ರಹಗಳಿಗೆಲ್ಲಾ ಅಧಿಪತಿಯಾಗಲು ಪುರಾಣದಲ್ಲಿ ಸೂರ್ಯನಿಂದ ಪೂಜಿಸಲ್ಪಟ್ಟ ಶಿವಲಿಂಗವೇ ಅರ್ಕನಾಥೇಶ್ವರನೆಂದು ಪ್ರಸಿದ್ಧಿಯಾಗಿದೆ. ಇದು ತಲಕಾಡಿನಲ್ಲಿ ವೈದ್ಯನಾಥೇಶ್ವರ ದೇಗುಲದ ಪೂರ್ವ ದಿಕ್ಕಿಗೆ ಮೂರು ಮೈಲಿ ದೂರದ ವಿಜಯಪುರದಲ್ಲಿದೆ. ಇದು ಸಕಲ ಸಂಕಷ್ಟ ನಿವಾರಕ ಲಿಂಗವೆನಿಸಿದೆ. ಅರ್ಕನಾಥೇಶ್ವರನ ಅರ್ಚನೆಗೆ ಮಾಘ ಶುದ್ಧ ಸಪ್ತಮಿ ದಿನವು ಬಹಳ ಶ್ರೇಷ್ಠವಾಗಿದೆ ಎಂದು ಹೇಳಲಾಗುತ್ತದೆ.
ಪಾತಾಳೇಶ್ವರ: ನಾಗಲೋಕದ ಚಕ್ರಾಧಿಪತ್ಯಕ್ಕಾಗಿ ವಾಸುಕಿಯಿಂದ ಪೂಜಿತಗೊಂಡಿರುವ ಈ ಶಿವಲಿಂಗವೇ ಪಾತಾಳೇಶ್ವರ. ವಾಸುಕೀಶ್ವರನೆಂಬುವುದು ಪಾತಾಳೇಶ್ವರನ ಮತ್ತೊಂದು ಹೆಸರಾಗಿದೆ. ಈ ದೇವಾಲಯ ಬೇರೆ ದೇವಾಲಯಗಳಿಗಿಂತ ಆಳದಲ್ಲಿರುವ ಕಾರಣ ಪಾತಾಳೇಶ್ವರನೆಂದೇ ಹೆಸರಾಗಿದೆ. ಇದರ ಪೂಜೆಗೆ ಶ್ರಾವಣ ಶುದ್ಧ ಪಂಚಮಿ ಅತ್ಯಂತ ಶ್ರೇಷ್ಠ ದಿನವಾಗಿದೆ. ಈ ಲಿಂಗವು ಪ್ರತಿದಿನ ಐದು ಬಣ್ಣಗಳನ್ನು ತಾಳುತ್ತದೆಂದು ಹೇಳಲಾಗುತ್ತದೆ.
ಮರಳೇಶ್ವರ: ತಲಕಾಡಿನ ಮರಳಿಗೆಲ್ಲ ಒಡೆಯನೆಂದೆ ಮರಳೇಶ್ವರನನ್ನು ಕರೆಯಲಾಗುತ್ತೆ. ಮರಳೇಶ್ವರ ಬ್ರಹ್ಮನಿಂದ ಪೂಜಿಸಲ್ಪಟ್ಟವನ್ನು ಎಂದು ಹೇಳಲಾಗುತ್ತೆ. ಬ್ರಹ್ಮನಿಗೆ ಪ್ರತ್ಯಕ್ಷನಾಗಿ ವರನೀಡಿದ ಎಂದು ಹೇಳಲಾಗುವುದು ಇದರಿಂದ ಮರಳೇಶ್ವರನಿಗೆ ಸೈತಕೇಶ್ವರನೆಂಬ ಕರೆಯಲಾಗುತ್ತದೆ. ಇದರಿಂದ ಈ ದೇವಾಲಯದಲ್ಲಿ ಪೂಜೆ ಮಾಡಿ ಬೇಡಿಕೊಂಡರೆ ಬೇಡಿದ ವರವನ್ನು ಕೊಡುತ್ತಾನೆ ಎಂಬ ನಂಬಿಕೆ ಸಹ ಇದೆ.
ಮಲ್ಲಿಕಾರ್ಜುನೇಶ್ವರ: ಕಾಮಧೇನುವಿನಿಂದ ಪೂಜೆಗೊಳ್ಳುತ್ತಿದ್ದ ಶಿವಲಿಂಗವೇ ಮಲ್ಲಿಕಾರ್ಜುನೇಶ್ವರ ಎಂದು ಹೇಳುತ್ತಾರೆ. ಮಲ್ಲಿಕಾರ್ಜುನೇಶ್ವರ ಮುನ್ನೂರು ಅಡಿ ಎತ್ತರದ ಮುಡುಕುತೊರೆ ಬೆಟ್ಟದಲ್ಲಿ ನೆಲೆಸಿದ್ದಾನೆ. ಈತ ಕೂಡ ಕೇಳಿದ ವರವನ್ನ ಕೊಡುತ್ತಾನೆ ಎಂದು ಭಕ್ತರ ನಂಬಿಕೆಯಾಗಿದೆ. ಇಲ್ಲಿ ಕಾವೇರಿ ನದಿಯು ನಾಲ್ಕು ದಿಕ್ಕುಗಳಲ್ಲಿ ಹರಿಯುವುದು ಕ್ಷೇತ್ರದ ವಿಶೇಷವಾಗಿದೆ.
Advertisement