ಬಾಗಲಕೋಟೆ ಜಿ.ಪಂ. ಸಿಇಒ ವರ್ಗಾವಣೆ; ನಿಟ್ಟುಸಿರುವ ಬಿಟ್ಟ ಸದಸ್ಯರು!

ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಸಿಇಒ ನಡುವಿನ ಎರಡು ವರ್ಷಗಳ ಸತತ ಸಂಘರ್ಷಕ್ಕೆ ಕೋನೆಗೂ ಬ್ರೇಕ್ ಬಿದ್ದಿದೆ.
ಗಂಗೂಬಾಯಿ ಮಾನಕರ , ಬಾಗಲಕೋಟೆ ಸಿಇಒ
ಗಂಗೂಬಾಯಿ ಮಾನಕರ , ಬಾಗಲಕೋಟೆ ಸಿಇಒ

ಬಾಗಲಕೋಟೆ: ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಸಿಇಒ ನಡುವಿನ ಎರಡು ವರ್ಷಗಳ ಸತತ ಸಂಘರ್ಷಕ್ಕೆ ಕೋನೆಗೂ ಬ್ರೇಕ್ ಬಿದ್ದಿದೆ.

ಬಾಗಲಕೋಟೆ ಜಿಪಂ. ಸಿಇಒ ಆಗಿದ್ದ ಗಂಗೂಬಾಯಿ ಮಾನಕರ ವರ್ಗಾವಣೆಯಿಂದ ಸದಸ್ಯರು ಹಾಗೂ ಅಧಿಕಾರಿ ವರ್ಗ ನಿಟ್ಟುಸಿರು ಬಿಟ್ಟಿದೆ. ಬಾಗಲಕೋಟೆ ಜಿಪಂ. ಆಡಳಿತ ಮಂಡಳಿ ಮತ್ತು ಸಿಇಒ ಮಾನಕರ ನಡುವೆ ಉಂಟಾಗಿದ್ದ ಒಣ ಪ್ರತಿಷ್ಠೆ ಪರಿಣಾಮ ಕಳೆದ ಎರಡು ವರ್ಷಗಳಿಂದ ಅಭಿವೃದ್ಧಿ ಶೂನ್ಯವಾಗಿ ಸಂಘರ್ಷವೇ ಪ್ರಧಾನವಾಗಿತ್ತು. ಉಭಯತರು ಸ್ವಪ್ರತಿಷ್ಠೆಗೆ ಕಟ್ಟು ಬಿದ್ದ ಹಿನ್ನೆಲೆಯಲ್ಲಿ ಒಂದೇ ಒಂದು ಸಭೆ ಸರಿಯಾಗಿ ನಡೆದ ಉದಾಹರಣೆ ಇಲ್ಲ. ಪ್ರತಿಸಭೆಗಳಲ್ಲೂ ಆರೋಪ, ಪ್ರತ್ಯಾರೋಪಗಳದ್ದೆ ಧ್ವನಿ ಕೇಳಿ ಬರುತ್ತಿತ್ತು. 

ಅನುದಾನ ಹಂಚಿಕೆ, ಅಭಿವೃದ್ಧಿ ಕಾರ್ಯಗಳ ವಿಷಯದಲ್ಲಿ ತಮ್ಮನ್ನು ಸಿಇಒ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಎಷ್ಟೋ ಕಾರ್ಯಕ್ರಮಗಳ ಮಾಹಿತಿಯೇ ತಮಗೆ ಸಿಗುವುದಿಲ್ಲ ಎಂದು ಜಿಪಂ. ಅಧ್ಯಕ್ಷೆ ಸೇರಿದಂತೆ ಸದಸ್ಯರೆಲ್ಲ ಸತತವಾಗಿ ಆರೋಪಿಸುತ್ತಲೇ ಇದ್ದರು. ಸದಸ್ಯರ ಆರೋಪಗಳಿಗೆ ಕ್ಯಾರೇ ಎನ್ನದೇ ಸಿಇಒ ಮಾನಕರ ತಮ್ಮದೇ ಆಡಳಿತ ಶೈಲಿ ಮುಂದುವರಿಸಿದ್ದರು. ಜಿಪಂ. ಸದಸ್ಯರೆಲ್ಲ ಅಧ್ಯಕ್ಷರೊಂದಿಗೆ ಸೇರಿಕೊಂಡು ಸಿಇಒ ವರ್ಗಾವಣೆಗೆ ಸತತ ಪ್ರಯತ್ನ ನಡೆಸುತ್ತಲೇ ಬಂದರೂ ಒಂದು ಹಂತದಲ್ಲಿ ಸರ್ಕಾರ ಸದಸ್ಯರ ಒತ್ತಡಕ್ಕೆ ಮಣಿದು ಮಾನಕರ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತಾದರೂ ಪ್ರಯೋಜನವಾಗಲಿಲ್ಲ. ವರ್ಗಾವಣೆ ಆದೇಶಕ್ಕೆ ತಡಯಾಜ್ಞೆ ತಂದು ಮಾನಕರ ಅವರು ಸಿಇಒ ಆಗಿ ಮುಂದುವರಿದರು.

ಜಿಪಂ. ಸಿಇಒ ಅವರು ನಮ್ಮ ಮಾತುಗಳನ್ನೇ ಕೇಳುವುದಿಲ್ಲ. ಅಭಿವೃದ್ಧಿ ವಿಷಯಗಳಲ್ಲೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಹೋಗಲಿ ಸೌಜನ್ಯಕ್ಕಾದರೂ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿರಲಿಲ್ಲ. ಕೊನೆಗೆ ಈಗಲಾದರೂ ಸಮಸ್ಯೆ ಬಗೆಹರಿಯಿತು ಎಂದು ಸದಸ್ಯರು ನಿಟ್ಟುಸಿರು ಬಿಟ್ಟಿದ್ದಾರೆ. ಇವರೊಂದಿಗೆ ಜಿಪಂ. ವ್ಯಾಪ್ತಿಯ ಬಹುತೇಕ ಅಧಿಕಾರಿಗಳೂ ಆಪ್ತರಲ್ಲಿ ಸಂತಸ ವ್ಯಕ್ತ ಪಡಿಸುತ್ತಿದ್ದಾರೆ. ಸಿಇಒ ಮಾನಕರ ಒಂದೇ ಒಂದು ದಿನ ಹಗಲು ಹೊತ್ತು ಕಚೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿರಲಿಲ್ಲ. ಹಗಲು ಪ್ರವಾಸ ಮಾಡಿ ಸಂಜೆಯಾಗುತ್ತಲೇ ಕಚೇರಿ ಸೇರಿ ತಡರಾತ್ರಿವರೆಗೂ ಕಚೇರಿಯಲ್ಲಿ ಇರುತ್ತಿದ್ದರು. ಇದು ಕೆಲ ಅಧಿಕಾರಿಗಳ ಪಾಲಿಗೆ ನುಂಗಲಾರದ ತುತ್ತಾಗಿತ್ತು. ಅವರು ಇರುವವರೆಗೂ ತಾವು ಮನೆಗೆ ಹೋಗುವಂತಿಲ್ಲವಲ್ಲ ಎಂದು ಗುಣುಗುತ್ತಲೇ ಕಚೇರಿಯಲ್ಲೇ ಠಿಕಾಣಿ ಹೂಡುತ್ತಿದ್ದರು. ಸಂಜೆ ಆಗುತ್ತಲೇ ಸಿಇಒ ಕಚೇರಿಯಲ್ಲಿ ಬೆಳು ಕಾಣಿಸಿಕೊಳ್ಳುತ್ತದೆ ಎನ್ನುವ ಆರೋಪವೂ ಸಾಮಾನ್ಯವಾಗಿತ್ತು.

ಇಷ್ಟರ ಮಧ್ಯೆ ಸಿಇಒ ಜಿಲ್ಲಾದ್ಯಂತ ಜನಪರ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಮುಂದು ಎನ್ನುವ ಮಾತು ಕೂಡ ಜನಜನಿತವಾಗಿತ್ತು. ಕಳೆದ ಬಾರಿಯ ಪ್ರವಾಹ ಸಂದರ್ಭ ಮತ್ತು ಕಳೆದ ನಾಲ್ಕು ತಿಂಗಳಿನಿಂದ ಕೊರೋನಾ ವೈರಸ್ ತಡೆಗಾಗಿ ನಡೆಸಿದ ಜನಜಾಗೃತಿ ಕಾರ್ಯಕ್ರಮದಿಂದ ಸಾಕಷ್ಟು ಹೆಸರು ಮಾಡಿದ್ದರು. ಸದ್ಯ ಗಂಗೂಬಾಯಿ ಮಾನಕರ ಅವರಿಗೆ ವರ್ಗಾವಣೆ ಆಗಿದ್ದು, ಇನ್ನಾದರೂ ಹೊಸ ಸಿಇಒ ಆಗಮನದಿಂದ ಜಿಲ್ಲಾ ಪಂಚಾಯಿತಿಯಲ್ಲಿ ಸೌಹಾರ್ದ ವಾತಾವರಣ ಮೂಡಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಸಿಕ್ಕುತ್ತದೋ ಹೇಗೆ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ !

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com