ಶಾಲಾ ಮಕ್ಕಳಿಗೆ  ಶೀಘ್ರ ವಾಹನ ಸೌಲಭ್ಯ: ಸಚಿವ ಸುರೇಶ್ ಕುಮಾರ್

ಕಾಡಂಚಿನ ಗ್ರಾಮ ಪಚ್ಚೇದೊಡ್ಡಿಯಿಂದ ಪ್ರತನಿತ್ಯ ಶಾಲೆಗೆ  ನಡೆದುಕೊಂಡು ಹೋಗುತ್ತಿರುವ ಶಾಲಾ ಮಕ್ಕಳಿಗೆ ಶೀಘ್ರವಾಗಿ ವಾಹನ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಸುರೇಶ್ ಕುಮಾರ್ ಅವರು ತಿಳಿಸಿದರು.
ಸುರೇಶ್ ಕುಮಾರ್-ಶಾಲಾ ಮಕ್ಕಳು
ಸುರೇಶ್ ಕುಮಾರ್-ಶಾಲಾ ಮಕ್ಕಳು

ಚಾಮರಾಜನಗರ: ಕಾಡಂಚಿನ ಗ್ರಾಮ ಪಚ್ಚೇದೊಡ್ಡಿಯಿಂದ ಪ್ರತನಿತ್ಯ ಶಾಲೆಗೆ ನಡೆದುಕೊಂಡು ಹೋಗುತ್ತಿರುವ ಶಾಲಾ ಮಕ್ಕಳಿಗೆ ಶೀಘ್ರವಾಗಿ ವಾಹನ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಸುರೇಶ್ ಕುಮಾರ್ ಅವರು ತಿಳಿಸಿದರು.

ಹನೂರು ತಾಲ್ಲೂಕಿನ ಕಾಡಂಚಿನ ಗ್ರಾಮ ಪಚ್ಚೇದೊಡ್ಡಿಯಿಂದ ಹತ್ತು ಕಿಲೊಮೀಟರ್ ದೂರದ ಊರಿನ ಶಾಲೆಗೆ ವಿದ್ಯಾರ್ಥಿಗಳು ನಡೆದುಕೊಂಡು ಹೋಗಿಬರುತ್ತಿರುವ ಬಗ್ಗೆ ಮಾಧ್ಯಮಗಳು ಗಮನ ಸೆಳೆದ ಹಿನ್ನಲೆಯಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ಪಚ್ಚೇದೊಡ್ಡಿಯಲ್ಲಿಂದು ಹಮ್ಮಿಕೊಂಡಿದ್ದ ಶಾಲಾ ವಾಸ್ತವ್ಯ ಕಾರ್ಯಕ್ರಮದ ವೇಳೆ ಮಾತನಾಡಿದರು.

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಉಸ್ತುವಾರಿ ಸಚಿವರು ನಿಮ್ಮ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ 6ನೇ ತರಗತಿಯಿಂದ  ಪ್ರೌಢಶಾಲೆವರೆಗಿನ  ಪಚ್ಚೇದೊಡ್ಡಿಯ ಎಲ್ಲ 18 ವಿದ್ಯಾರ್ಥಿಗಳಿಗೆ ದೂರದ ಶಾಲೆಗಳಿಗೆ ಹೋಗಿಬರಲು ವಾಹನ ವ್ಯವಸ್ಥೆ ಮಾಡವುದಾಗಿ ತಿಳಿಸಿದರು. ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳು ವಿಶೇಷ ಗಮನಕೊಟ್ಟು ವ್ಯಾಸಂಗ ಮಾಡಬೇಕು ಎಂದು ಸಲಹೆ ಮಾಡಿದ ಸಚಿವರು ನಿಮಗೆ ಯಾವ ವಿಷಯ ಕಷ್ಟವಾಗುತ್ತಿದೆ ಎಂದು ಪ್ರಶ್ನಿಸಿದರು.

ಪರೀಕ್ಷಾ ವೇಳೆ ಆರೋಗ್ಯ ಕಾಪಾಡಿಕೊಳ್ಳಿ.ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ಗಳಿಸಿ ಪಿಯುಸಿಗೆ ದಾಖಾಲಾಗಬೇಕು.ಮುಂದೆ ಉನ್ನತ ಹುದ್ದೆಗಳನ್ನು ಅಲಂಕರಿಸಿ ಗ್ರಾಮೀಣ ಭಾಗದ ಸಮಸ್ಯೆಗಳನ್ನು ಪರಿಹರಿಸುವಂತಾಗಬೇಕು ಎಂದರು.

ಕಳೆದ ಗೋಪಿನಾಥಂ ಶಾಲಾ ವಾಸ್ತವ್ಯ ವೇಳೆ ಕನ್ನಡ ಮಾಧ್ಯಮ ಶಾಲೆಗೆ ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದರು. ಇದನ್ನೂ ಈಡೇರಿಸಲಾಗಿದೆ. ಪ್ರಯೋಗಾಲಯ, ಕುಡಿಯುವ ನೀರಿನ ಘಟಕ ಸೇರಿದಂತೆ ಇನ್ನಿತರ ಹಲವು ಬೇಡಿಕೆಗಳಿಗೆ ಪರಿಹಾರ ದೊರೆತಿದೆ ಎಂದು ಸಚಿವರು ತಿಳಿಸಿದರು.

ಇದೇ ವೇಳೆ  ಸ್ಥಳೀಯ ಜನರ ಅಹವಾಲು ಆಲಿಸಿದ ಸಚಿವರು ಸಂಚಾರಿ ಪಡಿತರ ವ್ಯವಸ್ಥೆ, ಹೆಚ್ಚುವರಿ ಶಾಲೆ ಕೊಠಡಿ, ಅಂಗನವಾಡಿ ಕಟ್ಟಡ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ನುಡಿದರು. ಮುಂದಿನ ಭೇಟಿಯ ವೇಳೆ ಪಚ್ಚೇದೊಡ್ಡಿಯ ಸಮಸ್ಯೆಗಳು ಪರಿಹಾರವಾಗಲಿದೆ .ಜಿಲ್ಲಾಧಿಕಾರಿಯವರು ಇತರೆ  11 ಕಾಡಂಚಿನ ಗ್ರಾಮಗಳ ಸಮಸ್ಯೆಗಳ ಪರಿಹಾರ ಕಾರ್ಯಗಳಿಗೆ ಸಂಬಂಧಿಸಿದಂತೆ ವರದಿ ತಯಾರಿಸುವುದಾಗಿ ಹೇಳಿದ್ದಾರೆ ಎಂದು ಸಚಿವರು ತಿಳಿಸಿದರು.

ಶಾಸಕರಾದ ಆರ್.ನರೇಂದ್ರ ಅವರು ಮಾತನಾಡಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಮತ್ತೊಂದು ಕೊಳವೆ ಬಾವಿ ಕೊರೆಯಸಿ ಇನ್ನಷ್ಟು ತೊಂಬೆಗಳನ್ನು ನಿರ್ಮಾಣ ಮಾಡಬೇಕು. ಇತರೆ ಕಾಡಂಚಿನ ಗ್ರಾಮಗಳ ಶಾಲೆಗಳಿಗೂ ಅಗತ್ಯ ವ್ಯವಸ್ಥೆ ಒದಗಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಾತನಾಡಿ ಜಿಲ್ಲೆಯ ಇನ್ನಿತರ ಕಾಡಂಚಿನ ಗ್ರಾಮಗಳ ಸಮಸ್ಯೆ ಪರಿಹಾರ ಸಂಬಂಧ ಪೈಲಟ್ ಯೋಜನೆಗೆ ವರದಿ ತಯಾರಿಸಲಿದ್ದೇನೆ. ಸ್ಥಳೀಯ ರಿಗೆ ಸಂಚಾರಿ ವಾಹನದ ಮೂಲಕ ಪಡಿತರ ಒದಗಿಸಲು ಅಗತ್ಯ ಕ್ರಮವಹಿಸುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯಿಸಮಿತಿ ಅಧ್ಯಕ್ಷರಾದ ಮರಗದಮಣಿ, ಸದಸ್ಯರಾದ ಸಿ.ಎನ್.ಬಾಲರಾಜು, ಆರ್.ಬಾಲರಾಜು, ಮಂಜುಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೋಯರ್ ಹರ್ಷಲ್ ನಾರಾಯಣ ರಾವ್, ಹೆಚ್ಚುವರಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣನವರ್, ತಹಶೀಲ್ದಾರ್ ಕೆ.ಕುನಾಲ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಜವರೇಗೌಡ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಧಾಮಣಿ ಇತರರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com