ಸೇವಾ ಭದ್ರತೆ, ವೇತನ ಪರಿಷ್ಕರಣೆ ಬೇಡಿಕೆಗೆ ಆಗ್ರಹಿಸಿ ಆಯುಷ್ ವೈದ್ಯರ ಪ್ರತಿಭಟನೆ, ಸಾಮೂಹಿಕ ರಾಜೀನಾಮೆ ಎಚ್ಚರಿಕೆ!

ಗುತ್ತಿಗೆ ಆಯುಷ್ ವೈದ್ಯರು, ವೇತನ ತಾರತಮ್ಯ, ಸೇವಾ ಭದ್ರತೆ ಹಾಗೂ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದಿನಿಂದ ಕಪ್ಪು ಪಟ್ಟಿ ಧರಿಸಿ ಹೋರಾಟಕ್ಕಿಳಿದಿದ್ದಾರೆ.
ಆಯುಷ್ ವೈದ್ಯರ ಪ್ರತಿಭಟನೆ(ಸಂಗ್ರಹ ಚಿತ್ರ)
ಆಯುಷ್ ವೈದ್ಯರ ಪ್ರತಿಭಟನೆ(ಸಂಗ್ರಹ ಚಿತ್ರ)
Updated on

ಬೆಂಗಳೂರು: ಗುತ್ತಿಗೆ ಆಯುಷ್ ವೈದ್ಯರು, ವೇತನ ತಾರತಮ್ಯ, ಸೇವಾ ಭದ್ರತೆ ಹಾಗೂ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದಿನಿಂದ ಕಪ್ಪು ಪಟ್ಟಿ ಧರಿಸಿ ಹೋರಾಟಕ್ಕಿಳಿದಿದ್ದಾರೆ.

ರಾಜ್ಯದ 2000 ಗುತ್ತಿಗೆ ವೈದ್ಯರು ಹಾಗೂ 27000 ಖಾಸಗಿ ವೈದ್ಯರ ಹೋರಾಟಕ್ಕೆ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಬೆಂಬಲ ನೀಡಿದೆ.

ಆಯುಷ್ ವೈದ್ಯರಿಗೂ ಇತರೆ ಹೊಮಿಯೋಪತಿಕ್ ವೈದ್ಯರಂತೆ ವೇತನ, ಸೇವಾ ಭದ್ರತೆ ಕಲ್ಪಿಸುವುದಾಗಿ ಮೇ 26 ರಂದು ಆರೋಗ್ಯ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭರವಸೆ ನೀಡಿದ್ದರು. ಸರ್ಕಾರದ ಭರವಸೆ ಎರಡು ತಿಂಗಳು ಕಳೆದರೂ ಈಡೇರಿಸುವ ಗೋಜಿಗೆ ಸಚಿವರು ಹೋಗಿಲ್ಲ. ಹೀಗಾಗಿ ಅನಿವಾರ್ಯಾವಾಗಿ ಇಂದಿನಿಂದ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಆಯುಷ್ ವೈದ್ಯರು ಹಾಜರಾಗುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಆರೋಗ್ಯ ಸಚಿವರು ಮತ್ತು ಮುಖ್ಯಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿರುವ ಆಯುಷ್ ವೈದ್ಯರು ಜುಲೈ 14ರ ಸಂಜೆಯವರೆಗೂ ತಮ್ಮ ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸದಿದ್ದಲ್ಲಿ ಜುಲೈ 15 ರಂದು 2000 ಆಯುಷ್ ವೈದ್ಯರು ಸಾಮೂಹಿಕ ರಾಜೀನಾಮೆ ನೀಡುವುದಲ್ಲದೆ, ಖಾಸಗಿ ಆಯುಷ್ ವೈದ್ಯರು ಸೇವೆಯನ್ನು ಸ್ಥಗಿತಗೊಳಿ ಸುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಯುಎನ್ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಆಯುಷ್ ಫೆಡರೇಷನ್ ಇಂಡಿಯಾದ ಮಾಜಿ ಕಾರ್ಯಕಾರಿ ಸದಸ್ಯ ಡಾ. ಆನಂದ್ ಕಿರಿಶ್ಯಾಳ, ಬೇಡಿಕೆ ಈಡೇರಿಸುವಂತೆ ಮೇ 5 ರಂದು 7 ದಿನಗಳ ಕಾಲ ಕಪ್ಪು ಪಟ್ಟಿ ಧರಿಸಿ ಸೇವೆ ಸಲ್ಲಿಸಿ ಸರ್ಕಾರಕ್ಕೆ ನಮ್ಮ ಮನವಿಯನ್ನು ಸಲ್ಲಿಸಿದ್ದೇವೆ. ಸರ್ಕಾರ ಯಾವುದೇ ತೀರ್ಮಾನ ಪ್ರಕಟಿಸದ ಹಿನ್ನಲೆಯಲ್ಲಿ ಮೇ 12ರಂದು ಸಮೂಹಿಕ ರಾಜೀನಾಮೆ ನೀಡಲು ತೀರ್ಮಾನಿಸಿದ್ದೆವು. ಈ ವೇಳೆ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಮೇ 26 ರಂದು ನಡೆದ ಸಭೆಯಲ್ಲಿ ಎನ್ ಆರ್ ಎಚ್ಎಂ, ಆರ್ ಬಿಎಸ್ಕೆ ಹಾಗೂ ಅಲೋಪತಿ ವೈದ್ಯರಿಗೆ ಪರ್ಯಾಯವಾಗಿ ಕೆಲಸ ನಿರ್ವಹಿಸುತ್ತಿರುವ ವೈದ್ಯರಿಗೆ ವೇತನ ಹೆಚ್ಚಳ ಹಾಗೂ ಸೇವಾ ಭದ್ರತೆ ಕಲ್ಪಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅಂತೆಯೇ ಆಯುಷ್ ವೈದ್ಯ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಹೆಚ್ಚಳ, ಆಯುಷ್ ವೈದ್ಯರು ಆಲೋಪತಿ ಚಿಕಿತ್ಸೆ ನೀಡಲು ಅನುಮತಿಯನ್ನು ವಿಸ್ತರಿಸಬೇಕೆಂಬ ನಮ್ಮ ಬೇಡಿಕೆಯನ್ನು ಪರಿಶೀಲಿಸಿ ಸೂಕ್ತ ಕ್ರಮದ ಭರವಸೆ ನೀಡಿದ್ದರು.

ಆದರೂ ಆರೋಗ್ಯ ಸಚಿವರ ಭರವಸೆ ಇದುವರೆಗೂ ಈಡೇರಿಲ್ಲ. ಅಲೋಪತಿ ವೈದ್ಯರಿಗೆ ಸಿಗುವ ವೇತನ, ಭತ್ಯೆ ಹಾಗೂ ಸೇವಾ ಖಾಯಮಾತಿಗೆ ಒತ್ತಾಯಿಸಿ ಜುಲೈ 15ರಂದು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಅವರು ತಿಳಿಸಿದ್ದಾರೆ.

ದೇಶದ 11 ರಾಜ್ಯಗಳಲ್ಲಿ ಆಯುಷ್ ವೈದ್ಯರಿಗೆ ವೇತನ ಹಾಗೂ ಸೇವಾ ಭದ್ರತೆ ಕಲ್ಪಿಸಲಾಗಿದೆ. ಇದು ಸುಪ್ರೀಂ ಕೋರ್ಟ್ ಆದೇಶ ಪ್ರಕಾರವೇ ಅರ್ಹ ವೈದ್ಯರಿಗೆ ವೇತನ ನೀಡುವಂತೆ ನಿರ್ದೇಶನ ನೀಡಲಾಗಿದೆ . ಜಮ್ಮು ಮತ್ತು ಕಾಶ್ಮೀರದಲ್ಲಿ ಆಯುಷ್ ವೈದ್ಯರಿಗೆ 95 ಸಾವಿರ ವೇತನ ನೀಡಲಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ 65 ಸಾವಿರ ರೂ, ಆಂಧ್ರ ಪ್ರದೇಶದಲ್ಲಿ 45 ಸಾವಿರ ರೂ, ಕರ್ನಾಟಕ ರಾಜ್ಯದಲ್ಲಿ 25 ಸಾವಿರೂ ವೇತನ ನೀಡಲಾಗುತ್ತಿಗೆ. ಆದರೂ ಮೂರು ತಿಂಗಳು ಆರು ತಿಂಗಳಿಗೊಮ್ಮೆ ವೇತನ ಪಾವತಿ ಮಾಡಲಾಗುತ್ತಿದೆ. ನಮ್ಮ ಕಷ್ಟವನ್ನು ಯಾರ ಮುಂದೆಯೂ ಹೇಳಿಕೊಂಡರೂ ಪ್ರಯೋಜನವಾಗುತ್ತಿಲ್ಲವೆಂದು ಆಯಷ್ ವೈದ್ಯರು ಅಸಮಾಧಾನ ವ್ಯಕ್ತಪಡಿ ಸಿದ್ದಾರೆ.

ಕೊರೋನಾ ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಫಿವರ್ ಕ್ಲಿನಿಕ್ ನಿಂದ ಆರಂಭಿಸಿ ಎಲ್ಲೆಡೆ ಫ್ರಂಟ್ ಲೈನ್ ವಾರಿಯರ್ ಗಳಾಗಿ ಕೆಲಸ ಮಾಡುತ್ತಿರುವವರು ಆಯುಷ್ ವೈದ್ಯರು. ಆ್ಯಂಬುಲೆನ್ಸ್, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಕೋವಿಡ್ ಸೆಂಟರ್ ಗಳಲ್ಲಿ ಆಯಷ್ ವೈದ್ಯರು ವಿಶ್ರಾಂತಿಯಿಲ್ಲದೆ ಹಗಲಿರುಳು ದುಡಿಯುತ್ತಿದ್ದಾರೆ. ಕೋವಿಡ್ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಆಯುಷ್ ವೈದ್ಯರಲ್ಲಿ 15ಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು ತಗುಲಿದೆ. ಒಂದೆಡೆ ವೇತನವಿಲ್ಲ ಮತ್ತೊಂದೆಡೆ ಉದ್ಯೋಗ ಭದ್ರತೆಯಿಲ್ಲ. ನಮಗೆ ವಿಮಾ ಸೌಲಭ್ಯ ಕಲ್ಪಿಸದೆ ನಮ್ಮ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಹೀಗಾಗಿ ಅನಿವಾರ್ಯವಾಗಿ ಹೋರಾಟಕ್ಕಿಳಿದಿದ್ದೇವೆ. ಸರ್ಕಾರ ಜುಲೈ 14ರ ಒಳಗಾಗಿ ತೀರ್ಮಾನ ಪ್ರಕಟಿಸದಿದ್ದಲ್ಲಿ ರಾಜ್ಯದ 2000 ಆಯಷ್ ವೈದ್ಯರು ರಾಜೀನಾಮೆ ನೀಡುವುದಲ್ಲದೆ, 27000 ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ನಿರ್ವ ಹಿಸುತ್ತಿರುವ ಆಯುಷ್ ವೈದ್ಯರು ಸೇವೆಯನ್ನು ಸ್ಥಗಿತಗೊಳಿಸುತ್ತೇವೆಂದು ಸರ್ಕಾರಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.

ಕೋವಿಡ್ 19 ಸಾಂಕ್ರಾಮಿಕ ರೋಗ ತೀವ್ರವಾಗಿ ಉಲ್ಬಣಿಸುತ್ತಿರುವ ಹಿನ್ನಲೆಯಲ್ಲಿ ಆಯುಷ್ ವೈದ್ಯರು ಸೇವೆ ಹಾಗೂ ಆಯುಷ್ ವಿದ್ಯಾರ್ಥಿಗಳ ಹಿತವನ್ನು ಕಾಪಾಡುವುದು ಅನಿವಾರ್ಯ ಮತ್ತು ಅಗತ್ಯವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com