ಶಿಫ್ಟ್ ಮಾದರಿಯಲ್ಲಿ, ಆನ್ ಲೈನ್ ತರಗತಿಗಳ ಮೂಲಕ ಶಾಲೆ ಮರು ಆರಂಭವಾಗಬೇಕು:ಡಿಆರ್ ಡಿಒ ಮಾಜಿ ಮಹಾ ನಿರ್ದೇಶಕ
ಬೆಂಗಳೂರು: ಕೊರೋನಾ ವೈರಸ್ ಸಮಯದಲ್ಲಿ ಶಾಲೆಗಳನ್ನು ತೆರೆಯುವುದಾದರೆ ಶಿಫ್ಟ್ ಮಾದರಿಯಲ್ಲಿ ಮತ್ತು ಪ್ರಾಜೆಕ್ಟ್ ಆಧಾರಿತ ಅಧ್ಯಯನವನ್ನು ಆದ್ಯತೆಯಾಗಿಟ್ಟುಕೊಂಡು ಆನ್ ಲೈನ್ ತರಗತಿಗಳನ್ನು ಆರಂಭಿಸುವಂತೆ ಖ್ಯಾತ ವಿಜ್ಞಾನಿ ಸಲಹೆ ನೀಡಿದ್ದಾರೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ)ದ ಮಾಜಿ ಮಹಾ ನಿರ್ದೇಶಕ ವಿ ಕೆ ಸಾರಸ್ವತ, ಕೋವಿಡ್-19 ಸಮಯದಲ್ಲಿ ಆನ್ ಲೈನ್ ತರಗತಿಗಳಿಗೆ ಅವರು ಹೆಚ್ಚು ಒಲವು ತೋರಿಸಿದ್ದಾರೆ.ಆದರೆ ಈ ಆನ್ ಲೈನ್ ತರಗತಿಗಳನ್ನು ಹೆಚ್ಚು ಸಂಘಟಿತವಾಗಿ, ಸಂವಾದಾತ್ಮಕ ರೀತಿಯಲ್ಲಿ ನಡೆಸಿ ಮಕ್ಕಳಿಗೆ ಹೆಚ್ಚು ಜ್ಞಾನ ಪೂರೈಕೆಯಾಗುವಂತೆ ಮಾಡಬೇಕು ಎಂದಿದ್ದಾರೆ.
ಮಕ್ಕಳ ಆರೋಗ್ಯವನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಶಾಲೆಗಳನ್ನು ಮರು ಆರಂಭಿಸಬೇಕು ಎಂದು ನೀತಿ ಆಯೋಗದ ಸದಸ್ಯರೊಬ್ಬರು ಸಹ ಹೇಳಿದ್ದಾರೆ.ಶಿಫ್ಟ್ ಮಾದರಿಯಲ್ಲಿ ಶಾಲೆಗಳನ್ನು ನಡೆಸಿದರೆ ಮಕ್ಕಳ ಸಂಖ್ಯೆ ಕಡಿಮೆಯಾಗಿ ಸ್ವಲ್ಪ ಮಟ್ಟಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬಹುದು, ಇದಕ್ಕೆ ಶಿಕ್ಷಕ-ಶಿಕ್ಷಕಿಯರ ಸಂಖ್ಯೆ ಕೂಡ ಹೆಚ್ಚಾಗಿ ಬೇಕಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಂದು ತರಗತಿಯ ಅರ್ಧದಷ್ಟು ಮಕ್ಕಳು ಅಥವಾ ಒಂದರಿಂದ 6ನೇ ತರಗತಿಯವರೆಗಿನ ಮಕ್ಕಳು ಬೆಳಗ್ಗೆ ಉಳಿದ ತರಗತಿಯ ಮಕ್ಕಳು ಸಾಯಂಕಾಲ ಬಂದರೆ ಮಕ್ಕಳ ದಟ್ಟಣೆ ಕಡಿಮೆ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬಹುದು ಎಂದು ಸಾರಸ್ವತ್ ಅಭಿಪ್ರಾಯಪಟ್ಟಿದ್ದಾರೆ.
ಆನ್ ಲೈನ್ ತರಗತಿ ನಡೆಸುವಾಗ ಮಕ್ಕಳು ಹೆಚ್ಚು ಕ್ರಿಯಾಶೀಲವಾಗಿ, ಸೃಜನಾತ್ಮಕವಾಗಿ ಪಾಲ್ಗೊಳ್ಳಲು ಪ್ರಾಜೆಕ್ಟ್ ಆಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು ಎಂಬುದು ಅವರ ಅನಿಸಿಕೆಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ