ಆನೆದಂತದಿಂದ ದೇವರ ಚಿತ್ರ ಕೆತ್ತನೆ ಮಾಡಿ ಮಾರಾಟ ಮಾಡುತ್ತಿದ್ದ ಮೂವರ ಬಂಧನ: ಕಾರು, ಬೈಕ್ ವಶ
ಮೈಸೂರು: ಆನೆ ದಂತದಿಂದ ಶ್ರೀ ಕೃಷ್ಣ ಸೇರಿದಂತೆ ವಿವಿಧ ದೇವರ ಚಿತ್ರ ಕೆತ್ತನೆ ಮಾಡಿ ಮಾರಾಟ ಮಾಡುತ್ತಿದ್ದ ಮೂವರನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದು, ಆರೋಪಿಗಳಿಂದ ಒಂದು ಆಲ್ಟೋ ಕಾರು, ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.
ಮೈಸೂರಿನ ನಾಯ್ಡುನಗರದ ಬಳಿ ಮೂವರು ಆನೆ ದಂತವನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಸಂಚಾರಿ ದಳದ ಸಿಬ್ಬಂದಿ ದಾಳಿ ನಡೆಸಿ, ಪರಿಶೀಲಿಸಿದಾಗ ಮಾರುತಿ ಆಲ್ಟೋ ಕಾರ್ ನಲ್ಲಿ ಕೆತ್ತನೆ ಮಾಡಿರುವ ಆನೆಯ ಮೂರು ದಂತ ಇರುವುದು ಖಚಿತವಾಗಿದೆ.
ಕೂಡಲೇ ಕಾರ್ ನಲ್ಲಿದ್ದ ಮೈಸೂರಿನ ನಾಯ್ಡು ನಗರದ ನಿವಾಸಿಗಳಾದ ಮನೋಹರ್ (40), ಸುಮಂತ್ (26) ಹಾಗೂ ಕೊಡಗು ಜಿಲ್ಲೆಯ ಸೋಮವಾರಪೇಟೆ ನಿವಾಸಿ ಶಿವದಾಸ್ (55) ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳ ಬಳಿ ಇದ್ದ ಆನೆಯ ಮೂರು ದಂತಗಳ ಮೇಲೆ ಆಕರ್ಷಕವಾಗಿ ಕೆತ್ತನೆ ಮಾಡಲಾಗಿದೆ. ಕೆತ್ತನೆಯಲ್ಲಿ ಪರಿಣಿತರಾಗಿರುವ ಕಲಾವಿದರೇ ಕೆತ್ತನೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಎರಡು ದಂತಗಳು ಅಂದಾಜು ಒಂದೂವರೆ ಅಡಿ ಎತ್ತರದ್ದಾಗಿದ್ದರೆ, ಮತ್ತೊಂದು ಒಂದು ಅಡಿ ಎತ್ತರವಿದೆ. ಚಿಕ್ಕ ದಂತವನ್ನು ಪೀಠದ ಮೇಲೆ ನಿಂತು ಕೊಳಲು ಊದುತ್ತಿರುವ ಕೃಷ್ಣನ ಮೂರ್ತಿಯಾಗಿ ಪರಿವರ್ತಿಸಲಾಗಿದೆ. ಉಳಿದ ಎರಡೂ ದಂತವನ್ನು 'ತ್ರಿಡಿ' ಮಾದರಿಯಲ್ಲಿ ಪೌರಾಣಿಕ ಹಿನ್ನೆಲೆ ಸಾರುವಂತೆ ವಿವಿಧ ಭಂಗಿಯಲ್ಲಿರುವ ದೇವರ ಚಿತ್ರ ಕೆತ್ತನೆ ಮಾಡಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ