
ಬೆಳಗಾವಿ: ಗ್ರಾಮ ಪಂಚಾಯಿತಿ ಚುನಾವಣೆ ದಿನಕಳೆದಂತೆ ರಂಗೇರುತ್ತಿದ್ದು, ಮತದಾರರ ಮನಗೆಲ್ಲಲು ಸಾಕಷ್ಟು ಕಣದಲ್ಲಿರುವ ಅಭ್ಯರ್ಥಿಗಳು ಹಲವು ಕಸರತ್ತುಗಳನ್ನು ನಡೆಸುತ್ತಿದ್ದಾರೆ.
ಕಾರ್ಯಕರ್ತರು, ಬೆಂಬಲಿಗರಿಗಾಗಿ ಪ್ರತೀನಿತ್ಯ ಅಭ್ಯರ್ಥಿಗಳು ತಮ್ಮ ತಮ್ಮ ಫಾರ್ಮ್ ಹೌಸ್ ಗಳಲ್ಲಿ ಗುಂಡು ಹಾಗೂ ತುಂಡುಗಳ ಪಾರ್ಟಿಗಳನ್ನು ಜೋರಾಗಿ ನಡೆಸುತ್ತಿದ್ದಾರೆ.
ಈ ನಡುವೆ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಮದ್ಯದ ಅಭಾವ ಎದುರಾಗುವ ಸಾಧ್ಯತೆಗಳಿದ್ದು, ಹೀಗಾಗಿ ಜನರು ಮುಂಚಿತವಾಗಿಯೇ ಮದ್ಯ ಖರೀದಿ ಮಾಡಲು ಆರಂಭಿಸಿದ್ದು, ಕಳೆದ 15 ದಿನಗಳಿಂದ ಮದ್ಯ ಮಾರಾಟ ಶೇ.125ರಷ್ಟು ಏರಿಕೆಯಾಗಿದೆ ಎಂದು ಅಧಇಕಾರಿಗಳು ಮಾಹಿತಿ ನೀಡಿದ್ದಾರೆ.
ಅಬಕಾರಿ ಇಲಾಖೆಯ ಅಂಕಿಅಂಶಗಳ ಪ್ರಕಾರ, ಡಿಸೆಂಬರ್ 1 ರಿಂದ 14 ರ ಅವಧಿಯ ಚುನಾವಣೆ ಘೋಷಣೆಯ ನಂತರ ಜಿಲ್ಲೆಯಲ್ಲಿ 67,542 ಮದ್ಯ ಮತ್ತು 21,560 ಬಿಯರ್ ಪೆಟ್ಟಿಗೆಗಳು ಮಾರಾಟವಾಗಿವೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 54,106 ಬಾಕ್ಸ್ ಮದ್ಯ ಮತ್ತು 18,363 ಬಿಯರ್ ಪೆಟ್ಟಿಗೆಗಳು ಮಾರಾಟವಾಗಿದ್ದವು.
ಇದಲ್ಲದೆ, ಮಹಾರಾಷ್ಟ್ರ ಮತ್ತು ಗೋವಾ ಗಡಿಗಳಿಗೆ ಸಮೀಪವಿರುವ ಹಳ್ಳಿಗಳಲ್ಲಿ ಕೆಲವು ಅಭ್ಯರ್ಥಿಗಳು ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಿಸಿಕೊಳ್ಳುತ್ತಿದ್ದಾರೆ. ಇಲ್ಲಿನ ಮದ್ಯಕ್ಕಿಂತಲೂ ಗೋವಾದ ಮದ್ಯ ಅಗ್ಗ ದರವಾಗಿರುವುದಿಂದ ಅಲ್ಲಿಂದ ಮದ್ಯವನ್ನು ಅಕ್ರಮವಾಗಿ ಸಾಗಿಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
ಇನ್ನು ಕುರಿ ಮತ್ತು ಮೇಕೆಗಳ ಬೆಲೆ ಕೂಡ ದುಬಾರಿಯಾಗಿದೆ, ಈ ಹಿಂದೆ 15 ರಿಂದ 18 ಕೆಜಿ ತೂಕದ ಕುರಿಗಳನ್ನು ರೂ. 6,000 ರಿಂದ 8,000ಕ್ಕೆ ಮಾರಾಟ ಮಾಡಲಾಗುತ್ತಿತ್ತು. ಆದರೆ, ಇದೀಗ ಇವುಗಳ ಬೆಲೆ ರೂ.8 ಸಾವಿರದಿಂದ 12 ಸಾವಿರಕ್ಕೆ ಏರಿಕೆಯಾಗಿದೆ.
Advertisement