ಗುಣಮಟ್ಟದ ತ್ವರಿತ ನ್ಯಾಯದಾನಕ್ಕೆ ವೃತ್ತಿ ಕೌಶಲ್ಯತೆ ಅಗತ್ಯ: ಎಸ್‌.ಎ ಬೋಬ್ಡೆ

ಗುಣಮಟ್ಟದ ನ್ಯಾಯದಾನ ಮಾಡಬೇಕಾದರೆ ನ್ಯಾಯಾಧೀಶರಿಗೆ ಅತ್ಯುತ್ತಮ ನ್ಯಾಯಾಂಗ ಶಿಕ್ಷಣ, ವೃತ್ತಿ ಕೌಶಲ್ಯತೆ ಅತ್ಯಗತ್ಯ. ಕರ್ತವ್ಯ ನಿರ್ವಹಣೆಯಲ್ಲಿ ವೃತ್ತಿಪರತೆ ಇರಬೇಕಾದರೆ ಅವರಿಗೆ ನ್ಯಾಯಿಕ ಕೌಶಲ್ಯ, ಪ್ರಸ್ತುತ ಸಮಾಜದ ಸ್ಥಿತಿಗತಿ, ಸಾಮಾಜಿಕ-ಆರ್ಥಿಕ ವ್ಯವಸ್ಥೆಯ ಬಗ್ಗೆಯೂ ಜ್ಞಾನ ಅಗತ್ಯವಿದೆ.
ಎಸ್ ಎ ಬೊಬ್ಡೆ
ಎಸ್ ಎ ಬೊಬ್ಡೆ
Updated on

ಬೆಂಗಳೂರು: ಗುಣಮಟ್ಟದ ನ್ಯಾಯದಾನ ಮಾಡಬೇಕಾದರೆ ನ್ಯಾಯಾಧೀಶರಿಗೆ ಅತ್ಯುತ್ತಮ ನ್ಯಾಯಾಂಗ ಶಿಕ್ಷಣ, ವೃತ್ತಿ ಕೌಶಲ್ಯತೆ ಅತ್ಯಗತ್ಯ. ಕರ್ತವ್ಯ ನಿರ್ವಹಣೆಯಲ್ಲಿ ವೃತ್ತಿಪರತೆ ಇರಬೇಕಾದರೆ ಅವರಿಗೆ ನ್ಯಾಯಿಕ ಕೌಶಲ್ಯ, ಪ್ರಸ್ತುತ ಸಮಾಜದ ಸ್ಥಿತಿಗತಿ, ಸಾಮಾಜಿಕ-ಆರ್ಥಿಕ ವ್ಯವಸ್ಥೆಯ ಬಗ್ಗೆಯೂ ಜ್ಞಾನ ಅಗತ್ಯವಿದೆ ಎಂದು  ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ ಬೋಬ್ಡೆ ಹೇಳಿದ್ದಾರೆ. 

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘ ಬೆಂಗಳೂರಿನ ಜಿಕೆವಿಕೆಯಲ್ಲಿ ಇಂದು ಏರ್ಪಡಿಸಿದ್ದ ನ್ಯಾಯಾಂಗ ಅಧಿಕಾರಿಗಳ 19ನೇ ದ್ವೈ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನ್ಯಾಯಾಲಯಗಳ ತೀರ್ಪು ವಿಳಂಬಗೊಳ್ಳದೆ,  ತ್ವರಿತಗತಿಯಲ್ಲಿ ಹೊರಬೀಳಬೇಕು. ಜನಸಾಮಾನ್ಯರ ಬವಣೆ ನೀಗಿಸಿ ತ್ವರಿತ ನ್ಯಾಯದಾನಕ್ಕೆ ಕ್ರಮಕೈಗೊಳ್ಳುವಂತೆ ಮುಖ್ಯ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ಬೆಂಗಳೂರು ಕೇವಲ ಸಿಲಿಕಾನ್ ಸಿಟಿ ಮಾತ್ರವಲ್ಲ, ನಾಗರೀಕತೆ, ಸಂಸ್ಕೃತಿಯ ಪ್ರಮುಖ ತಾಣವೂ ಆಗಿದೆ. ಕುವೆಂಪು ಅವರ ಭೂ ದೇವಿಯ ಮುಕುಟದ ನವಮಣಿಯೇ ಆಗಿದೆ ಎಂದು ಬಣ್ಣಿಸಿದ ಅವರು, ದೇಶದ ನ್ಯಾಯಾಂಗ ವ್ಯವಸ್ಥೆಗೆ ಕರ್ನಾಟಕ ಅಪಾರ ಕೊಡುಗೆ ನೀಡಿದೆ. ಕರ್ನಾಟಕ ಹಲವು ಪ್ರಮುಖ ನ್ಯಾಯಾಧೀಶರನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಉತ್ತಮ ತೀರ್ಪುಗಳು ಕೂಡ ರಾಜ್ಯದ ನ್ಯಾಯಾಂಗದಿಂದ ಬಂದಿದೆ ಎಂದು ಹೇಳಿದರು.

ನಿನ್ನೆ ಸುಪ್ರೀಂಕೋರ್ಟ್ ವ್ಯಕ್ತಿಯ ಸ್ವಾತಂತ್ರ್ಯದ ಬಗ್ಗೆ ತೀರ್ಪು ನೀಡಿದೆ. ಇಂಟರ್ ನೆಟ್ ಸ್ವಾತಂತ್ರ್ಯ ಕೂಡ ಮೂಲಭೂತ ಹಕ್ಕಾಗಿದೆ. ಮಂದಿರ, ಮಸೀದಿಗಳಲ್ಲಿ ಜೋರಾಗಿ ಪ್ರಾರ್ಥನೆ ಮಾಡುವುದು ಕೂಡ ಇದರ ವ್ಯಾಪ್ತಿಗೆ ಬರುತ್ತಾ? ಮುಂತಾದ ಸೂಕ್ಷ್ಮ ಹಾಗೂ ಸಂಕೀರ್ಣ ವಿಷಯಗಳ ಬಗ್ಗೆಯೂ ಇಂದಿನ ಸಮಾವೇಶದಲ್ಲಿ ಚರ್ಚೆಯಾಗಲಿ ಎಂದು ಹೇಳಿದರು.

ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಅಭಯ್ ಶ್ರೀನಿವಾಸ್  ಓಕಾ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ನ್ಯಾಯಾಂಗ ವಿತರಣಾ ವ್ಯವಸ್ಥೆಗೆ  ಮೂಲಭೂತ ಸೌಕರ್ಯ ಅತ್ಯುತ್ತಮವಾಗಿದ್ದು, ರಾಜ್ಯ ಸರ್ಕಾರ ಕೂಡ  ನ್ಯಾಯಾಂಗಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ ಎಂದರು. 

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ನ್ಯಾಯಾಂಗ ಕಟ್ಟಡಗಳಿಗೆ ಸಿಸಿಟಿವಿ ಅಳವಡಿಕೆ ಮತ್ತು ಡಿಜಿಟಲೀಕರಣಕ್ಕೆ ೨೩ ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಕೌಟುಂಬಿಕ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ 17 ಕೌಟುಂಬಿಕ ನ್ಯಾಯಾಲಯಗಳ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಎಸ್.ಎ.ಬೋಬ್ಡೆ ಅವರು ಕರ್ನಾಟಕ ನ್ಯಾಯಾಂಗ ಅಕಾಡಮಿಯ ಹೊಸ ಕಟ್ಟಡದ ಒಂದನೇ ಹಂತವನ್ನು ಉದ್ಘಾಟಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೂತನ ಸಭಾಂಗಣವನ್ನು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯಾಧೀಶರು, ನ್ಯಾಯಾಂಗ ಅಧಿಕಾರಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com