ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯಲ್ಲಿ ಬಂಡೆಯೊಡೆದರೆ ಕಾದಿದೆ ಅಪಾಯ !

ಮುಳ್ಳೂರು – ಕುದುರೆಮುಖ ಅಭಯಾರಣ್ಯದ ವ್ಯಾಪ್ತಿಯ ಮಾಳ – ಮುಳ್ಳೂರು ರಸ್ತೆ ಅಂಚಿನಲ್ಲಿರುವ ಬಂಡೆಯನ್ನು ರಸ್ತೆ ಅಗಲೀಕರಣಕ್ಕಾಗಿ ಒಡೆದರೆ ಸ್ಥಳೀಯ ಪರಿಸರಕ್ಕೆ ಭಾರಿ ಧಕ್ಕೆಯಾಗುತ್ತದೆ ಎಂದು ಪರಿಸರ ತಜ್ಞರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಕುದುರೆಮುಖ (ಸಂಗ್ರಹ ಚಿತ್ರ)
ಕುದುರೆಮುಖ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಮುಳ್ಳೂರು – ಕುದುರೆಮುಖ ಅಭಯಾರಣ್ಯದ ವ್ಯಾಪ್ತಿಯ ಮಾಳ – ಮುಳ್ಳೂರು ರಸ್ತೆ ಅಂಚಿನಲ್ಲಿರುವ ಬಂಡೆಯನ್ನು ರಸ್ತೆ ಅಗಲೀಕರಣಕ್ಕಾಗಿ ಒಡೆದರೆ ಸ್ಥಳೀಯ ಪರಿಸರಕ್ಕೆ ಭಾರಿ ಧಕ್ಕೆಯಾಗುತ್ತದೆ ಎಂದು ಪರಿಸರ ತಜ್ಞರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
 
ಈ ರಸ್ತೆಯಲ್ಲಿರುವ ಬಂಡೆ ಸೂಕ್ಷ್ಮ ಜೈವಿಕ ಪರಿಸರದಲ್ಲಿದೆ. ಸ್ಥಳೀಯ ಬೆಟ್ಟ –ಗುಡ್ಡಗಳ ಮಣ್ಣು ಜಾರದಂತೆ ಇದು ಒತ್ತಾಸೆಯಾಗಿ ನಿಂತಿದೆ. ಅಲ್ಲದೇ ಬಂಡೆಯ ಹಿಂದಿನ ಅಂತರ್ಭಾಗದಲ್ಲಿ ಭಾರಿ ನೀರಿನ ಹರಿವು ಇದೆ.  ಇಲ್ಲಿ ರಸ್ತೆ ಅಗಲೀಕರಣವಾದರೆ ಸ್ಥಳೀಯ ಕುದುರೆಮುಖದ ಜತೆಗೆ ಸುತ್ತಲಿನ ಜನವಸತಿ ಪ್ರದೇಶದ ಸುಸ್ಥಿರತೆಗೂ ಅಪಾಯ ಉಂಟಾಗಬಹುದು ಎಂದು ಹೇಳಲಾಗಿದೆ.
 
ಯು.ಎನ್.ಐ. ಪ್ರತಿನಿಧಿಯೊಂದಿಗೆ ಮಾತನಾಡಿದ ಪರಿಸರ ತಜ್ಞ ದಿನೇಶ್ ಹೊಳ್ಳ, “ಕುದುರೆಮುಖ ಪರಿಸರಕ್ಕೆ ಧಕ್ಕೆಯಾಗದಂತೆ ಬೆಟ್ಟ – ಗುಡ್ಡಗಳ ಮಣ್ಣು ಜಾರಿ ಅನಾಹುತವಾಗದಂತೆ ತಡೆಯುತ್ತಿರುವುದೇ ಅಲ್ಲಿನ ಬಂಡೆಗಳು ಮತ್ತು ಕಾಡು ಹುಲ್ಲು. ಇಲ್ಲಿ ಸುರಿಯುವ ಮಳೆ ಪ್ರಮಾಣವೂ ಅತ್ಯಧಿಕ. ಇದನ್ನೆಲ್ಲ ಸಮತೋಲನಗೊಳಿಸಿ ಸ್ಥಳೀಯ ಪರಿಸರಕ್ಕೆ ಭದ್ರಕೋಟೆಯಂತೆ ನಿಂತ ಬಂಡೆಗಳನ್ನು ಒಡೆದರೆ ಅನಾಹುತ ಕಟ್ಟಿಟ್ದದ್ದು” ಎನ್ನುತ್ತಾರೆ.
 
ಬಂಡೆಗಳ ಕೆಳಗೆ ಭಾರಿ ಪ್ರಮಾಣದ ಜಲ ಒರತೆಯೂ ಇದೆ. ರಸ್ತೆ ಅಗಲೀಕರಣದಿಂದ  ಅವುಗಳಿಗೆ ಧಕ್ಕೆಯಾಗಿ ಜಲ ಸ್ಫೋಟವಾಗುವುದರ ಜತೆಗೆ ನಿರಂತರವಾಗಿ ಮಣ್ಣು ಕುಸಿಯಲು ಆರಂಭಿಸುತ್ತದೆ. ಮುಂದೆ ಏನೇ ಮಾಡಿದರೂ ಸರಿಪಡಿಸಲಾಗದಷ್ಟು ಮಟ್ಟಿಗೆ ಪರಿಸರ ಹಾನಿಗೊಳ್ಳುತ್ತದೆ. ಈಗಾಗಲೇ ಅಭಿವೃದ್ಧಿ ನೆಪದಲ್ಲಿ ಕುದುರೆಮುಖ ಅರಣ್ಯ ಪರಿಸರದ ಸೂಕ್ಷ್ಮ ಜೀವಜಾಲಕ್ಕೆ ಧಕ್ಕೆಯಾಗಿದೆ.  ವನ್ಯಮೃಗಗಳ ಸಂಖ್ಯೆ ಭಾರಿ ಕುಸಿತ ಕಂಡಿದೆ ಎಂದು ಅವರು ವಿವರಿಸುತ್ತಾರೆ.
 
ಚಾರ್ಮಾಡಿ, ಕೊಡಗು ಪರಿಸರದಲ್ಲಿ ಹೆಚ್ಚಿದ ಮಾನವ ಹಸ್ತಕ್ಷೇಪದಿಂದಾಗಿಯೇ ಅಲ್ಲಿ ಪದೇಪದೇ ಬೆಟ್ಟದ ಮಣ್ಣು ಕುಸಿಯುತ್ತಿದೆ. ವಾರ, ತಿಂಗಳುಗಟ್ಟಲೇ ರಸ್ತೆ ಬಂದ್ ಮಾಡಬೇಕಾದ ದುಸ್ಥಿತಿ ಮತ್ತೆಮತ್ತೆ ಉಂಟಾಗುತ್ತಿದೆ. ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯಲ್ಲಿಯೂ ಬಂಡೆಗಳನ್ನು ಒಡೆದರೆ ಇದೇ ಸ್ಥಿತಿ ಉದ್ಬವಿಸುತ್ತದೆ ಎಂದು ಎಚ್ಚರಿಸುತ್ತಾರೆ.
 
 ಬೆಟ್ಟ – ಗುಡ್ಡಗಳ ಪ್ರದೇಶದಲ್ಲಿ ತಿರುವು – ಮುರುವು ಸಹಜ. ಬಯಲು ಪ್ರದೇಶಗಳಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳು ಚಲಿಸುವಷ್ಟೇ ವೇಗದಲ್ಲಿ ಇಲ್ಲಿಯೂ ಸಂಚರಿಸಿದರೆ ಅಪಘಾತಗಳಾಗುತ್ತವೆ. ವೇಗಮಿತಿ, ಎಚ್ಚರಿಕೆ ಫಲಕಗಳನ್ನು ಹೆಚ್ಚಿಸುವುದು, ತಿರುವುಗಳಲ್ಲಿ ಬಂಡೆಗಳಲ್ಲಿರುವಲ್ಲಿ ರಸ್ತೆ ಉಬ್ಬುಗಳ ಜತೆಗೆ ದಿನದ ಎಲ್ಲ ವೇಳೆಯೂ ಕಾಣುವಂತೆ ಪ್ರತಿಫಲಕಗಳನ್ನು ಹಾಕುವುದು ಪರಿಹಾರ. ಅಪಘಾತಕ್ಕೆ ಬಂಡೆಗಳೇ ಕಾರಣವಾಗಿದ್ದರೆ ದಿನನಿತ್ಯವೂ ಇಲ್ಲಿ ಅಪಘಾತಗಳು ನಡೆಯಬೇಕಿತ್ತು. ಆದರೆ ಹಾಗೇ ಆಗಿಲ್ಲ ಎಂದ ಮೇಲೆ ವಸ್ತುಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದು ಪರಿಸರ ತಜ್ಞರು ಹೇಳುತ್ತಾರೆ.


ವಿಶೇಷ ವರದಿ: ಕುಮಾರ ರೈತ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com