ರಾಜ್ಯದ ಏಳು ಸ್ಮಾರ್ಟ್ ಸಿಟಿ, 27 ಅಮೃತ ನಗರ ಯೋಜನೆ ಅನುಷ್ಠಾನಕ್ಕೆ ಆದ್ಯತೆ: ಬಿಎಸ್ ಯಡಿಯೂರಪ್ಪ

ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ರಾಜ್ಯದಲ್ಲಿ ಏಳು ಸ್ಮಾರ್ಟ್ ಸಿಟಿ, 27 ಅಮೃತ ನಗರ ಯೋಜನಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ

ಬೆಂಗಳೂರು: ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ರಾಜ್ಯದಲ್ಲಿ ಏಳು ಸ್ಮಾರ್ಟ್ ಸಿಟಿ, 27 ಅಮೃತ ನಗರ ಯೋಜನಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. 

ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಮತ್ತು ಸುಸ್ಥಿರ ನಗರಕ್ಕೆ ಪರಿಹಾರಗಳು ಕುರಿತ ೧೬ನೇ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮತ್ತು ಸಮ್ಮೇಳನವಾದ "ಮುನಿಸಿಪಾಲಿಕಾ"ಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ನಗರಾಭಿವೃದ್ಧಿ ಯೋಜನೆಗಳ ಕುರಿತು ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಹಾಗೂ ಅಮೃತ ಯೋಜನೆಗಳ ಅನುಷ್ಟಾನಕ್ಕೆ ವಿಶೇಷ ಗಮನಹರಿಸಲಾಗಿದೆ ಎಂದರು.

ಬೆಂಗಳೂರು ನಗರದ ಮೂಲ ಸೌಕರ್ಯವನ್ನು ವಿಶ್ವದರ್ಜೆಗೇರಿಸುವ ಎಲ್ಲ ಪ್ರಯತ್ನವನ್ನು ಸರ್ಕಾರ ಮಾಡುತ್ತಿದ್ದು, ನಗರ ಸಂಚಾರ ಸುಧಾರಣೆಗಾಗಿ ಉಪನಗರ ರೈಲು ಯೋಜನೆ ಪರಿಚಯಿಸಲಾಗುತ್ತಿದೆ. ಬೆಂಗಳೂರನ್ನು ವಿಶ್ವ ತಾಣಗಳಿಗೆ ಸಂಪರ್ಕಿಸುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗಿದೆ ಎಂದರು. 

ನಗರೀಕರಣ ದೊಡ್ಡಸವಾಲಾಗಿದ್ದು, ನಗರೀಕರಣದ ಜ್ವಲಂತ ಸಮಸ್ಯೆಗಳನ್ನು ಮತ್ತು ನಗರಗಳ ಯೋಜಿತ ಬೆಳವಣಿಗೆ ಹಾಗೂ ಸಮಗ್ರ ಅಭಿವೃದ್ಧಿಯತ್ತ ಗಮನಹರಿಸಲಾಗಿದೆ. ಬೆಂಗಳೂರಿನಷ್ಟೇ ರಾಜ್ಯದ ಇತರ ಬೆಳವಣಿಗೆಯೂ ಸರ್ಕಾರದ ಆದ್ಯತೆಯ ವಿಚಾರವಾಗಿದೆ. ರಾಜ್ಯದ ಅಭಿವೃದ್ದಿಯ ಸಮತೋಲನದ ದೃಷ್ಠಿಯಿಂದ ಬೆಂಗಳೂರು ಜತೆಗೆ, ಇತರ ನಗರಗಳ ಬೆಳವಣಿಗೆಯಾಗಬೇಕಿದ್ದು, ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯಕ್ರಮ ರೂಪಿಸಿದೆ ಎಂದರು.

ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ, ಉತ್ಪಾದನೆ ಮತ್ತು ವಾಣಿಜ್ಯ ದೃಷ್ಠಿಯಿಂದ ಮೈಸೂರು, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ದಾವಣಗೆರೆ ಜಿಲ್ಲೆಗಳು ಮುಂಚೂಣಿ ಜಿಲ್ಲೆಗಳಾಗಿದ್ದು, ಇದಕ್ಕಾಗಿ ಸೂಕ್ತ ಕಾರ್ಯಯೋಜನೆ ಸಿದ್ಧಪಡಿಸಲಾಗಿದೆ ಎಂದರು.ಕ್ಷೀಣಿಸುತ್ತಿರುವ ಜಲ ಹಾಗೂ ಇಂಧನ ಮೂಲಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ಬಳಕೆಯಲ್ಲಿ ಮಿತವ್ಯಯ ಮತ್ತು ಸಂರಕ್ಷಣೆಯ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಘನತ್ಯಾಜ್ಯ ನಿರ್ವಹಣೆ, ಜಲಮೂಲಗಳು ಹಾಗೂ ಪರಿಸರ ಸಂರಕ್ಷಣೆ, ತ್ಯಾಜ್ಯ ನೀರಿನ ಸಂರಕ್ಷಣೆ, ಸೌರ ವಿದ್ಯುತ್ ಬಳಕೆ, ಮಳೆ ನೀರಿನ ಕೊಯ್ಲು, ಇವು ನಗರ ಸ್ಥಳೀಯ ಸಂಸ್ಥೆಗಳ ಆದ್ಯತಾ ವಿಷಯವಾಗಬೇಕಿದೆ ಎಂದು ಅವರು ಹೇಳಿದರು.

ಕರ್ನಾಟಕ ದೇಶದಲ್ಲೇ ತ್ವರಿತವಾಗಿ ನಗರೀಕರಣ ಹೊಂದುತ್ತಿರುವ ರಾಜ್ಯವಾಗಿದ್ದು, ದೇಶದಲ್ಲೇ ಅತಿಹೆಚ್ಚು ನಗರೀಕರಣವಾಗಿರುವ ರಾಜ್ಯಗಳಲ್ಲಿ ೪ನೇ ಸ್ಥಾನದಲ್ಲಿದೆ. ಹಾಗಾಗಿ ನಗರೀಕರಣದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಈ ಸಮಾವೇಶವೂ ಸರ್ಕಾರಕ್ಕೆ ಪೂರಕವಾದ ವರದಿಗಳನ್ನು ನೀಡುತ್ತದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ಈ ಸಮಾವೇಶದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಮೇಯರ್ ಗೌತಮ್ ಕುಮಾರ್, ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್, ಗುಡ್ ಗೌರ್ನೆನ್ಸ್ ಅಧ್ಯಕ್ಷ ವಿ. ಸುರೇಶ್, ಕೆನಡಾದ ಸೀನಿಯರ್ ಟ್ರೇಡ್ ಕಮೀಷನರ್ ಮಾರ್ಕ್ ಶೋಟರ್, ಬ್ರಿಟನ್‌ನ ಉಪ ರಾಯಭಾರಿ ಜರೆಮಿ ಫಿಲ್ಮೋರೆ ಬೆಡ್ಬೋರ್ಡ್, ಮತ್ತಿತರರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com