ಗ್ರಾಮ ಪಂಚಾಯತ್ ಚುನಾವಣೆ ವೈಷಮ್ಯ: ಸತೀಶ ಜಾರಕಿಹೊಳಿ ಆಪ್ತರ ಮೇಲೆ ಗುಂಡಿನ ದಾಳಿ

ಗ್ರಾಮ ಪಂಚಾಯತ್ ಚುನಾವಣೆಗೆ ದಿನಗಣನೆ ಆರಂಭವಾಗಿರುವ ನಡುವಲ್ಲೇ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆಪ್ತ ಸೇರಿದಂತೆ ಇಬ್ಬರ ಮೇಲೆ ಮುಸುಕುಧಾರಿ ವ್ಯಕ್ತಿಯೊಬ್ಬ ಗುಂಡುಹಾರಿಸಿ ಪರಾರಿಯಾಗಿರುವ ಘಟನೆ ನಡೆದಿದೆ. 
ರಾಜು ತಳವಾರ ಮನೆಯಲ್ಲಿ ಸಿಕ್ಕ ಮಾರಾಕಾಸ್ತ್ರಗಳು
ರಾಜು ತಳವಾರ ಮನೆಯಲ್ಲಿ ಸಿಕ್ಕ ಮಾರಾಕಾಸ್ತ್ರಗಳು
Updated on

ಬೆಳಗಾವಿ: ಗ್ರಾಮ ಪಂಚಾಯತ್ ಚುನಾವಣೆಗೆ ದಿನಗಣನೆ ಆರಂಭವಾಗಿರುವ ನಡುವಲ್ಲೇ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆಪ್ತ ಸೇರಿದಂತೆ ಇಬ್ಬರ ಮೇಲೆ ಮುಸುಕುಧಾರಿ ವ್ಯಕ್ತಿಯೊಬ್ಬ ಗುಂಡುಹಾರಿಸಿ ಪರಾರಿಯಾಗಿರುವ ಘಟನೆ ನಡೆದಿದೆ. 

ಶಾಸಕರ ಆಪ್ತ ಕಾರ್ಯದರ್ಶಿ ಕಿರಣಸಿಂಗ್ ರಜಪೂತ ಮತ್ತು ಕಾಂಗ್ರೆಸ್ ಮುಖಂಡ ಭರಮಾದೂಪದಾಳೆ ಎಂಬುವವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಭರಮಾ ದೂಪದಾಳೆ ಮತ್ತು ಕಿರಣ ಸಿಂಗ್ ರಜಪೂತ, ಅಲತಾಪ ಚಜೆದಾರ ಅವರು ಗ್ರಾಮದ ಬಸ್ತಿ ಮಂದಿರ ಹತ್ತಿರ ಕುಳಿತು ಚುನಾವಣೆ ವಿಚಾರವಾಗಿ ಚರ್ಚೆ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಕಾಲ್ನಡಿಗೆ ಮೂಲಕ ಬಂದಿರುವ ಅನಾಮಧೇಯ ವ್ಯಕ್ತಿ ಕಂಟ್ರಿ ಮೇಡ್ ಪಿಸ್ತೂಲಿನಿಂದ ಗುಂಡಿನ ದಾಳಿ ನಡೆಸಿದ್ದಾನೆ. ಸಣ್ಣ ಪುಟ್ಟ ಗಾಯಗಳಾಗಿದ್ದರಿಂದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ದಾಳಿಗೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಪ್ರಕರಣವನ್ನು ಶೀಘ್ರಗತಿಯಲ್ಲಿ ಭೇದಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ನಡುವೆ ದಾಳಿ ಘಟನೆಯನ್ನು ಸತೀಶ್ ಜಾರಕಿಹೊಳಿಯವರು ತೀವ್ರವಾಗಿ ಖಂಡಿಸಿದ್ದಾರೆ. 

ಯಮಕನಮರಡಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಾಕಷ್ಟು ಜನರು ಕಣದಲ್ಲಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಕಾಂಗ್ರೆಸ್ ಶಂಕೆ ವ್ಯಕ್ತಪಡಿಸಿದೆ. 

ಅಂಕಲಗಿಯಲ್ಲಿ ಮತ್ತೊಂದು ಘಟನೆ ನಡೆದಿದ್ದು, ಗ್ರಾಮದಲ್ಲಿ ಮತ್ತೆ ಗೂಂಡಾಗಿರಿ ನಡೆದಿರುವುದು ವರದಿಯಾಗಿದೆ. ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ರಾಜು ತಳವಾರ ಎಂಬುವವರು ಮೂವರು ವ್ಯಕ್ತಿಗಳ ಮೇಲೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. 

ಹಲ್ಲೆಗೊಳಗಾದವರನ್ನು ಸಂಜು ಚಿಕ್ಕುಗೋಲ್, ಆಕಾಶ್ ಚಿಕ್ಕಿಗೋಲ್, ಅಕ್ಷಯ್ ಚಿಕ್ಕುಗೋಲ್ ಎಂದು ಗುರ್ತಿಸಲಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. 

ಘಟನೆ ಬಳಿಕ ರಾಜು ತಳವಾರ್ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. 

ಈ ನಡುವೆ ಅಂಕಲಗಿಯಲ್ಲಿರುವ ತಳವಾರ್ ಕುಟುಂಬದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಶೆ 20 ಕುಡಗೋಲ ಹಾಗೂ ಹಲವು ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ದಾಖಲೆ ಇಲ್ಲದ ರೂ.83 ಲಕ್ಷ ನಗದನ್ನೂ ವಶಪಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. 

ರಾಜು ತಳವಾರಗೆ ರಾಜಕೀಯ ರಕ್ಷಣೆ ಇದೆ. ಅಂಕಲಗಿ ಗ್ರಾಮದಲ್ಲಿ ಮತ್ತೆ ಗೂಂಡಾಗಿರಿ ನಡೆದಿದೆ. ಕಳೆದ 6 ತಿಂಗಳಿನಲ್ಲಿ ಮೂರು ಬಾರಿ ಇಂತಹ ಘಟನೆ ನಡೆದಿದೆ. ಇಲ್ಲಿ ಭಯದ ವಾತಾವರಣ ಮುಂದುವರೆದಿದ್ದು, ಪೊಲೀಸರು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು. ಮಾರಾಮಾರಿ ಎರಡು ಕುಟುಂಬಗಳ ನಡುವೆ ನಡೆದಿದೆ ಹೌದು, ಆದರೆ, ಎರಡು ಕುಟುಂಬಗಳೂ ಪ್ರತ್ಯೇಕ ಪಕ್ಷಗಳಿಗೆ ಸಂಬಂಧಿಸಿದ್ದಾಗಿವೆ ಎಂದು ಸತೀಶ್ ಜಾರಕಿಹೊಳಿಯವರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com