ಬಾಗಲಕೋಟೆ: ನಿರೀಕ್ಷೆಯಂತೆ ಬಿಟಿಡಿಎ ಅಧ್ಯಕ್ಷ ಸ್ಥಾನ ಶಾಸಕ ಚರಂತಿಮಠ ಪಾಲು

ಆಲಮಟ್ಟಿ ಜಲಾಶಯದ ಹಿನ್ನೀರು ಬಾಧಿತ ಬಾಗಲಕೋಟೆ ನಗರದ ಮುಳುಗಡೆ ಸಂತ್ರಸ್ತರ ಬದುಕಿನ ಆಶಾಕಿರಣವಾಗಿರುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ನಿರೀಕ್ಷೆಯಂತೆ ಶಾಸಕ ವೀರಣ್ಣ ಚರಂತಿಮಠ ನೇಮಕಗೊಂಡಿದ್ದಾರೆ.
ಶಾಸಕ ವೀರಣ್ಣ ಚರಂತಿಮಠ
ಶಾಸಕ ವೀರಣ್ಣ ಚರಂತಿಮಠ

ಬಾಗಲಕೋಟೆ: ಆಲಮಟ್ಟಿ ಜಲಾಶಯದ ಹಿನ್ನೀರು ಬಾಧಿತ ಬಾಗಲಕೋಟೆ ನಗರದ ಮುಳುಗಡೆ ಸಂತ್ರಸ್ತರ ಬದುಕಿನ ಆಶಾಕಿರಣವಾಗಿರುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ನಿರೀಕ್ಷೆಯಂತೆ ಶಾಸಕ ವೀರಣ್ಣ ಚರಂತಿಮಠ ನೇಮಕಗೊಂಡಿದ್ದಾರೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಬಿಟಿಡಿಎ
ಅಧ್ಯಕ್ಷ ಸ್ಥಾನಕ್ಕೆ ಶಾಸಕ ವೀರಣ್ಣ ಚರಂತಿಮಠ ನೇಮಕಗೊಳ್ಳಲಿದ್ದಾರೆ ಎನ್ನುವ ನಿರೀಕ್ಷೆ ಇತ್ತು. ಈ ಕುರಿತು ಕನ್ನಡಪ್ರಭ ನ್ಯೂಸ್ ಡಾಟ್ ಕಾಂ ವರದಿ ಮಾಡಿತ್ತು ಎನ್ನುವುದು ಗಮನಾರ್ಹ.

ಬಾಗಲಕೋಟೆಯ ಹಿನ್ನೀರು ಬಾಧಿತ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ಹಂಚಿಕೆ, ಪುನರ್ ವಸತಿ, ಸ್ಥಳಾಂತರ ಮತ್ತು ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಬಿಟಿಡಿಎ ಪಾತ್ರ ಅನನ್ಯವಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಬಿಟಿಡಿಎ ಮೇಲೆ ಕಣ್ಣಿಟ್ಟದ್ದವರ ಪಟ್ಟಿ ಹನುಮಂತನ ಬಾಲದಂತೆ ಬೆಳೆದಿತ್ತು. 

ಈ ಸ್ಥಾನದ ಮೇಲೆ ಕಣ್ಣಿಟ್ಟುಕೊಂಡೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತ್ತು  ಅದಕ್ಕೂ ಪೂರ್ವ ಅನೇಕ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಪಕ್ಷದ ನಿಷ್ಠ ಮುಖಂಡರಲ್ಲಿ ಯಾರಿಗೆ ಅವಕಾಶ ನೀಡಬೇಕು ಎನ್ನುವುದೇ ಯಕ್ಷಪ್ರಶ್ನೆಯಾಗಿ ಪರಿಣಮಿಸಿತ್ತಾದರೂ ಶಾಸಕ ವೀರಣ್ಣ ಚರಂತಿಮಠ ಅವರೇ ಸಭಾಪತಿ ಆಗುವುದು ಸೂಕ್ತ ಎನ್ನುವ ಮಾತುಗಳು ಕಡಿಮೆ ಏನೂ ಇರಲಿಲ್ಲ.ಆದರೆ ಅನೇಕ ಜನ ಹಿರಿಯ ಮುಖಂಡರು ಹಾಗೂ ಯುವ ನಾಯಕರು ಶಾಸಕರು ಅವಕಾಶ ಕಲ್ಪಿಸಿದಲ್ಲಿ ಜವಾಬ್ದಾರಿ
 ನಿರ್ವಹಣೆಗೆ ಸಿದ್ದರಾಗಿದ್ದರು. 

ಬಿಟಿಡಿಎ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿಯೇ ಬಿಜೆಪಿಗೆ ವಲಸೆ ಬಂದವರಿಗೆ ನಿರಾಸೆ  ಉಂಟಾಗಿರುವುದಂತೂ ನಿಜವಾಗಿದ್ದರೂ ಸಂತ್ರಸ್ತರ ಪಾಲಿಗೆ ಮಾತ್ರ ಖುಷಿಯ ಸಂಗತಿಯಾಗಿದೆ.

ಮುಳುಗಡೆ ಸಂತ್ರಸ್ತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಯಾರಿಗೆ ಸಭಾಪತಿ ಸ್ಥಾನ ನೀಡುವುದು ಸೂಕ್ತ ಎನ್ನುವ ಚಿಂತನೆಯ ಮಧ್ಯೆ ಎಲ್ಲಿ ಪಕ್ಷದಲ್ಲಿ ಅಸಮಾಧಾನ ಉಂಟಾಗುತ್ತದೋ ಎನ್ನುವ ಭಯವೂ ಕೂಡ ಒಂದು ಕಡೆ ಕಾಡುತ್ತಲೇ ಇತ್ತು.

ಸರ್ಕಾರ ಒಂದು ವರ್ಷದ ಅವಧಿ ಪೂರೈಸಿದ ಸಮಯದಲ್ಲಿ ಅಳೆದು ತೂಗಿ ಶಾಸಕ ವೀರಣ್ಣ ಚರಂತಿಮಠ ಅವರನ್ನು ಸಭಾಪತಿ ಸ್ಥಾನಕ್ಕೆ ನೇಮಕ ಮಾಡಿ ಆದೇಶ ಹೊರಡಿಸಿದೆ.

ಬಿಟಿಡಿಎ ಅಧ್ಯಕ್ಷರಾಗಿ ಶಾಸಕ ವೀರಣ್ಣ ಚರಂತಿಮಠ ಆಗಿರುವುದು ಮುಳುಗಡೆ ಸಂತ್ರಸ್ತರಲ್ಲಿ ಸಾಕಷ್ಟು ಭರವಸೆಗಳು ಮೂಡಿಸಿದೆ. ನವನಗರ ಯುನಿಟ್-೧ ಮತ್ತು ೨ ರ ಸಮಗ್ರ ಅಭಿವೃದ್ಧಿ ಜತೆಗೆ ಹಂತ -೩ ರ ಕಾರ್ಯಗಳ ಅನುಷ್ಠಾನಕ್ಕೆ ಹೆಚ್ಚಿನ ವೇಗ ಸಿಗಲಿದೆ. ಮುಳುಗಡೆ ಸಂತ್ರಸ್ತರಿಗೆ ಸೂಕ್ತ ಪರಿಹಾರ, ಪುನರ್ವಸತಿಗೆ ಅನುಕೂಲವಾಗಲಿದೆ ಎನ್ನುವ ಭರವಸೆಯನ್ನು ಅವರ ಬೆಂಬಲಿಗರು ವ್ಯಕ್ತ ಪಡಿಸುತ್ತಿದ್ದಾರೆ.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com