
ಮಡಿಕೇರಿ: ಪತಿಗಾಗಿ ಇಬ್ಬರು ಪತ್ನಿಯರ ನಡುವೆ ಪ್ರಾರಂಭಗೊಂಡ ಕಾದಾತ ಒಬ್ಬಳ ಕೊಲೆಯೊಡನೆ ಅಂತ್ಯವಾಗಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಕೊಡಗಿನ ವಿರಾಜಪೇಟೆ ತಾಲೂಕಿನ ಬಳಂಜಬೆರೆಯ ಕಾಫಿ ತೋಟದ ಲೈನ್ ಮನೆ ಎಂಬಲ್ಲಿ ನಡೆದಿರುವ ಘಟನೆಯಲ್ಲಿ ವಶಿಕಾ ದೇವಿ (27) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ.
ಮೂಲತಃ ಜಾರ್ಖಂಡ್ ನವರಾಗಿದ್ದ ದಯಾನಂದ್‍ನ ಮೊದಲನೇ ಪತ್ನಿ ಆಶಿಕಾ ಗುಪ್ತ ತನ್ನ ಸವತಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾಳೆ.
ಘಟನೆ ವಿವರ
ಜಾರ್ಖಂಡ್ ನವರಾದ ದಯಾನಂದ್ ಏಳು ವರ್ಷಗಳ ಹಿಂದೆ ಆಶಿಕಾ ಗುಪ್ತ ಜತೆ ವಿವಾಹವಾಗಿದ್ದ. ಆದರೆ ಅದಾಗಿ ಒಂದು ವರ್ಷದ ನಂತರ ವಶಿಕಾ ದೇವಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಮೂವರು ಸಹ ಕೊಡಗಿನ ಸಿದ್ದಾಪುರ ಸಮೀಪದ ಕಾಫಿ ಎಸ್ಟೇಟ್ ನಲ್ಲಿ ನಾಲ್ಕು ವರ್ಷಗಳಿಂದ ಕಾರ್ಮಿಕರಾಗಿ ದುಡಿಯುತ್ತಿದ್ದರು. ಇಬ್ಬರು ಪತ್ನಿಯರಲ್ಲಿ ಮೊದಲನೆಯವಳಿಗೆ ಒಂದು, ವಶಿಕಾ ದೇವಿಗೆ ಎರಡು ಮಕ್ಕಳೂ ಇದ್ದವು.
ಆದರೆ ಕೆಲ ದಿನಗಳಿಂದ ಇಬ್ಬರು ಪತ್ನಿಯರ ನಡುವೆ ಸಣ್ಣ ಕಾರಣಕ್ಕಾಗಿ ಜಗಳ ಪ್ರಾರಂಭವಾಗಿದೆ. ಪತಿಯ ವಿಚಾರದಲ್ಲಿ ವಾದ ವ್ವಿವಾದಗಳು ನಡೆಯುತ್ತಿದ್ದವು ಎನ್ನಲಾಗಿದೆ. ಶನಿವಾರ ಕೂಡ ಪತಿಯೊಡನೆ ತೋಟಕ್ಕೆ ತೆರಳಿ ಮನೆಗೆ ಹಿಂತಿರುಗುವ ವೇಳೆ ಇಬ್ಬರ ನಡುವೆ ಜಗಳವಾಗಿದೆ.
ಆಗ ಜಗಳದ ಭರದಲ್ಲಿ ಆಶಿಕಾ ಗುಪ್ತ ತನ್ನ ಸವತಿಯಾಗಿದ್ದ ವಶಿಕಾ ದೇವಿ ಕುತ್ತಿಗೆಯನ್ನು ಕತ್ತಿಯಿಂದ ಕಡಿದು ಹತ್ಯೆ ಮಾಡಿದ್ದಾಳೆ. ತೀವ್ರ ರಕ್ತಸ್ರಾವದಿಂದ ವಶಿಕಾ ದೇವಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಪತಿ ದಯಾನಂದ್ ತೋಟದಿಂಡ ಮನೆಗೆ ಹಿಂತಿರುಗಿದ ವೇಳೆ ಘಟನೆ ಬೆಳಕಿಗೆ ಬಂದಿದೆ.
ಘಟನ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ ಶೋಧ ಮುಂದುವರಿದಿದೆ.
Advertisement