ಎಸ್.ಎಂ.ವಿ, ನಾಲ್ವಡಿ: ಕೆಆರ್‌ಎಸ್ ಬಳಿ ತರಾತುರಿಯಲ್ಲಿ ನಿರ್ಮಾಣವಾಗ್ತಿವೆ ಎರಡು ಬೃಹತ್ ಪ್ರತಿಮೆಗಳು!

ವಿವಾದದ ನಡುವೆಯೇ ಕನ್ನಂಬಾಡಿ ಅಣೆಕಟ್ಟೆಯ ಬಳಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ನರಾಜ ಒಡೆಯರ್ ಮತ್ತು ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. 
ಕೆಆರ್ ಎಸ್ ಡ್ಯಾಮ್ ಬಳಿ ಪ್ರತಿಮೆ ನಿರ್ಮಾಣ
ಕೆಆರ್ ಎಸ್ ಡ್ಯಾಮ್ ಬಳಿ ಪ್ರತಿಮೆ ನಿರ್ಮಾಣ

ಮಂಡ್ಯ: ವಿವಾದದ ನಡುವೆಯೇ ಕನ್ನಂಬಾಡಿ ಅಣೆಕಟ್ಟೆಯ ಬಳಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ನರಾಜ ಒಡೆಯರ್ ಮತ್ತು ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. 

ಅದರಲ್ಲೂ ಪ್ರಗತಿಪರರು ಮತ್ತು ಹೋರಾಟಗಾರರ ತೀವ್ರ ಹೋರಾಟದ ನಡುವೆಯೂ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆಯ ನಿರ್ಮಾಣ ಕಾರ್ಯವೂ ಸಹ ಬರದಿಂದ ಸಾಗಿರುವುದು ಅಸಮಾಧಾನಕ್ಕೆ ತುಪ್ಪ ಸುರಿದಂತಾಗಿದೆ. ರಾಜ್ಯ ಸರ್ಕಾರ ಕೆಆರ್ ಎಸ್ ಅಣೆಕಟ್ಟೆಯ ಮುಖ್ಯ ದ್ವಾರದಲ್ಲಿ ನಾಲ್ವಡಿ ಕೃಷ್ಣ ರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯ ಅವರ ಪ್ರತಿಮೆಗಳನ್ನ ನಿರ್ಮಾಣ ಮಾಡಲು ಈಗಾಗಲೇ ಮೈಸೂರು ಮೂಲದ ಹೆಚ್‌ಎಸ್‌ಆರ್ ಕಂಪನಿಗೆ ೯ ಕೋಟಿ ರೂಪಾಯಿಗೆ ಟೆಂಡರ್ ಕೂಡ ನೀಡಿದೆ. ಟೆಂಡರ್ ಪಡೆದಿರುವ ಕಂಪನಿ ಎರಡೂ ಪ್ರತಿಮೆಗಳ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಂಡಿದೆ.

ಈ ನಡುವೆಯೇ ಮಂಡ್ಯ, ಮೈಸೂರು ಜಿಲ್ಲೆಗಳ ಪ್ರಗತಿಪರ ಸಂಘಟನೆಗಳ ಮುಖಂಡರು ಮೈಸೂರು ಮಹಾರಾಜ ನಾಲ್ವಡಿಯವರ ಸರಿಸಮಾನವಾಗಿ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಾಣ ಮಾಡುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕನ್ನಂಬಾಡಿ ಅಣೆಕಟ್ಟು ನಿರ್ಮಾಣಕ್ಕೆ ಸರ್.ಎಂ.ವಿಶ್ವೇಶ್ವರಯ್ಯ ಒಬ್ಬರೇ ಶ್ರಮಿಸಿಲ್ಲ. ವಿಶ್ವೇಶ್ವರಯ್ಯರಂತೆ ಏಳು ಮಂದಿ ದಿವಾನರು ಅಣೆಕಟ್ಟು ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡಿದ್ದಾರೆ. ನಿಲ್ಲಿಸುವುದಾದರೇ ಏಳು ಜನ ದಿವಾನರ ಪ್ರತಿಮೆ ನಿಲ್ಲಿಸಿ ಅನ್ನೋದು ಪ್ರಗತಿಪರ ಸಂಘಟನೆಗಳ ಮುಖಂಡರ ಆಗ್ರಹವಾಗಿದೆ. 

ಈಗಾಗಲೆ ಕೆಆರ್‌ಎಸ್ ಡ್ಯಾಂ ಬಳಿ ಖ್ಯಾತ ಇತಿಹಾಸ ತಜ್ಞ ಪ್ರೊ.ನಂಜರಾಜೆಅರಸ್ ಸೇರಿದಂತೆ ಹಲವು ಪ್ರಮುಖ ಚಿಂತಕರು, ವಿವಿಧ ಸಂಘಟನೆಗಳ ನಾಯಕರ ನೇತೃತ್ವದಲ್ಲಿ ಧರಣಿ ಪ್ರತಿಭಟನೆ ನಡೆಸಿ ಯಾವುದೇ ಕಾರಣಕ್ಕೂ ರಾಜರ ಸರಿಸಮಕ್ಕೆ ವಿಶ್ವೇಶ್ವರಯ್ಯನವರ ಪ್ರತಿಮೆ ನಿರ್ಮಾಣ ಮಾಡದಂತೆ ಆಗ್ರಹಿಸಿದ್ದಾರೆ. ಪ್ರಗತಿಪರರು, ರೈತರು, ವಿವಿಧ ಸಂಘಟನೆಗಳ ಪ್ರತಿಭಟನೆ ಮತ್ತು ವಿರೋಧ ತೀವ್ರವಾಗುತ್ತಿದ್ದಂತೆ ಸರ್ಕಾರ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣ ಕಾಮಗಾರಿಯನ್ನ ಚುರುಕುಗೊಳಿಸಿದೆ. ಈಗಾಗಲೇ ಅಧಿಕಾರಿಗಳು ಗುತ್ತಿಗೆದಾರರಿಗೆ ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸರ್ಕಾರದ ಸೂಚನೆಯಂತೆ ಗುತ್ತಿಗೆದಾರರು ತರಾತುರಿಯಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದೇ ಆದರೆ, ಕನ್ನಂಬಾಡಿ ಕಟ್ಟೆಗೆ ಬಾಗಿನ ಸಮರ್ಪಣೆ ಕಾರ್ಯಕ್ರಮದಂದೇ ಎರಡೂ ಪ್ರತಿಮೆಗಳ ಲೋಕಾರ್ಪಣೆ ಕೂಡ ಆಗಲಿದೆ.

ಒಡೆಯರ್ ಗಿಂತ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣವೇ ಚುರುಕಿನಿಂದ ನಡೆಯುತ್ತಿದ್ದು, ಹೀಗಾಗಿ ನಾಲ್ವಡಿಯವರ ಪ್ರತಿಮೆಗಿಂತ ಮೊದಲೇ ವಿಶ್ವೇಶ್ವರಯ್ಯ ಅವರ ಪ್ರತಿಮೆ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎನ್ನಲಾಗಿದ್ದು ತರಾತುರಿಯಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಾಣ ಕಾರ್ಯವನ್ನು ನಡೆಸುತ್ತಿರುವುದರ ಹಿಂದಿನ ಮರ್ಮವೇನು ಅಂತಾ ಹೋರಾಟಗಾರರ ಪ್ರಶ್ನಿಸಿದ್ದಾರೆ. ಪ್ರತಿಮೆಗಳ ನಿರ್ಮಾಣ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಸ್ಥಳೀಯ ಶಾಸಕ ರವೀಂದ್ರ ಕೂಡ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣಕ್ಕೆ ವಿರೋಧ ಸರಿಯಲ್ಲ. ಇಬ್ಬರು ಜಿಲ್ಲೆಗೆ ಕೊಡುಗೆ ನೀಡಿದ್ದಾರೆ ಹಾಗಾಗಿ ಇಬ್ಬರ ಪ್ರತಿಮೆಯೂ ಇರಲಿ ಅಂತಿಮವಾಗಿ ಸರ್ಕಾರ ನಿರ್ಧರಿಸುತ್ತದೆ ಎಂದಿದ್ದಾರೆ.

ಪ್ರತಿಮೆ ನಿರ್ಮಾಣ ಅವೈಜ್ಞಾನಿಕ:
ಡ್ಯಾಂ ಬಳಿ ಪ್ರತಿಮೆ ನಿರ್ಮಾಣವೇ ಅವೈಜ್ಞಾನಿಕ ಎಂಬ ಆರೋಪ ಕೂಡ ಕೇಳಿ ಬರುತ್ತಿದ್ದು, ಪ್ರತಿಮೆಯಿಂದ ಅಣೆಕಟ್ಟು ಸೌಂದರ್ಯಕ್ಕೆ ಧಕ್ಕೆಯಾಗಲಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಅಣೆಕಟ್ಟೆಗೆ ಡ್ಯಾಂನ ಸ್ವಾಗತ ಕಮಾನು ಕಳಸವಿದ್ದಂತೆ. ಅದನ್ನೇ ಮರೆ ಮಾಚುವಂತೆ ಪ್ರತಿಮೆ ನಿರ್ಮಾಣ ಸರಿಯಲ್ಲ. ದೂರದಿಂದಲೇ ಪ್ರವಾಸಿಗರು ಅಣೆಕಟ್ಟೆಯ ಸೌಂದರ್ಯ ಸವಿಯುತ್ತಿದ್ದರು. ಅವೈಜ್ಞಾನಿಕವಾಗಿ ಪ್ರತಿಮೆ ನಿರ್ಮಾಣ ಮಾಡುತ್ತಿರುವುದರಿಂದ ಡ್ಯಾಂನ ಸೌಂದರ್ಯಕ್ಕೆ ಧಕ್ಕೆಯಾಗಲಿದೆ ಅಂತಾರೆ ಸ್ಥಳೀಯರು.

ಭದ್ರತೆಯಲ್ಲಿ ಕಾಮಗಾರಿ:
ಹಾಲಿ ಅಣೆಕಟ್ಟೆಯ ಭದ್ರತೆಗೆ ಇರುವ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಬಂದೋಬಸ್ತ್ನಲ್ಲಿಯೆ ಪ್ರತಿಮೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ,ಯಾರಿಂದಲೂ ಪ್ರತಿಮೆಗಳ ನಿರ್ಮಾಣ ಕಾಮಗಾರಿಗೆ ಅಡ್ಡಿಯಾಗದಂತೆ ನಿಗಾವಹಿಸಲಾಗಿದೆ. ವಿರೋಧ ತೀವ್ರಗೊಳ್ಳುವ ಮುನ್ನವೇ ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಾಣ ಕಾರ್ಯ ಮುಗಿಸಲು ಪ್ಲಾನ್ ಮಾಡಲಾಗಿದೆ ಎನ್ನಲಾಗಿದೆ. ಒಟ್ಟಾರೆ ಸರ್.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಾಣದ ಹೆಸರಲ್ಲಿ ಕೆಆರ್‌ಎಸ್ ಮತ್ತೊಮ್ಮೆ ವಿವಾದದ ಕೇಂದ್ರವಾಗಿದೆ, ಈ ವಿವಾದವನ್ನ ಸರ್ಕಾರ ಯಾವ ರೀತಿ ಬಗೆಹರಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ವರದಿ: ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com