ಬಿಐಇಸಿ ಕೇಂದ್ರ ಈಗ ಸೋಂಕಿತರ ಆರೈಕೆಗೆ ಮುಕ್ತ: ಕೋವಿಡ್ ಆರೈಕೆ ಕೇಂದ್ರಕ್ಕೆ ಚಾಲನೆ ನೀಡಿದ ಸಚಿವ ಆರ್.ಅಶೋಕ್

ಕೊರೋನಾ ಸೋಂಕಿತರ ಆರೈಕೆಗಾಗಿ ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಿರ್ಮಾಣ ಮಾಡಲಾಗಿರುವ ಕೋವಿಡ್ ಆರೈಕೆ ಕೇಂದ್ರವನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಹಾಗೂ ಕಂದಾಯ ಸಚಿವ ಆರ್. ಅಶೋಕ ಅವರು ಸೋಮವಾರ ಉದ್ಘಾಟನೆ ಮಾಡಿದರು. 
ಕೋವಿಡ್ ಆರೈಕೆ ಕೇಂದ್ರ
ಕೋವಿಡ್ ಆರೈಕೆ ಕೇಂದ್ರ

ಬೆಂಗಳೂರು: ಕೊರೋನಾ ಸೋಂಕಿತರ ಆರೈಕೆಗಾಗಿ ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಿರ್ಮಾಣ ಮಾಡಲಾಗಿರುವ ಕೋವಿಡ್ ಆರೈಕೆ ಕೇಂದ್ರವನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಹಾಗೂ ಕಂದಾಯ ಸಚಿವ ಆರ್. ಅಶೋಕ ಅವರು ಸೋಮವಾರ ಉದ್ಘಾಟನೆ ಮಾಡಿದರು. 

ಆರೈಕೆ ಕೇಂದ್ರದಲ್ಲಿ ಒಟ್ಟು 6,500 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ 5 ಸಾವಿರ ಹಾಸಿಗೆಗಳನ್ನು ಕೊರೋನಾ ಸೋಂಕಿತರ ಆರೈಕೆಗೆ ಉಳಿದ 1,500 ಹಾಸಿಗೆಯನ್ನು ವೈದ್ಯಕೀಯ ಮತ್ತು ಇತರೆ ಸಿಬ್ಬಂದಿಗೆ ಮೀಸಲಿಡಲಾಗಿದೆ. ಮೊದಲ ಹಂತವಾಗಿ ಆರೈಕೆ ಕೇಂದ್ರದ ಸಭಾಂಗಣ 5ರಲ್ಲಿ ವ್ಯವಸ್ಥೆ ಮಾಡಲಾಗಿರುವ 24 ವಾರ್ಡ್'ನಲ್ಲಿ 1,536 ಹಾಸಿಗೆಗಳನ್ನು ಸೋಂಕಿತರ ಆರೈಕೆಗೆ ಮುಕ್ತಗೊಳಿಸಲಾಗಿದೆ. 

ಕೋವಿಡ್ ಆರೈಕೆ ಕೇಂದ್ರಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೈಕೆ ಕೇಂದ್ರ ನಿರ್ಮಾಣದ ಕುರಿತು ಆಧಾರವಿಲ್ಲದೆ ಆರೋಪ ಮಾಡುವ ಬದಲು ಪ್ರತಿಪಕ್ಷ ನಾಯಕರು ಕೊರೋನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ಕೈಜೋಡಿಸುವ ಕೆಲಸ ಮಾಡಲಿ ಎಂದು ಹೇಳಿದ್ದಾರೆ. 

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೈಕೆ ಕೇಂದ್ರದ ಬಗ್ಗೆ ಕೇವಲ ಊಹಾಪೋಹ ಆಧರಿಸಿ ಆರೋಪ ಮಾಡಿದ್ದಾರೆ. ಆದರೆ, ಈ ಕೇಂದ್ರದ ಪ್ರತಿಯೊಂದು ವೆಚ್ಚವೂ ಪಾರದರ್ಶಕವಾಗಿದೆ ಎಂದು ಸಮರ್ಥಿಸಿಕೊಂಡರು. 

ಆರೈಕೆ ಕೇಂದ್ರಕ್ಕೆ ಹಾಸಿಗೆ, ಮಂಚ, ಫ್ಯಾನ್, ಟೇಬಲ್, ಕುಡಿಯುವ ನೀರು, ಮ್ಯಾಟ್ ಸೇರಿ 7 ಸಾಮಾಗ್ರಿಗಳ ಖರೀದಿಗೆ ರೂ.4.05 ಕೋಟಿ ವೆಚ್ಚ ಮಾಡಲಾಗಿದೆ. ಬಾತ್ ರೂಂ. ಮಗ್ ಸೇರಿ ಒಟ್ಟು 19 ಸಾಮಾಗ್ರಿಗಳನ್ನು ಬಾಡಿಗೆ ಪಡೆಯಲಾಗಿದ್ದು, ತಿಂಗಳಿಗೆ ರೂ.4.96 ಕೋಟಿ ಬಾಡಿಗೆ ನೀಡಬೇಕಾಗಿದೆ. ಇನ್ನು ಫ್ಲೋರಿಂಗ್'ಗೆ ರೂ.2.92 ಕೋಟಿ ವೆಚ್ಚ ಮಾಡಲಾಗಿದ್ದು, ಒಟ್ಟು ರೂ.11.9 ಕೋಟಿ ಈಗ ವೆಚ್ಚವಾಗಿದೆ. ಮುಂದಿನ ತಿಂಗಳಿಂದ ಬಾಡಿಗೆ ಮೊತ್ತವಾಗಿ ರೂ.4.96 ಕೋಟಿ ಮಾತ್ರ ವೆಚ್ಚ ಮಾಡಲಾಗುವುದು ಎಂದು ವಿವರಿಸಿದರು. 

ಖರೀದಿ ಮಾಡಿರುವ 7 ವಸ್ತುಗಳನ್ನು ಮರು ಬಳಕೆ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ. ಆರೈಕೆ ಕೇಂದ್ರ ಮುಗಿದ ನಂತರ ಸರ್ಕಾರಿ ಆಸ್ಪತ್ರೆಗಳು, ಹಾಸ್ಟೆಲ್ ಗಳಲ್ಲಿ ಮರುಬಳಕೆ ಮಾಡಲಾಗುವುದು ಎಂದು ತಿಳಿಸಿದರು. 

ಇಡೀ ವಿಶ್ವವನ್ನೇ ಸೋಂಕು ಕಾಡುತ್ತಿದೆ. ಹಲವಾರು ತಜ್ಞರು ವರದಿಗಳನ್ನು ನೀಡಿದ್ದು, ಡಿಸೆಂಬರ್ ಕೊನೆವರೆಗೂ ಸೋಂಕು ಇರಬಹುದು ಎಂದು ಹೇಳಿದ್ದಾರೆ. ಹೀಗಾಗಿ ವಿರೋಧ ಪಕ್ಷಗಳ ನಾಯಕರು ವೃಥಾ ಆರೋಪದ ಬದಲು ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಕೈ ಜೋಡಿಸಿ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಿ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com