

ಬೆಂಗಳೂರು: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ದೇಶಾದ್ಯಂತ ಜನರಲ್ಲಿ ಅರಿವು ಮೂಡಿಸಲು ಬಿಜೆಪಿ ಹಮ್ಮಿಕೊಂಡಿರುವ ಮನೆ ಮನೆ ಸಂಪರ್ಕ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭಾನುವಾರ ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಸಂತ ನಗರದಲ್ಲಿ ಚಾಲನೆ ನೀಡಲಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬಿಜೆಪಿ ದೇಶಾದ್ಯಂತ ಮೂರು ಕೋಟಿ ಮನೆ ಮನೆಗಳಿಗೆ ಹೋಗಿ ಜನರಲ್ಲಿ ತಿಳುವಳಿಕೆ ಮೂಡಿಸುವ ಕಾರ್ಯಕ್ರಮವನ್ನು ಆರಂಭಿಸಿದ್ದು ಕರ್ನಾಟಕದಲ್ಲಿ 30 ಲಕ್ಷ ಮನೆಗಳಿಗೆ ಹೋಗುವ ಉದ್ದೇಶವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ ಮುರಳೀಧರ್ ರಾವ್ ತಿಳಿಸಿದರು.
ಭಾರತ ವಿಭಜನೆಯಾಗಿದ್ದು ಧರ್ಮದ ಆಧಾರದ ಮೇಲೆ, ಕೋಟ್ಯಂತರ ಜನ ಮುಸಲ್ಮಾನರು ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ನೆಲೆಸಲು ನಿರ್ಧರಿಸಿದರು ಇದೀಗ ಮೂರು ಇಸ್ಲಾಮಿಕ್ ಗಣರಾಜ್ಯ ದೇಶಗಳಲ್ಲಿ ನೆಲೆಸಿರುವ ಮುಸಲ್ಮಾನರಿಗೆ ಪೌರತ್ವ ನೀಡುವಂತೆ ಕೇಳುವುದು ವಿಚಾರಹೀನವಾದ ಮತ್ತು ಅತಾರ್ಕಿಕಬದ್ಧವಾದ ಬೇಡಿಕೆಯಾಗಿದೆ, ಅಂತವರಿಗೆ ನಾವು ಪೌರತ್ವ ನೀಡುವುದಿಲ್ಲ, ಅದೇನಾಗುತ್ತದೆಯೋ ನೋಡೋಣ ಎಂದಿದ್ದಾರೆ.
ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯನವರು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನಗಳ ಮುಸಲ್ಮಾನರಿಗೆ ಪೌರತ್ವ ಏಕೆ ನೀಡಬೇಕು ಎಂಬುದಕ್ಕೆ ಮನದಟ್ಟಾಗುವಂತಹ ನಿಖರ ವಿವರಣೆ ಕೊಡಲಿ ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ಈ ಉತ್ತಮ ನಡೆಯನ್ನು ವಿರೋಧಿಸುವ ಕಾಂಗ್ರೆಸ್, ಕಮ್ಯೂನಿಸ್ಟರು ಮತ್ತು ಉಗ್ರ ಮೂಲಭೂತವಾದಿಗಳು ತಮ್ಮ ವರ್ತನೆಯಿಂದಲೇ ಅಮಾನವೀಯರು ಎಂದು ತೋರಿಸಿಕೊಟ್ಟಿದ್ದಾರೆ ಎಂದು ಆಪಾದಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕಾಂಗ್ರೆಸ್ ಮತ್ತು ಪಾಕಿಸ್ತಾನ ಒಂದೇ ರೀತಿ ಮಾತನಾಡುತ್ತಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿ ಕುಮಾರ್ ಆರೋಪಿಸಿದರು.