
ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿಷಯ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸಲು ಸುಪ್ರಿಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿರುವುದು ಸ್ವಾಗತಾರ್ಹ ಸಂಗತಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಉತ್ತರ ಕರ್ನಾಟಕದ ಜನರ ಪಾಲಿಗೆ ಇದು ಬಹಳ ಅತ್ಯಂತ ಸಂತಸದ ಸಂಗತಿಯಾಗಿದೆ. ದಶಕಗಳಿಂದ ವಿವಾದಕ್ಕೀಡಾಗಿದ್ದ ಈ ನೀರಿನ ಬಳಕೆ ಮಾಡಿಕೊಳ್ಳಲು ಇದ್ದ ತೊಡಕು ಇದರಿಂದಾಗಿ ಕೊನೆಯಾದಂತಾಗಿದೆ. ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದ 4 ಜಿಲ್ಲೆಯ 11 ತಾಲ್ಲೂಕಿನ ಗ್ರಾಮಗಳು ಹಾಗೂ ಜನರು ಇದರಿಂದ ಸಮಾಧಾನದ ಉಸಿರು ಬಿಡುವಂತಾಗಿದೆ ಎಂದಿದ್ದಾರೆ.
ಈ ತೀರ್ಪಿನಿಂದಾಗಿ ಮಹದಾಯಿ ಪ್ರದೇಶದಲ್ಲಿ ತಕ್ಷಣವೇ ಕಾಮಗಾರಿ ಕೈಗೊಳ್ಳಲು ಅನುಕೂಲ ಮಾಡಿಕೊಡುವಂತಾಗುತ್ತದೆ. ಸುಪ್ರೀಂ ಕೋರ್ಟಿನ ಈ ಸೂಚನೆಯಂತೆ ಆದಷ್ಟು ಬೇಗ ಕೇಂದ್ರ ಸರಕಾರ ಗೆಜೆಟ್ ಹೊರಡಿಸುವಂತೆ ವಿನಂತಿಸುತ್ತೇನೆ. ಇದೇ ವೇಳೆ ಈ ಭಾಗದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಅಗತ್ಯವಿರುವ ಅನುದಾನವ ನೀಡುವಂತೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಇದರ ಬಗ್ಗೆ ಮತ್ತೊಮ್ಮೆ ಮುಖ್ಯಮಂತ್ರಿಗಳ ಗಮನ ಸೆಳೆಯುವುದಾಗಿ ಶೆಟ್ಟರ್ ಹೇಳಿದ್ದಾರೆ.
ಮಹದಾಯಿ ನದಿ ನೀರು ಹಂಚಿಕೆ ವಿವಾದ ಕುರಿತು ಗೆಜೆಟ್ ನೋಟಿಫಿಕೇಷನ್ ಹೊರಡಿಸಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ್ದು, ಗೋವಾ, ಮಹಾರಾಷ್ಟ್ರ , ಕರ್ನಾಟಕ ಮೂರು ರಾಜ್ಯಗಳಿಗೂ ಸಮರ್ಥ ದಾಖಲೆ ಸಲ್ಲಿಸಲು ಸೂಚಿಸಲಾಗಿದೆ. ಈ ಮೂಲಕ ಉತ್ತರ ಕರ್ನಾಟಕದ ಜನರ ಹೋರಾಟಕ್ಕೆ ಕೊನೆಗೂ ಮನ್ನಣೆ ಸಿಕ್ಕಿದಂತಾಗಿದೆ. ಅಧಿಸೂಚನೆ ಹೊರಡಿಸಿದ ಹಿನ್ನೆಲೆ ಮೂರು ರಾಜ್ಯಗಳು ಸಮರ್ಥ ದಾಖಲೆ ಸಲ್ಲಿಸಲು ಸೂಚಿಸಲಾಗಿದ್ದು, ದಾಖಲೆ ಸಲ್ಲಿಕೆಯಾದ ಬಳಿಕ ನಿರಂತರ ವಿಚಾರಣೆ ನಡೆಸಲಾಗುವುದು ಎಂದು ಕೂಡ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಇದಕ್ಕೆ ಗೋವಾ, ಮಹಾರಾಷ್ಟ್ರ ಸಹಮತ ಸೂಚಿಸಿದೆ.
Advertisement