ರಾಜ್ಯದಲ್ಲಿ ಕೈಗಾರಿಕೆಗಳು, ವಾಣಿಜ್ಯ ಉದ್ಯಮಗಳ ಪುನಶ್ಚೇತನಕ್ಕೆ ಮತ್ತು ಸ್ಥಳೀಯರಿಗೆ ಉದ್ಯೋಗಗಳನ್ನು ಒದಗಿಸಲು ಹೊಸ ಕೈಗಾರಿಕಾ ನೀತಿಗಳ ಮೇಲೆ ಗಮನ ಕೇಂದ್ರೀಕರಿಸಲು ಮುಂದಾಗಿರುವ ರಾಜ್ಯ ಸರ್ಕಾರ ಜಾಗತಿಕ ಹೂಡಿಕೆ ಸಮಾವೇಶವನ್ನು ಆಯೋಜಿಸಲು ಮುಂದಾಗಿದೆ.
ಹಲವು ಬಹುರಾಷ್ಟ್ರೀಯ ಕಂಪೆನಿಗಳನ್ನು ಸೆಳೆಯಲು ವಿಶೇಷ ಹೂಡಿಕೆ ಅಭಿವೃದ್ಧಿ ಕಾರ್ಯಪಡೆಯನ್ನು ರಾಜ್ಯ ಸರ್ಕಾರ ರಚಿಸಿದೆ.
ಕೋಲಾರ ಜಿಲ್ಲೆಯ ವಿಸ್ಟ್ರಾನ್ ಐಫೋನ್ ಉತ್ಪಾದನೆ ಘಟಕದ ಕಾರ್ಮಿಕರ ಅನಿಶ್ಚಿತತೆಯಿಂದ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಮಾತನಾಡಿಸಿತು. ವಿಸ್ಟ್ರಾನ್ ಹಿಂಸಾಚಾರದಿಂದ ಕರ್ನಾಟಕದ ಬ್ರಾಂಡ್ ಇಮೇಜ್ ಗೆ ಯಾವುದೇ ಧಕ್ಕೆಯುಂಟಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಸಿಎಂ ಯಡಿಯೂರಪ್ಪ ಗ್ಲೋಬಲ್ ಇನ್ವೆಸ್ಟರ್ ಮೀಟ್ ನ್ನು ಮುಂದಿನ ವರ್ಷ ಕೋವಿಡ್-19 ಸೋಂಕು ಕಡಿಮೆಯಾದ ಮೇಲೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ವಿಸ್ಟ್ರಾನ್ ಗಲಭೆಯಂತಹ ಘಟನೆ ಪುನರಾವರ್ತಿಸದಂತೆ ಭವಿಷ್ಯದಲ್ಲಿ ಏನು ಕ್ರಮ ಕೈಗೊಳ್ಳುತ್ತೀರಿ?
-ಬೆಂಗಳೂರು ಸಮೀಪ ಟೊಯೊಟಾ ಕಿರ್ಲೋಸ್ಕರ್ ಕಾರ್ಮಿಕರು ಮತ್ತು ವಿಸ್ಟ್ರಾನ್ ಕಾರ್ಮಿಕರ ಗಲಭೆ ಪ್ರಕರಣ ದುರದೃಷ್ಟಕರ. ಆದರೆ ಇಂಥವುಗಳು ಅಲ್ಲೊಂದು, ಇಲ್ಲೊಂದು. ನಾವು ಈ ಎರಡೂ ಕಂಪೆನಿಗಳು ಮತ್ತು ಕೇಂದ್ರ ಸರ್ಕಾರಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಇದರಿಂದ ಹೂಡಿಕೆದಾರರ ಮನೋಭಾವನೆಗಳ ಮೇಲೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ.
ವಿಸ್ತ್ರಾನ್ ಅಧಿಕಾರಿಗಳನ್ನು ಸಂಪರ್ಕಿಸಿದ್ದೀರಿಯೇ?
ಜಿಲ್ಲಾಡಳಿತ ಮತ್ತು ಪ್ರಧಾನ ಕಾರ್ಯದರ್ಶಿಗಳು ಎಲ್ಲಾ ನೆರವನ್ನು ನೀಡಿದ್ದು ಕೈಗಾರಿಕಾ ಶಾಂತಿ ನೆಲೆಸಲು ಎಲ್ಲಾ ರೀತಿಯ ಸಹಾಯ ಮಾಡುತ್ತಿದ್ದಾರೆ.
ಕಾರ್ಮಿಕರಿಗೆ ಭರವಸೆ ನೀಡಲು ಸರ್ಕಾರ ಬೇರೆ ಕಂಪೆನಿಗಳ ಜೊತೆ ಸಭೆ ನಡೆಸುತ್ತದೆಯೇ?
-ಸ್ಥಿರ ನೀತಿಗಳೊಂದಿಗೆ ಶಾಂತಿಯನ್ನು ಬಯಸುವ ರಾಜ್ಯ ಕರ್ನಾಟಕ. ಇಲ್ಲಿನ ಪರಿಸರ, ಸುಗಮ ಉದ್ಯಮ ಮತ್ತು ಉತ್ತಮ ಕಾರ್ಮಿಕ ಸಂಬಂಧಗಳನ್ನು ಬಯಸುತ್ತದೆ. ಕೈಗಾರಿಕೆಗಳ ಬೆಂಬಲ ಮತ್ತು ಸುರಕ್ಷತೆಗೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡುತ್ತದೆ. ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿದ್ದೇನೆ.
ಬ್ರಾಂಡ್ ಕರ್ನಾಟಕ ಇಮೇಜ್ ಗೆ ಇದರಿಂದ ಧಕ್ಕೆಯಾಗಲಿದೆಯೇ?
-ಖಂಡಿತ ಇಲ್ಲ. ಇದೊಂದು ಅಪರೂಪದ ವಿದ್ಯಮಾನವಾಗಿದ್ದು ಖಂಡಿತ ಬಗೆಹರಿಸುತ್ತೇವೆ.
2020-21ರಲ್ಲಿ ಜಾಗತಿಕ ಹೂಡಿಕೆ ಸಮಾವೇಶವನ್ನು ಸರ್ಕಾರ ಹಮ್ಮಿಕೊಳ್ಳುತ್ತದೆಯೇ?
-ಹೌದು, ಸಮಾವೇಶ ನಡೆಸುವ ನಮ್ಮ ನಿರ್ಧಾರಕ್ಕೆ ಬದ್ಧವಾಗಿದ್ದೇವೆ. ಕೋವಿಡ್-19 ಸೋಂಕು ಕಡಿಮೆಯಾದ ನಂತರ ಕೈಗಾರಿಕಾ ಸನ್ನಿವೇಶ ನೋಡಿಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
Advertisement