ಮಲಪ್ರಭೆಯಲ್ಲಿನ ನೈಸರ್ಗಿಕ ಹರಿವಿಗೂ ಸರ್ಕಾರ ಗಮನ ಹರಿಸಲಿ!

ಜಿಲ್ಲೆಯ ಗುಳೇದಗುಡ್ಡದ ಮಾಜಿ ಶಾಸಕ ಬಿ.ಎಂ. ಹೊರಕೇರಿ ಅವರ ಮಲಪ್ರಭಾ ನದಿಗೆ ಮಹಾದಾಯಿ ಜೋಡಣೆಗಾಗಿ ಆರಂಭಿಸಿದ್ದ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಿರುವ ಹಿನ್ನೆಲೆಯಲ್ಲಿ ಮಲಪ್ರಭಾ ನದಿಯಲ್ಲಿ ವರ್ಷಪೂರ್ತಿ ನೈಸರ್ಗಿಕ ಹರಿವನ್ನು ಕಾಪಾಡಿಕೊಳ್ಳುವ ಬಗೆಗೆ ಸರ್ಕಾರ ಕ್ರಮಕ್ಕೆ ಮುಂದಾಗಬೇಕಿದೆ.
ಮಲಪ್ರಭಾ ನದಿ
ಮಲಪ್ರಭಾ ನದಿ

ಬಾಗಲಕೋಟೆ: ಜಿಲ್ಲೆಯ ಗುಳೇದಗುಡ್ಡದ ಮಾಜಿ ಶಾಸಕ ಬಿ.ಎಂ. ಹೊರಕೇರಿ ಅವರ ಮಲಪ್ರಭಾ ನದಿಗೆ ಮಹಾದಾಯಿ ಜೋಡಣೆಗಾಗಿ ಆರಂಭಿಸಿದ್ದ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಿರುವ ಹಿನ್ನೆಲೆಯಲ್ಲಿ ಮಲಪ್ರಭಾ ನದಿಯಲ್ಲಿ ವರ್ಷಪೂರ್ತಿ ನೈಸರ್ಗಿಕ ಹರಿವನ್ನು ಕಾಪಾಡಿಕೊಳ್ಳುವ ಬಗೆಗೆ ಸರ್ಕಾರ ಕ್ರಮಕ್ಕೆ ಮುಂದಾಗಬೇಕಿದೆ.

ಬಾಗಲಕೋಟೆ ಜಿಲ್ಲೆ ಸೇರಿದಂತೆ ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳ ಜನತೆಯ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ೪೫ ವರ್ಷಗಳ ಹಿಂದೆ ಮಾಜಿ ಶಾಸಕ ದಿ. ಬಿ.ಎಂ. ಹೊರಕೇರಿ ಮಹಾದಾಯಿ ನೀರಿಗಾಗಿ ಹೋರಾಟ ಆರಂಭಿಸಿದ್ದರು. ಸತತ ಹೋರಾಟದ ಫಲವಾಗಿ ಇಂದು ಮೊದಲ ಹಂತವಾಗಿ 13 ಟಿಎಂಸಿ ನೀರು ಮಹಾದಾಯಿಂದ ಮಲಪ್ರಭಾ ನದಿಗೆ ಸೇರಿಸಿಕೊಳ್ಳಲು ಅವಕಾಶ ಸಿಕ್ಕಿದೆ.

ಮಹಾದಾಯಿಯಿಂದ ಲಭ್ಯವಾಗಿರುವ ಈ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಸರ್ಕಾರ ಸೂಕ್ತ ಯೋಜನೆಗಳನ್ನು ರೂಪಿಸುವ ಜತೆಗೆ ವರ್ಷಪೂರ್ತಿ ಬತ್ತುವ ಮಲಪ್ರಭಾ ನದಿಯಲ್ಲಿ ನೈಸರ್ಗಿಕ ಹರಿವನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕಿದೆ. ನದಿಯಲ್ಲಿ ನೈಸರ್ಗಿಕ ಹರಿವನ್ನು ಕಾಪಾಡಿಕೊಳ್ಳುವ ಮೂಲಕ ನದಿ ತೀರದ ಜನತೆ ಹಾಗೂ ನದಿಯಲ್ಲಿನ ಜಲಚರ ಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕಿದೆ.

ಈ ಹಿಂದೆ ಮಹಾರಾಷ್ಟ್ರ ಸರ್ಕಾರ ಉಜನಿ ಜಲಾಶಯದಿಂದ ವಿಜಯಪುರದಲ್ಲಿ ಹರಿಯುವ ಭೀಮಾ ನದಿಗೆ ನೀರುವ ಬಿಡುವಲ್ಲಿ ಮೀನಮೇಷ ಮಾಡಿದ ವೇಳೆ ಅಲ್ಲಿನ ರೈತ ಹೋರಾಟಗಾರ ಪಂಚಪ್ಪ ಕಲಬುರ್ಗಿ ಸುರ್ಪಿಂ ಕೋರ್ಟ್ ಮೆಟ್ಟಿಲು ಹತ್ತಿದ್ದರು. ಆಗ ನ್ಯಾಯಾಲಯ ಜಲಚರ ಪ್ರಾಣಿಗಳು, ಜನ,ಜಾನುವಾರುಗಳ ರಕ್ಷಣೆಗಾಗಿ ನದಿಯಲ್ಲಿ ನೈಸರ್ಗಿಕ ಹರಿವು ಕಾಪಾಡಬೇಕು ಎನ್ನುವ ಆದೇಶ ಹೊರಡಿಸಿತ್ತು ಎನ್ನುವುದು ಗಮನಾರ್ಹ.

ರಾಜ್ಯ ಸರ್ಕಾರ ಇದೀಗ ಮಲಪ್ರಭಾ ನದಿಯಲ್ಲಿನ ಜಲಚರ ಪ್ರಾಣಿಗಳು, ಜನ, ಜಾನುವಾರುಗಳ ರಕ್ಷಣೆಗಾಗಿ ವರ್ಷ ಪೂರ್ತಿ ನೈಸರ್ಗಿಕ ಹರಿವನ್ನು ಕಾಪಾಡಿಕೊಂಡಾಗ ಮಾತ್ರ ನದಿ ತೀರದ ಜನತೆಗೆ ಹೋರಾಟದ ಫಲ ಲಭ್ಯವಾಗಲಿದೆ. ಇಲ್ಲದೆ ಹೋದಲ್ಲಿ ನವಿಲು ತೀರ್ಥ ಜಲಾಶಯದ ಕೆಳ ಭಾಗದಲ್ಲಿನ ನದಿ ತೀರದ ಜನ, ಜಾನುವಾರುಗಳಿಗೆ ಹೋರಾಟದ ಫಲ ಗಗನ ಕುಸುಮವಾಗಲಿದೆ. ಈಗಲೇ ಸರ್ಕಾರ ಮಹಾದಾಯಿ ನೀರು ಬಳಕೆ ಯೋಜನೆ ರೂಪಿಸುವಾಗ ನದಿಯಲ್ಲಿನ ನೈಸರ್ಗಿಕ ಹರಿವಿನ ಬಗೆಗೂ ಗಂಭೀರ ಚಿಂತನೆಯ ಅಗತ್ಯವಿದೆ.

ನದಿಯಲ್ಲಿ ನೈಸರ್ಗಿಕ ಹರಿವನ್ನು ಕಾಪಾಡಿಕೊಳ್ಳುವುದರಿಂದ ಸವದತ್ತಿ, ರಾಮದುರ್ಗ, ನರಗುಂದ, ಬಾದಾಮಿ, ಹುನಗುಂದ ತಾಲೂಕುಗಳ ನದಿ ತೀರದ ಜನ,ಜಾನುವಾರು ಹಾಗೂ ಜಲಚರ ಪ್ರಾಣಿಗಳ ರಕ್ಷಣೆ ಹಾಗೂ ಕುಡಿವ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಲಿದೆ. ಮಲಪ್ರಭಾ ನದಿಯಲ್ಲಿ ನೈಸರ್ಗಿಕ ಹರಿವು ಕಾಪಾಡಿಕೊಳ್ಳದೇ ಹೋದಲ್ಲಿ ಮಹಾದಾಯಿಂದ ಲಭ್ಯವಾಗುವ ನೀರು ಕೇವಲ ಕೆಲವರ ಪಾಲಾಗಲಿದೆ ಎನ್ನುವ ಭಯ ಕೂಡ ಜಲಾಶಯ ಕೆಳಭಾಗದ ಜನತೆಯಲ್ಲಿ ಇದ್ದೆ ಇದೆ.
  
ಮಲಪ್ರಭಾ ನದಿ ಕಾಯಂ ಆಗಿ ಬತ್ತುವುದಿಂದ ನದಿಯಲ್ಲಿ ಜೀವ ಸಂಕುಲ ನಾಶವಾಗಲಿದೆ. ಜನ ಮತ್ತು ಜಾನುವಾರುಗಳು ಕುಡಿವ ನೀರಿಗಾಗಿ ಪರಿತಪಿಸುವುದು ತಪ್ಪದು. ನದಿಯಲ್ಲಿ ನೈಸರ್ಗಿಕ ಹರಿವು ಕಾಪಾಡಿ ಎನ್ನುವ ಕಾರಣವನ್ನೇ ಮುಂದಿಟ್ಟುಕೊಂಡು ನದಿ ಪಾತ್ರದ ಜನತೆ ಮತ್ತೊಂದು ಹೋರಾಟಕ್ಕೆ ಅಣಿವಾಗದಂತೆ ರಾಜ್ಯ ಸರ್ಕಾರ ನೀರು ಬಳಕೆ ಯೋಜನೆ ರೂಪಿಸುವಾಗಲೇ ಮುನ್ನೆಚ್ಚರಿಕೆ ವಹಿಸಬೇಕು ಎನ್ನುವುದು ನದಿ ತೀರದ ಜನತೆಯ ಒಡಲಾಳದ ಆಶಯವಾಗಿದೆ.

ಮಹಾದಾಯಿ ನದಿ ನೀರಿಗಾಗಿ ನಡೆದ ಹೋರಾಟದ ಮೊದಲ ಹಂತವಾಗಿ ಸಿಕ್ಕಿರುವ ನೀರಿನ ಜತೆಗೆ ಮಹಾದಾಯಿ ನ್ಯಾಯಾಧೀಕರಣ ನೀಡುವ ಅಂತಿಮ ವರದಿಯಲ್ಲಿ ಇನ್ನಷ್ಟು ನೀರು ಸಿಕ್ಕುವ ಎಲ್ಲ ಸಾಧ್ಯತೆಗಳು ಇರುವುದರಿಂದ ಈಗಲೇ ಸರ್ಕಾರ ಮಲಪ್ರಭಾ ನದಿಯಲ್ಲಿ ನೈಸರ್ಗಿಕ ಹರಿವು ಕಾಪಾಡಿಕೊಳ್ಳುವ ಬಗ್ಗೆ ಆದ್ಯ ಗಮನ ಹರಿಸಲಿ. ಆ ಮೂಲಕ ಜಲಾಶಯ ಕೆಳಭಾಗದ ಜನತೆಗೂ ನ್ಯಾಯ ಒದಗಿಸುವ ಗುರುತರ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ನಿಭಾಯಿಸಬೇಕು ಎನ್ನುವುದು ನದಿ ತೀರದ ಜನತೆ ಆಶಯವಾಗಿದೆ.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com