ವಿಸ್ಟ್ರನ್ ಗಲಭೆ: ಮೇಕ್ ಇನ್ ಇಂಡಿಯಾಗೆ ಹಿನ್ನಡೆ, ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸರ್ಕಾರ ಅಸಮಾಧಾನ!

ಕೋಲಾರ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ವಿಸ್ಟ್ರನ್ ಐಫೋನ್ ತಯಾರಿಕಾ ಘಟಕದ ಮೇಲಿನ ದಾಳಿ ಮತ್ತು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ.
ವಿಸ್ಟ್ರನ್ ಸಂಸ್ಥೆ ಮತ್ತು ಆ್ಯಪಲ್
ವಿಸ್ಟ್ರನ್ ಸಂಸ್ಥೆ ಮತ್ತು ಆ್ಯಪಲ್
Updated on

ನವದೆಹಲಿ: ಕೋಲಾರ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ವಿಸ್ಟ್ರನ್ ಐಫೋನ್ ತಯಾರಿಕಾ ಘಟಕದ ಮೇಲಿನ ದಾಳಿ ಮತ್ತು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ.

ಕೋಲಾರ ಜಿಲ್ಲೆಯ ವಿಸ್ಟ್ರನ್‌ ಕಂಪನಿಯಲ್ಲಿ ಆಗಿರುವ ಅಹಿತಕರ ಘಟನೆಯು ಮರುಕಳಿಸದಂತೆ ರಾಜ್ಯ ಸರಕಾರದ ವತಿಯಿಂದ ಬಿಗಿ ಕ್ರಮ ಕೈಗೊಳ್ಳುವುದಷ್ಟೇ ಅಲ್ಲದೆ, ಕಂಪನಿಗೆ ಅಗತ್ಯವಿರುವ ರಕ್ಷಣೆ ನೀಡಲು ರಾಜ್ಯ ಸರಕಾರ ಸಿದ್ದವಿದೆ. ಇದರ ಹೊರತಾಗಿಯೂ ಕೇಂದ್ರ ಸರ್ಕಾರ ಘಟನೆಗೆ ಸಂಬಂಧಿಸಿದಂತೆ ರಾಜ್ಯ  ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತಂತೆ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಪ್ರಚಾರ ಇಲಾಖೆ (DPIIT) ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ವಿಸ್ಟ್ರನ್ ಹಿಂಸಾಚಾರ ಘಟನೆ ಕುರಿತಂತೆ ತನಿಖೆಯನ್ನು ತ್ವರಿತಗೊಳಿಸುವಂತೆ ಮತ್ತು ಅಪರಾಧಿಗಳನ್ನು ಪತ್ತೆ ಮಾಡಿ ಶಿಕ್ಷಿಸುವಂತೆ ಸೂಚಿಸಿದೆ. 

ಇದಕ್ಕೂ ಮುನ್ನ ಡಿಪಿಐಐಟಿ, ನೀತಿ ಆಯೋಗ ಮತ್ತು ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಗಳು ವರ್ಚುವಲ್ ಸಭೆಯಲ್ಲಿ ಭಾಗವಹಿಸಿ, ತನಿಖೆಯ ವಸ್ತುಸ್ಥಿತಿ ವರದಿಯನ್ನು ಸಂಗ್ರಹಿಸಿದರು. ಹಿಂಸಾಚಾರ ಮತ್ತು ಅದರ ಪರಿಣಾಮವಾಗಿ ಘಟಕ ಸ್ಥಗಿತಗೊಂಡಿರುವುದರಿಂದ ವಿಸ್ಟ್ರನ್‌ ಸಂಸ್ಥೆಯ ಉತ್ಪಾದನೆ  ಕುಸಿಯಲಿದ್ದು, ಶೇ.8-10 ರಷ್ಟು ಉತ್ಪಾದನಾ ನಷ್ಟವಾಗುತ್ತದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಅಲ್ಲದೆ ಆ್ಯಪಲ್‌ನ ಆದಾಯಕ್ಕೆ ಕನಿಷ್ಠ ಹಾನಿಯನ್ನುಂಟುಮಾಡುತ್ತದೆ ಎಂದು ಹೇಳಿರುವ ತಜ್ಞರು, ಇಂತಹ ಘಟನೆಗಳಿಂದ ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾ ಯೋಜನೆಗೆ ಹಿನ್ನಡೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕರ ಬಗ್ಗೆ ಆಪಲ್ ಸಂಸ್ಥೆಯ ನೀತಿಗಳು ತುಂಬಾ ಕಟ್ಟುನಿಟ್ಟಾಗಿವೆ ಮತ್ತು ಕಾರ್ಮಿಕರಿಗೆ ಬಾಕಿ ಪಾವತಿಸದಿರುವ ಬಗ್ಗೆ ಸಂಸ್ಥೆ ಲಘುವಾಗಿ ಪರಿಗಣಿಸಲಾಗುವುದಿಲ್ಲ. ಕೋಲಾರ ಘಟಕದ ಐಫೋನ್ ಎಸ್ಇ 2020 ಮತ್ತು ಪ್ರೀಮಿಯಂ ಫೋನ್‌ನ ಹಳೆಯ ಆವೃತ್ತಿಗಳನ್ನು ತಯಾರಿಸುತ್ತಿದ್ದರೂ, ಐಫೋನ್ 12 ರ  ಬೇಡಿಕೆಯು ಉತ್ತುಂಗಕ್ಕೇರಿದೆ, ಆದ್ದರಿಂದ ಇದು ಕೇವಲ ಹಣಕಾಸಿನ ನಷ್ಟದ ವಿಚಾರ ಮಾತ್ರವಲ್ಲ ಬದಲಿಗೆ ಆ್ಯಪಲ್ ಸಂಸ್ಥೆಯ ಘನತೆಯ ವಿಚಾರ ಕೂಡ ಆಗಿದೆ. ಇಂತಹ ಘಟನೆಗಳಿಂದ ಆ್ಯಪಲ್ ಸಂಸ್ಥೆಯ ಬ್ರಾಂಡ್ ಮೌಲ್ಯಕ್ಕೆ ಧಕ್ಕೆಯಾಗತ್ತದೆ ಎಂದು ಟೆಕ್ ಆರ್ಕ್ ಸಂಸ್ಥೆಯ ಮುಖ್ಯ ವಿಶ್ಲೇಷಕ ಮತ್ತು ಸಂಸ್ಥಾಪಕ  ಫೈಸಲ್ ಕವೂಸಾ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ತಿಂಗಳಷ್ಟೇ ಆ್ಯಪಲ್ ನ ಎರಡನೇ ಅತಿದೊಡ್ಡ ಗುತ್ತಿಗೆ ಸರಬರಾಜುದಾರ ಪೆಗಾಟ್ರಾನ್ ಚೀನಾದಲ್ಲಿ ತನಿಖೆ ಎದುರಿಸಿತ್ತು. ರಾತ್ರಿ ಪಾಳಿಯಲ್ಲಿ ಮತ್ತು ಹೆಚ್ಚಿನ ಕೆಲಸಕ್ಕಾಗಿ ವಿದ್ಯಾರ್ಥಿಗಳನ್ನು ನೇಮಿಸಿಕೊಂಡು ಶೋಷಿಸಲಾಗುತ್ತಿದೆ ಎಂಬ ಗಂಭೀರ ಆರೋಪದ ಮೇರೆಗೆ ಪೆಗಾಟ್ರಾನ್ ಅನ್ನು ಆ್ಯಪಲ್  ತನಿಖೆಗೊಳಪಡಿಸಿತ್ತು. ಇಂತಹ ನಡೆಗಳು ಆ್ಯಪಲ್ ಸಂಸ್ಥೆಯ ನೀತಿಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದೂ ಆ್ಯಪಲ್ ಹೇಳಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com