ಟೌನ್ ಹಾಲ್
ಟೌನ್ ಹಾಲ್

ಬೆಂಗಳೂರು: ಇನ್ಮುಂದೆ ಟೌನ್ ಹಾಲ್ ಎದುರು ಪ್ರತಿಭಟನೆ ನಡೆಸೋಹಾಗಿಲ್ಲ!

ಬೆಂಗಳೂರಿನಲ್ಲಿ ಪ್ರತಿಭಟನೆ, ಹೋರಾಟಗಳ ಕೇಂದ್ರ ಸ್ಥಳವಾಗಿದ್ದ ಪುರಭವನದಲ್ಲಿ ಇನ್ನು ಮುಂದೆ ಯಾವುದೇ ಮುಷ್ಕರ, ಪ್ರತಿಭಟನೆಯಂತಹ ಚಟುವಟಿಕೆಗಳಿಗೆ ಅನುಮತಿ ನೀಡದಿರಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಣಯ ಕೈಗೊಂಡಿದೆ.
Published on

ಬೆಂಗಳೂರು: ಬೆಂಗಳೂರಿನಲ್ಲಿ ಪ್ರತಿಭಟನೆ, ಹೋರಾಟಗಳ ಕೇಂದ್ರ ಸ್ಥಳವಾಗಿದ್ದ ಪುರಭವನದಲ್ಲಿ ಇನ್ನು ಮುಂದೆ ಯಾವುದೇ ಮುಷ್ಕರ, ಪ್ರತಿಭಟನೆಯಂತಹ ಚಟುವಟಿಕೆಗಳಿಗೆ ಅನುಮತಿ ನೀಡದಿರಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಣಯ ಕೈಗೊಂಡಿದೆ.

ಶನಿವಾರ ನಡೆದ ಮಾಸಿಕ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಣಯವನ್ನು ಅಂಗೀಕರಿಸಲಾಯಿತು. 

ಅನೇಕ ಸಂಘ–ಸಂಸ್ಥೆಗಳು ಅನುಮತಿ ಪಡೆಯದೆ ಪುರಭವನದ ಪ್ರತಿಭಟನೆ ನಡೆಸುತ್ತಿವೆ. ಇದರಿಂದ ಪುರಭವನದ ಸಭಾಂಗಣದಲ್ಲಿ ಸಭೆ ಸಮಾರಂಭ, ಕಾರ್ಯಕ್ರಮಗಳಿಗೆ ಹಣ ಪಾವತಿಸಿದವರಿಗೆ ತೊಂದರೆಯಾಗುತ್ತಿದೆ. ಜನರು ಪುರಭವನವನ್ನು ಕಾಯ್ದಿರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಪಾಲಿಕೆಗೆ ಆರ್ಥಿಕ ನಷ್ಟವಾಗುತ್ತಿದೆ  ಎಂದು ಸಭೆಯನ್ನುದ್ದೇಶಿಸಿ ಮೇಯರ್‌ ಗೌತಮ್‌ಕುಮಾರ್‌ ಹೇಳಿದರು. 

 ಜನನಿಭಿಡ ಪ್ರದೇಶವಾಗಿರುವ ಪುರಭವನದ ಎದುರು ಪ್ರತಿಭಟನೆ ನಡೆಸುವುದರಿಂದ  ವಾಹನಗಳ ದಟ್ಟಣೆಯೂ ಹೆಚ್ಚುತ್ತದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಇನ್ನು ಮುಂದೆ ಅಲ್ಲಿ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗದು ಎಂದರು. 

ಆದರೆ, ಪ್ರತಿಭಟನೆ ಪ್ರತಿಯೊಬ್ಬರ ಹಕ್ಕು.  ಅದನ್ನು ನಾವು ಹತ್ತಿಕ್ಕುವುದಿಲ್ಲ. ಈಗಾಗಲೇ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲಿ ಸುಮಾರು 5,000 ಜನ ಸೇರಿ ಧರಣಿ, ಮುಷ್ಕರ ಮಾಡುಬಹುದಾದ ವ್ಯವಸ್ಥೆಯಿದೆ. 560ಕ್ಕೂ ಹೆಚ್ಚು ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. 

ಜೊತೆಗೆ, ಮೌರ್ಯ ವೃತ್ತದಲ್ಲಿ ಕೂಡ ಪ್ರತಿಭಟನೆಗೆ ಅವಕಾಶ ನೀಡಲಾಗುತ್ತದೆ. ವಾಹನಗಳ ನಿಲುಗಡೆಗೂ ವ್ಯವಸ್ಥೆ ಮಾಡಲಾಗುವುದು ಎಂದು ಮೇಯರ್ ಪ್ರಕಟಿಸಿದರು. 

ನಂತರ ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್‌, ಪಾಲಿಕೆ ನಿರ್ಣಯದ ಕುರಿತು ತಕ್ಷಣ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗುವುದು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com