ಕೊಪ್ಪಳ: ಹಳ್ಳಿ ಜನರ ಕೋಟ್ಯಂತರ ರೂಪಾಯಿ ನುಂಗಿ ನೀರು ಕುಡಿದ ಪೊಸ್ಟ್ ಮಾಸ್ಟರ್

ಬಡಜನರು, ಮಧ್ಯಮವರ್ಗದವರು ದುಡಿದ ಹಣದಲ್ಲಿ ಸ್ವಲ್ಪ ಉಳಿಸಿ ಭವಿಷ್ಯದ ದೃಷ್ಟಿಯಲ್ಲಿ ಸುರಕ್ಷಿತವಾಗಿಡಲು ಬ್ಯಾಂಕ್ ಗಳ ಮೊರೆ ಹೋಗುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈಚೆಗೆ ಅಂಚೆ ಇಲಾಖೆ ಉಳಿತಾಯ ಖಾತೆಗೆ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ. ಕೇಂದ್ರ ಸರಕಾರದ ಇಲಾಖೆ ಅಂದ ಮೇಲೆ ಮೋಸ ಆಗಲ್ಲ.
ಮೋಸಹೋದ ಗ್ರಾಮಸ್ಥರು, ಒಳ ಚಿತ್ರ ಪೊಸ್ಟ್ ಮಾಸ್ಟರ್ ಪ್ರಸನ್ನ ಪುರೋಹಿತ
ಮೋಸಹೋದ ಗ್ರಾಮಸ್ಥರು, ಒಳ ಚಿತ್ರ ಪೊಸ್ಟ್ ಮಾಸ್ಟರ್ ಪ್ರಸನ್ನ ಪುರೋಹಿತ
Updated on

-ಪೊಸ್ಟ್ ಮಾಸ್ಟರ್ನ “ಮಾಸ್ಟರ್ ಪ್ಲ್ಯಾನ್”
-ಕೋಟ್ಯಂತರ ರೂಪಾಯಿ ಹಣ ದೋಚಿ ಪರಾರಿ
-ದುಡಿದ ಹಣ ಕಂಡವನ ಪಾಲು!
-ಸಂಗನಹಾಳದ ಪ್ರಕರಣ ಮಾಸುವ ಮುನ್ನವೇ ಮೋಸ ಹೋದ ಮಾದಿನೂರು

ಕೊಪ್ಪಳ: ಬಡಜನರು, ಮಧ್ಯಮವರ್ಗದವರು ದುಡಿದ ಹಣದಲ್ಲಿ ಸ್ವಲ್ಪ ಉಳಿಸಿ ಭವಿಷ್ಯದ ದೃಷ್ಟಿಯಲ್ಲಿ ಸುರಕ್ಷಿತವಾಗಿಡಲು ಬ್ಯಾಂಕ್ ಗಳ ಮೊರೆ ಹೋಗುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈಚೆಗೆ ಅಂಚೆ ಇಲಾಖೆ ಉಳಿತಾಯ ಖಾತೆಗೆ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ. ಕೇಂದ್ರ ಸರಕಾರದ ಇಲಾಖೆ ಅಂದ ಮೇಲೆ ಮೋಸ ಆಗಲ್ಲ. ಕೂಡಿಸಿಟ್ಟ ಹಣ ಕೈ ಸೇರುತ್ತೆ ಎಂದುಕೊಂಡ ಜನ ಕೋಟ್ಯಂತರ ರೂಪಾಯಿ ಹಣ ತೊಡಗಿಸಿದ್ದಾರೆ. ಆದರೆ ಇಲ್ಲೂ ಸಹ ಪೊಸ್ಟ್ ಮಾಸ್ಟರ್ ಒಬ್ಬ ಹಳ್ಳಿ ಜನರಿಗೆ ಮಕ್ಮಲ್ ಟೋಪಿ ಹಾಕಿ ಪರಾರಿಯಾಗಿದ್ದಾನೆ. 

ಇಲ್ನೋಡಿ ಈ ಮುಗ್ಧ ಜನರು ಆದ್ಯಾವುದೋ ಚಿಕ್ಕ ಪುಸ್ತಕ ಹಿಡಿದುಕೊಂಡು ಆತಂಕದಲ್ಲಿ ನಿಂತಿರೋದನ್ನ.. ಚಿಕ್ಕ ಪುಸ್ತಕದಲ್ಲಿ ಪೆನ್ನಿನಿಂದ ಹಣ ನಮೂದಿಸಲಾಗಿದೆ. ಹಾಗೆಯೇ ಅದಕ್ಕೆ ಅಂಚೆ ಇಲಾಖೆಯ ಮೊಹರೂ ಸಹ ಇದೆ. ಅಸಲಿಗೆ ಏನಾಗಿದೆ ಅನ್ನೋದೇ ರಿಯಲ್ ಕಹಾನಿ.

ಹೀಗೆ ಮುಖ ಸಪ್ಪೆ ಮಾಡಿಕೊಂಡು ನಿಂತಿರೋ ಈ ಜನ ಕೊಪ್ಪಳ ಜಿಲ್ಲೆಯ ಮಾದಿನೂರು ಗ್ರಾಮದವರು. ಉಂಡು ಹೋದ ಕೊಂಡು ಹೋದ ಸಿನಿಮಾದಲ್ಲಿ ಕೌ ಇನ್ಸಪೆಕ್ಟರ್ ಎಂದು ಜನರನ್ನ ನಂಬಿಸಿ, ಯಾಮಾರಿಸಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿಕೊಂಡು ಹೋದ ಕತೆ ಸದ್ಯ ಈ ಗ್ರಾಮಕ್ಕೆ ಹೋಲಿಸಬಹುದು. ಇಲ್ಲೂ ಸಹ ಪೊಸ್ಟ್ ಮಾಸ್ಟರ್ ಹಳ್ಳಿ ಜನರ ಮುಗ್ಧತೆಯನ್ನ ಅನಕ್ಷರತೆಯನ್ನ ಬಂಡವಾಳ ಮಾಡಿಕೊಂಡು ಬಣ್ಣ ಬಣ್ಣದ ಮಾತು ಹೇಳಿ ಅಂಚೆ ಇಲಾಖೆಯಲ್ಲಿ ಹಲವು ಉಳಿತಾಯ ಯೋಜನೆಗಳಿದ್ದು ಹಣ ಹೂಡಿ, ಮುಂದೆ ಕಷ್ಟಕಾಲಕ್ಕೆ ಬರುತ್ತೆ ಎಂದು ಮನವೊಲಿಸಿದ್ದಾನೆ. ಹಲವು ವರ್ಷಗಳಿಂದ ಪೊಸ್ಟ್ ಮಾಸ್ಟರ್ ಪ್ರಸನ್ನ ಪುರೋಹಿತನನ್ನ ಹತ್ತಿರದಿಂದ ನೋಡಿದ್ದ ಜನ ಆತನನ್ನ ನಂಬಿ ಹೊಲ, ಹಸು, ಮೇಕೆ ಮಾರಿ ಬಂದ ಹಣವನ್ನ ಆತನ ಕೈಗೆ ಕೊಟ್ಟಿದ್ದಾರೆ. ಅಂಚೆ ಇಲಾಖೆಯ ಪಾಸ್ ಪುಸ್ತಕ ಕೊಡುವುದನ್ನು ಬಿಟ್ಟು ಕಿರಾಣಿ ಅಂಗಡಿಯಲ್ಲಿ ಬಳಸುವ ಚಿಕ್ಕಪುಸ್ತಕವನ್ನ ಹಣ ಹೂಡುವ ಎಲ್ಲ ಗ್ರಾಮಸ್ಥರಿಗೆ ಕೊಟ್ಟು ಅವರ ಕೊಟ್ಟ ಹಣವನ್ನ ಪುಸ್ತಕದಲ್ಲಿ ನಮೂದು ಮಾಡಿ ಅಂಚೆ ಇಲಾಖೆಯ ಮೊಹರು ಹಾಕಿ ಕೊಟ್ಟಿದ್ದಾನೆ. ಕಳೆದ ವರ್ಷ ಪ್ರಸನ್ನನ ಪಾಸ್ಬುಕ್ ಪ್ರಕರಣ ಬಹಿರಂಗಗೊಂಡು ಆತನನ್ನ ಇಲಾಖೆ ಅಮಾನತು ಮಾಡಿದೆ. ಆಗ ಎಚ್ಚೆತ್ತುಕೊಂಡ ಜನ ಹಣ ಮರುಪಾವತಿಸುವಂತೆ ದುಂಬಾಲು ಬಿದ್ದಿದ್ದಾರೆ. ಕೆಲವರಿಗೆ ಹಣ ವಾಪಾಸ್ ಕೊಟ್ಟಿರುವ ಪ್ರಸನ್ನ, ಇನ್ನು ಕೆಲವರಿಗೆ ಇವತ್ತು ಕೊಡ್ತಿನಿ, ನಾಳೆ ಕೊಡ್ತಿನಿ ಅಂತ ಕಾಗೆ ಹಾರಿಸಿ ಈಗ ಪರಾರಿಯಾಗಿದ್ದಾನೆ ಅಂತ ಅಳಲು ತೋಡಿಕೊಂಡರು ಮಾದಿನೂರು ಗ್ರಾಮದ ಗಾಳೆಪ್ಪ ಹಾಗೂ ಹನುಮವ್ವ.

ಪೊಸ್ಟ್ ಮಾಸ್ಟರ್ ಪ್ರಸನ್ನ ಪುರೋಹಿತ ಹಳ್ಳಿ ಜನರನ್ನ ವಂಚಿಸಿದ್ದಾನೆ. ಈಗ ಹಣ ವಾಪಾಸ್ ಕೊಡುವಂತೆ ಕೇಳ್ತಿರೋದ್ರಿಂದ ಕಿನ್ನಾಳದ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ. ಆತನ ಯಾವ ನಂಬರ್ ಸಹ ಸ್ವಿಚ್ ಆನ್ ಇಲ್ಲ. ಜಿಲ್ಲಾಡಳಿತ ಈ ಕೂಡಲೇ ಗ್ರಾಮಸ್ಥರು ಹೂಡಿದ ಹಣವನ್ನ ಮರಳಿಸಲು ಕ್ರಮ ಕೈಗೊಳ್ಳಬೇಕು ಅಂತ ಹೋರಾಟಗಾರ ಡಿ.ಎಚ್. ಪೂಜಾರ ಒತ್ತಾಯಿಸಿದ್ದಾರೆ. 

ಈಚೆಗಷ್ಟೇ ಪೊಸ್ಟ್ಗಳನ್ನ ಹಂಚದೆ ಅಂಚೆಯಣ್ಣ ಕೊಪ್ಪಳ ಜಿಲ್ಲೆಯ ಸಂಗನಹಾಳದಲ್ಲಿ ಸಿಕ್ಕಿ ಬಿದ್ದ ಘಟನೆ ಮಾಸುವ ಮುನ್ನವೇ ಈಗ ಅಂಚೆ ಇಲಾಖೆಯ ಮತ್ತೊಬ್ಬ ನೌಕರನ ಕರಾಳ ಮುಖ ಬಹಿರಂಗಗೊಂಡಿದೆ. ಮುಗ್ಧರು ಮೋಸ ಹೋಗುತ್ತಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಂದ್ರೆ ಕೇಂದ್ರ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಒಟ್ಟಾರೆ ಹಳ್ಳಿಯ ಮುಗ್ಧ ಜನರಿಗೆ ನ್ಯಾಯ ಸಿಗಲಿ ಅನ್ನೋದು ನಮ್ಮ ಕಳಕಳಿ.

ವರದಿ: ಬಸವರಾಜ ಕರುಗಲ್, ಕೊಪ್ಪಳ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com