ನನಸಾಗದ ಕನಸು: 14 ವರ್ಷಗಳಿಂದ ಸ್ವಂತ ಸೂರಿಗೆ ಕಾಯುತ್ತಿರುವ ರಾಮನಗರ ಜಿಲ್ಲೆಯ ದೊಡ್ಡಮಣ್ಣಿನ ಗುಡ್ಡೆ ನಿವಾಸಿಗಳು!
ದೊಡ್ಡಮಣ್ಣಿನಗುಡ್ಡೆ (ರಾಮನಗರ): ಕೈಗೆಟಕುವ ದರದಲ್ಲಿ ಮನೆಗಳು ಸಿಗಬಹುದೆಂದು 1,400ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿ ಸತತ 14 ವರ್ಷಗಳಿಂದ ಕಾಯುತ್ತಿದ್ದಾರೆ. ಆದರೆ ಸ್ವಂತ ಮನೆ ಮಾಡಿಕೊಳ್ಳುವ ಅವರ ಕನಸು ಇಲ್ಲಿಯವರೆಗೆ ನನಸಾಗೇ ಇಲ್ಲ.
2006ರಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಮ್ಮ ಕ್ಷೇತ್ರವಾದ ರಾಮನಗರದಲ್ಲಿ ಬಡವರಿಗೆ ಸೂರು ಕಲ್ಪಿಸಿಕೊಡಲು ಕೈಗೆಟಕುವ ದರದಲ್ಲಿ ಗೃಹ ಯೋಜನೆಯನ್ನು ಆರಂಭಿಸಿದ್ದರು. ಸುಮಾರು 240 ಫ್ಲಾಟ್ ಗಳನ್ನು ನಿರ್ಮಿಸಿ 1,430 ಜನರನ್ನು ಫಲಾನುಭವಿಗಳೆಂದು ಗುರುತಿಸಿ ಅವರು 5,100 ರೂಪಾಯಿ ಆರಂಭಿಕ ಠೇವಣಿಯೊಂದಿಗೆ ಮನೆ ನಿರ್ಮಿಸಿಕೊಡುವುದಾಗಿತ್ತು. ಪ್ರತಿ ಫ್ಲಾಟ್ ನ ಬೆಲೆ 1 ಲಕ್ಷದ 35 ಸಾವಿರ ಎಂದು ನಿಶ್ಚಯಿಸಲಾಗಿತ್ತು. ಎಸ್.ಸಿ ಮತ್ತು ಎಸ್ ಟಿ ವರ್ಗದ ಫಲಾನುಭವಿಗಳು 13 ಸಾವಿರದ 500 ರೂಪಾಯಿ ಕೊಟ್ಟರೆ ಸಾಮಾನ್ಯ ವರ್ಗದವರು 15 ಸಾವಿರ ರೂಪಾಯಿ ನೀಡಬೇಕೆಂದು ನಿಗದಿಯಾಗಿತ್ತು.
ಇದಕ್ಕಾಗಿ ರಾಮನಗರ ಜಿಲ್ಲೆಯ ದೊಡ್ಡಮಣ್ಣಿನ ಗುಡ್ಡೆಯಲ್ಲಿ 8 ಎಕರೆ ಜಾಗವನ್ನು ಗುರುತಿಸಲಾಗಿತ್ತು. ಇದು ಬೆಂಗಳೂರು-ಮೈಸೂರು ಹೆದ್ದಾರಿಯಿಂದ 1 ಕಿಲೋ ಮೀಟರ್ ದೂರದಲ್ಲಿದೆ. ಜಾನಪದ ಲೋಕಕ್ಕೆ ಹತ್ತಿರದಲ್ಲಿ 1 ಬೆಡ್ ರೂಂನ 240 ಫ್ಲಾಟ್ ಗಳನ್ನು ನಿರ್ಮಿಸಲಾಗಿತ್ತು. ಇಲ್ಲಿ 30 ಬ್ಲಾಕ್ ಗಳಿದ್ದು ಪ್ರತಿ ಬ್ಲಾಕ್ ನಲ್ಲಿ 8 ಮನೆಗಳಿವೆ. 20*20 ಚದರಡಿ ವಿಸ್ತೀರ್ಣದ ಮನೆಗಳಲ್ಲಿ ಹಾಲ್, ಬೆಡ್ ರೂಂ, ಅಡುಗೆ ಕೋಣೆ, ಟಾಯ್ಲೆಟ್ ಮತ್ತು ಬಾತ್ ರೂಂಗಳಿವೆ. ಸಂಪರ್ಕ ರಸ್ತೆಯಲ್ಲಿ ಡಾಂಬರು ಮತ್ತು ಬೀದಿ ದೀಪಗಳನ್ನು ಮಾಡಿಕೊಡಲಾಗಿದೆ.
ಆದರೆ ಈ ಮನೆಗಳು ಕಳಪೆ ಕಾಮಗಾರಿಗೆ ಕನ್ನಡಿ ಹಿಡಿಯುವಂತಿದ್ದು, ಖಾಲಿ ಇರುವ ಮನೆಗಳ ಕಿಟಕಿ ಬಾಗಿಲುಗಳು ಮುರಿದು ಹೋಗಿವೆ, ಗೋಡೆಗಳಲ್ಲಿ ಬಿರುಕು ಬಿಟ್ಟಿದೆ. ಛಾವಣಿ ಸೋರುವಂತಿದೆ, ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಅವುಗಳಲ್ಲಿ ಧೂಳು ತುಂಬಿಕೊಂಡಿವೆ. ನೀರನ್ನು ಸಂಗ್ರಹಿಸುವ ಸಂಪ್ ಗಳ ಮುಚ್ಚಳಗಳನ್ನು ಯಾರೋ ಕದ್ದುಕೊಂಡು ಹೋಗಿದ್ದಾರೆ. ಇಲ್ಲಿ ಅನೇಕ ಅಕ್ರಮ ಚಟುವಟಿಕೆಗಳು ನಡೆಯುತ್ತಿರುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ.ರಾತ್ರಿ ಹೊತ್ತಿನಲ್ಲಿ ಇಲ್ಲಿ ಅಕ್ರಮ ಚಟುವಟಿಕೆಗಳು ನಡೆಯುವುದರಿಂದ ಓಡಾಡಲು ಭಯವಾಗುತ್ತದೆ ಎಂದು ಸ್ಥಳೀಯ ನಿವಾಸಿ ಮಂಜುನಾಥ್ ಹೇಳುತ್ತಾರೆ.
ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಕಂದಾಯ ಇಲಾಖೆಗೆ ಗೃಹ ನಿರ್ಮಾಣ ಉಸ್ತುವಾರಿ ವಹಿಸಿದ್ದರು. ಅದನ್ನು ಕರ್ನಾಟಕ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಗೆ ವಹಿಸಲಾಗಿತ್ತು. ಅದು ಮನೆ ನಿರ್ಮಿಸುತ್ತಿರುವಾಗ ಅರಣ್ಯ ಇಲಾಖೆ ಬಂದು ಈ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಹೇಳಿತು. ನಂತರ ನಿರ್ಮಾಣ ಚಟುವಟಿಕೆ ಕೆಲಸ ಅರ್ಧಕ್ಕೆ ಸ್ಥಗಿತಗೊಂಡಿತು. ತೀರಾ ಇತ್ತೀಚೆಗೆ ಕಂದಾಯ ಇಲಾಖೆ ಬೇರೆ ಜಾಗವನ್ನು ಅರಣ್ಯ ಇಲಾಖೆಗೆ ನೀಡಲು ನಿರ್ಧರಿಸಿ ಕಾಮಗಾರಿ ಮುಂದುವರಿಸಲು ನಿರ್ಧರಿಸಿದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
ಇನ್ನು ನೀಡದೆ ಉಳಿದಿರುವ 240 ಮನೆಗಳು ಮಾತ್ರ ಇದ್ದು , 1,400 ಅರ್ಜಿ ಸಲ್ಲಿಕೆಯಾಗಿರುವುದರಿಂದ ಇನ್ನುಳಿದ ಫಲಾನುಭವಿಗಳನ್ನು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಗುತ್ತದೆಯಂತೆ. ಇದೀಗ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ಲಾಟರಿ ಮೂಲಕ ಮನೆ ಸಿಗದವರಿಗೆ ಹಣ ಹಿಂತಿರುಗಿಸಲಾಗುತ್ತದೆಯೇ ಎಂದು ಕೇಳಿದಾಗ ಬೇರೆ ಯೋಜನೆಗಳಡಿ ಮನೆ ನಿರ್ಮಿಸಿ ಇಲ್ಲಿ ಸಿಗದವರಿಗೆ ಅವುಗಳಡಿ ಕೊಡಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ