ಮಂಗಳೂರು ಪೊಲೀಸರ ಕೈಯಲ್ಲಿ ಸೋಡಾಬಾಟೆಲ್, ಕಲ್ಲು ಹಿಡಿದಿದ್ದ ವಿಚಾರ ಪ್ರಸ್ತಾಪ

ಮಂಗಳೂರಿನಲ್ಲಿ ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಪೊಲೀಸರ ಕೈಯಲ್ಲಿದ್ದ ಸೋಡಾಬಾಟಲು ಕಲ್ಲು ಮೇಲ್ಮನೆಯ ಸದನದಲ್ಲಿ ಪ್ರತಿಧ್ವನಿಸಿದ್ದು, ಒಂದು ಹಂತದಲ್ಲಿ ಪೊಲೀಸರು ಕೈಯಲ್ಲಿ ಸೋಡಾಬಾಟೆಲ್, ಕಲ್ಲು ಹಿಡಿದಿರುವುದನ್ನು ಸಭಾನಾಯಕರು ಒಪ್ಪಿಕೊಂಡ ಪ್ರಸಂಗ‌ಜರುಗಿತು.
ವಿಧಾನಸೌಧ
ವಿಧಾನಸೌಧ
Updated on

ಬೆಂಗಳೂರು: ಮಂಗಳೂರಿನಲ್ಲಿ ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಪೊಲೀಸರ ಕೈಯಲ್ಲಿದ್ದ ಸೋಡಾಬಾಟಲು ಕಲ್ಲು ಮೇಲ್ಮನೆಯ ಸದನದಲ್ಲಿ ಪ್ರತಿಧ್ವನಿಸಿದ್ದು, ಒಂದು ಹಂತದಲ್ಲಿ ಪೊಲೀಸರು ಕೈಯಲ್ಲಿ ಸೋಡಾಬಾಟೆಲ್, ಕಲ್ಲು ಹಿಡಿದಿರುವುದನ್ನು ಸಭಾನಾಯಕರು ಒಪ್ಪಿಕೊಂಡ ಪ್ರಸಂಗ‌ಜರುಗಿತು.
 
ಮಧ್ಯಾಹ್ನದ ಬಳಿಕ ಸದನ ಸಮಾವೇಶಗೊಂಡಾಗ ಕಾನೂನು ಸುವ್ಯವಸ್ಥೆ ಕುರಿತ ಚರ್ಚೆಯ ಮೇಲೆ‌ ಕಾಂಗ್ರೆಸಿನ ನಾರಾಯಣಸ್ವಾಮಿ ಮಾತನಾಡಿ, ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ 3೦೦ ಜನರ ಪ್ರತಿಭಟನೆಗೆ 2 ಸಾವಿರ ಪೊಲೀಸರನ್ನು ಕಳುಹಿಸುವ ಅಗತ್ಯವೇನಿತ್ತು?. ಪೊಲೀಸರು ಕಲ್ಲು ಸೋಡಾಬಾಟಲ್ ಹಿಡಿದಿದ್ದು ಏಕೆ? ಎಂದು ಪ್ರಶ್ನಿಸಿದರು.
 
ಇದಕ್ಕೆ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಉತ್ತರಿಸಿ, ಮಂಗಳೂರಿನಲ್ಲಿ ಪೊಲೀಸರ ಮೇಲೆ ಕಲ್ಲು ಹೊಡೆದಾಗ, ಅವರ ಮೇಲೆ‌ದಾಳಿ ನಡೆದಾಗ ಮಾತ್ರ ಪೊಲೀಸರು ಗೋಲಿಬಾರ್ ಮಾಡುತ್ತಾರೆ. ಯಾರ ಮೇಲೂ ವಿನಾಕಾರಣ ಗೋಲಿಬಾರ್ ಮಾಡುವುದಿಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಪೊಲೀಸರು ಸೋಡಾ ಬಾಟಲ್ ಹಿಡಿದಿರಬಹುದೇನೋ? ಎಂದು ಸಭಾನಾಯಕರು ಪೊಲೀಸರ ಕ್ರಮವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು. 
 
ಆಗ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಪೊಲೀಸರೇ ಸೋಡಾಬಾಟೆಲ್, ಕಲ್ಲುತೆಗೆದುಕೊಂಡಿದ್ದಾರೆ ಎನ್ನುವುದನ್ನು ಕಡತದಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.
 
ಆಗ ಎಸ್.ಆರ್.ಪಾಟೀಲ್, ಪೊಲೀಸರಿಗೆ ಕಲ್ಲು ಮತ್ತು ಬಾಟೆಲ್ ನಲ್ಲಿ ಹೊಡೆಯಲು ಯಾವ ಕಾನೂನು ಅವಕಾಶ‌ಮಾಡಿಕೊಡುತ್ತದೆ? ಅವರ ಬಳಿ ಇರುವ ಶಸ್ತ್ರಾಸ್ತ್ರಗಳು ಏನಾದವು?. ಅವರು ತಮ್ಮ‌ಜೀವ ಉಳಿಸಿಕೊಳ್ಳಲು ಲಾಠಿಯಿಂದ ಹೊಡೆಯಬಹುದಷ್ಟೆ? ಎಂದರು.

ಸಭಾನಾಯಕರ ಪರ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ಸಭಾನಾಯಕರು ಸೋಡಾಬಾಟಲಿನಿಂದ ಹೊಡೆದಿದ್ದಾರೆ ಎನ್ನಲಿಲ್ಲ. ಸೋಡಾ‌ಬಾಟಲ್ ಹಿಡಿದುಕೊಂಡಿರಬಹುದು ಎಂದು ಹೇಳಿದ್ದಾರಷ್ಟೆ ಎಂದರು. ಪೊಲೀಸರ ಬಗ್ಗೆ‌ ಪೊಲೀಸ್ ಅಗಿದ್ದ ತಮಗೆ ಚೆನ್ನಾಗಿ ಗೊತ್ತಿದೆ‌ ಎಂದರು.
 
ಆಗ ಮಧ್ಯಪ್ರವೇಶಿಸಿದ ಹೊರಟ್ಟಿ, ಸರಿಯಾದವರನ್ನೇ ಮಂತ್ರಿ ಮಾಡಿದ್ದಾರೆ. ಚೆನ್ನಾಗಿ ನಾಲಿಗೆ ಬದಲಾಯಿಸುವುದನ್ನು ಕಲಿತಿದ್ದಾರೆ ಎಂದು ಲೇವಡಿ ಮಾಡಿದರು.  ಮತ್ತೆ ನಾರಾಯಣಸ್ವಾಮಿ ಮಾತನಾಡಿ,‌ ನಮಗೆ ವಿಪಕ್ಷದಲ್ಲಿ ಕುಳಿತು ಅಭ್ಯಾಸವಿಲ್ಲ. ನಿಮಗೆ ಆಡಳಿತ‌ನಡೆಸಿ ರೂಢಿಯಿಲ್ಲ ಎಂದು ಲೇವಡಿ ಮಾಡಿದರು.
 
ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಪೊಲೀಸರು ಸೋಡಾ ಬಾಟಲ್ ಹಿಡಿದಿರಬಹುದೇನೋ? ಎಂದಿದ್ದಾರೆ. ಅಮಾಯಕರ ಮೇಲೆ ಏಕಾಏಕಿ ಲಾಠಿಚಾರ್ಜ್ ಮಾಡಿದ್ದಾರೆ. ಪ್ರಾಣರಕ್ಷಣೆಗಾಗಿ ಮಸೀದಿಯಲ್ಲಿ ಅವಿತಿಟ್ಟುಕೊಂಡವರ ಮೇಲೆ ಗೋಲಿಬಾರ್ ಮಾಡಿದ್ದಾರೆ. ಪೊಲೀಸರು ಎರಡು ಹೆಣ ಬೀಳಬೇಕೆಂದು ಬಹಿರಂಗವಾಗಿ ಹೇಳುತ್ತಿದ್ದ ದೃಶ್ಯ ಬಹಿರಂಗವಾಗಿದೆ ಎಂದರು. 
 
ಕೇರಳದಿಂದ ಭಯೋತ್ಪಾದಕರು ಬಂದಿದ್ದರು ಎಂದು ಬಿಜೆಪಿ ಮುಖಂಡರು ಹೇಳುವುದು ಸರಿಯಲ್ಲ. ಮಂಗಳೂರಿನ ಅಭಿವೃದ್ಧಿಗೆ ಕೇರಳದ ಸಹಕಾರ ಇದೆ. ಗೋಲಿಬಾರ್ ಪ್ರಕರಣದ ತನಿಖೆಗೆ ಸದನ ಸಮಿತಿ ರಚಿಸಬೇಕು ಎಂದು ನಾರಾಯಣಸ್ವಾಮಿ ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com