ಹುಬ್ಬಳ್ಳಿ: ದ್ವಿತೀಯ ಮತ್ತು ತೃತೀಯ ಸ್ತರದ ನಗರಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ತೇಜನ ನೀಡಲು ಉತ್ತರ ಕರ್ನಾಟದಲ್ಲಿ ಇದೇ ಮೊದಲ ಬಾರಿಗೆ ಹೂಡಿಕೆ ಸಮಾವೇಶ ಇನ್ವೆಸ್ಟ್ ಕರ್ನಾಟಕವನ್ನು ಹುಬ್ಬಳ್ಳಿ ನಗರದಲ್ಲಿ ಶುಕ್ರವಾರ ನಡೆಯಲಿದೆ.
ಟೈರ್-2, ಟೈರ್-3 ಸಿಟಿಗಳಿಗೆ ಕೈಗಾರಿಕೆಗಳನ್ನು ತರಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಬೃಹತ್ ಸಮಾವೇಶದಲ್ಲಿ 1000ಕ್ಕೂ ಹೆಚ್ಚು ಗಣ್ಯರು ಭಾಗವಹಿಸುವ ನಿರೀಕ್ಷೆಗಳಿವೆ. ಇದರ ಜೊತೆಗೆ ಹಲವಾರು ಉದ್ಯಮಿಗಳು ಒಡಂಬಡಿಕೆ ಮಾಡಿಕೊಳ್ಳುವ ಸಾಧ್ಯತೆಗಲೂ ಇವೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಈ ವರೆಗೂ 5 ಬಾರಿ ಈ ರೀತಿಯ ಸಮಾವೇಶ ನಡೆದಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಿಂದ ಹೊರಗೆ ನಡೆಯುತ್ತಿರುವುದು ಇದೇ ಮೊದಲಾಗಿದೆ. ಈ ಬಾರಿ ಸುಮಾರು ರೂ.10 ಸಾವಿರ ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯಾಗುವ ವಿಶ್ವಾಸವನ್ನು ಸರ್ಕಾರ ವ್ಯಕ್ತಪಡಿಸಿದೆ.
ಬೆಳಗಾವಿ ವಿಭಾಗ ವ್ಯಾಪ್ತಿಯ ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಉತ್ತರ ಕನ್ನಡ, ವಿಜಯಪುರ, ಕಲ್ಯಾಣ ಕರ್ನಾಟಕ ಯಾದಗಿರಿ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳನ್ನೊಳಗೊಂಡ ಸಮಾವೇಶ ಇದಾಗಿದ್ದು, 6000ಕ್ಕೂ ಹೆಚ್ಚು ಉದ್ಯಮಿಗಳಿಗೆ ಸಮಾವೇಶಕ್ಕೆ ಆಹ್ವಾನ ನೀಡಲಾಗಿದೆ.
ಸಮಾವೇಶ ನಡೆಯುವ ಸ್ಥಳದಲ್ಲಿ ಈಗಾಗಲೇ ಏರ್ ಕಂಡಿಷನರ್ ಇರುವ ಟೆಂಟ್ ಗಳನ್ನು ಸ್ಥಾಪನೆ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಕೈಗಾರಿಕೆ ಹೂಡಿಕೆ ಕುರಿತಂತೆ ಮಾತುಕತೆಗಲು ನಡೆಯಲಿವೆ. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರ ಸಚಿವ ಡಿವಿ ಸದಾನಂದಗೌಡ, ಪ್ರಹ್ಲಾದ್ ಜೋಷಿ, ಸುರೇಸ್ ಅಂಗಡಿ, ಜಗದೀಶ್ ಶೆಟ್ಟರ್ ಉದ್ಘಾಟನೆ ಮಾಡಲಿದ್ದಾರೆ.
ಉದ್ಘಾಟನೆ ಬಳಿಕ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ಕುರಿತಂತೆ ಪ್ರತ್ಯೇಕ ಸಮಾವೇಶವನ್ನು ಆಯೋಜಿಸಲಾಗಿದ್ದು, ಈ ಸಮಾವೇಶದಲ್ಲಿ ಕೈಗಾರಿಕಾ ತಜ್ಞರು ಮಾತುಕತೆ ನಡೆಸಲಿದ್ದಾರೆ.
Advertisement