ಸಂಸದ ಸಂಗಣ್ಣ ಕರಡಿ ಪ್ರಯತ್ನದ ಫಲ: 68.6 ಕೋಟಿ ವೆಚ್ಚದ ಕುಷ್ಟಗಿ ಫ್ಲೈಓವರ್ 16ರಂದು ಲೋಕಾರ್ಪಣೆ!

ಬಹು ವರ್ಷಗಳ ಕನಸಾಗಿದ್ದ ಕುಷ್ಟಗಿ ಪಟ್ಟಣದ ಮಧ್ಯೆ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-50ಕ್ಕೆ 68.6 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಮೇಲ್ಸೇತುವೆ ಜೂ.16ರಂದು ಲೋಕಾಪರ್ಣೆಗೊಳ್ಳಲಿದೆ.
ಕುಷ್ಟಗಿ ಫ್ಲೈಓವರ್
ಕುಷ್ಟಗಿ ಫ್ಲೈಓವರ್

ಕೊಪ್ಪಳ: ಬಹು ವರ್ಷಗಳ ಕನಸಾಗಿದ್ದ ಕುಷ್ಟಗಿ ಪಟ್ಟಣದ ಮಧ್ಯೆ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-50ಕ್ಕೆ 68.6 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಮೇಲ್ಸೇತುವೆ ಜೂ.16ರಂದು ಲೋಕಾಪರ್ಣೆಗೊಳ್ಳಲಿದೆ.

2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಂಸದ ಸಂಗಣ್ಣ ಕರಡಿ ಅವರ ಸತತ ಪ್ರಯತ್ನದಿಂದಾಗಿ ಈ ಮೇಲ್ಸೇತುವೆ ನಿರ್ಮಾಣಕ್ಕೆ ಒಟ್ಟು 68 ಕೋಟಿ ಅನುದಾ ನೀಡಿತ್ತು. ಇದರಿಂದಾಗಿ ಕುಷ್ಟಗಿ ಪಟ್ಟಣದಲ್ಲಿ ಸುಸಜ್ಜಿತ ಫ್ಲೈಓವರ್ ನಿರ್ಮಾಣವಾಗಿದೆ. ಅತಿಯಾದ ವಾಹನಗಳ ಸಂಚಾರದಿಂದಾಗಿ ಅಪಘಾತಗಳು ಹೆಚ್ಚಿನ ಸಂಖ್ಯೆಯಲ್ಲಿ ಜರುಗುತ್ತಿದ್ದವು. ಹೀಗಾಗಿ ಪಟ್ಟಣದ ಜನತೆ ಅನೇಕ ವರ್ಷಗಳಿಂದ ಫ್ಲೈಓವರ್ ನಿರ್ಮಿಸುವಂತೆ ಆಗ್ರಹಿಸುತ್ತಿದ್ದರು. ಅಷ್ಟು ವರ್ಷಗಳ ಕಾಲ ಅಧಿಕಾರ ನಡೆಸಿದ ಯಾವ ಸರ್ಕಾರಗಳು ಸಹ ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಿರಲಿಲ್ಲ ಎನ್ನುವುದು ಸತ್ಯ.

2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಹಲವು ಯೋಜನೆಗಳಿಗೆ ಅನುದಾನ‌ ನೀಡಿತ್ತು. ಅದರಂತೆಯೆ ಕುಷ್ಟಗಿ ಪಟ್ಟಣದಲ್ಲಿ ಹಾಯ್ದು ಹೋಗಿರುವ ಹೆದಗದಾರಿಗೆ ಮೇಲ್ಸತುವೆ ನಿರ್ಮಾಣಕ್ಕೆ ಅನುದಾನ ನೀಡಿತ್ತು. ಕೇಂದ್ರ ಸರ್ಕಾರದ ಮೇಲೆ ನಿರಂತರ ಒತ್ತಡ ತಂದ ಪರಿಣಾಮದಿಂದಾಗಿ ಕೇಂದ್ರ ಸರ್ಕಾರ 2016ರಲ್ಲಿ ಮೇಲ್ಸುತುವೆ ನಿರ್ಮಿಸಲು ಒಟ್ಟು 68.6 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಜನರ ಆಶಯದಂತೆ ವೇಗವಾಗಿಯೆ ಕಾಮಗಾರಿ ಪೂರ್ಣಗೊಂಡಿದ್ದು, ಇದೀಗ ಜೂನ್ 16ರಂದು ಲೋಕಾರ್ಪಣೆಗೊಳ್ಳುವ ಮೂಲಕ ಸಾರ್ವಜನಿಕ ಉಪಯೋಗಕ್ಕೆ ದೊರಕಲಿದೆ.

ಮೋದಿ ಸರ್ಕಾರ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಹತ್ತು ಹಲವು ಯೋಜನೆಗಳನ್ನು ನೀಡಿದೆ. ರೈಲ್ವೆ ಲೇನ್, ಹೊಸ ರೈಲು, ಹೆದ್ದಾರಿ, ಉಚಿತ ಗ್ಯಾಸ್ ವಿತರಣೆ, ಕೇಂದ್ರೀಯ ವಿದ್ಯಾಲಯ, ಭಾರತ ಮಾಲಾ ರಸ್ತೆ, ಪಾಸ್ ಪೋರ್ಟ್ ಸೇವಾ ಕೇಂದ್ರ ಸೇರಿದಂತೆ ಸಾವಿರಾರು ಕೋಟಿ ರೂಪಾಯಿ ಅನುದಾನ‌ ನೀಡಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದೆ. ನಮ್ಮ‌ ಬೇಡಿಕೆಗಳಿಗೆ ಸದಾ ಮನ್ನಣೆ‌ ನೀಡಿ ಅನುದಾನ ಬಿಡುಗಡೆ ಮಾಡಿದ ಮೋದಿಯವರಿಗೂ, ಸಂಬಂಧಿಸಿದ ಕೇಂದ್ರ ಸಚಿವರುಗಳಿಗೂ ಕೊಪ್ಪಳ ಕ್ಷೇತ್ರದ ಜನತೆ ಪರವಾಗಿ ಧನ್ಯವಾದಗಳನ್ನು ತಿಳಿಸುವೆ. ಬರುವ ದಿನಗಳಲ್ಲಿ ಕ್ಷೇತ್ರಕ್ಕೆ ಬೇಕಾದ ಇನ್ನಷ್ಟು ಯೋಜನೆಗಳನ್ನು ತರುವಲ್ಲಿ ಪ್ರಯತ್ನಿಸುತ್ತೇನೆ ಎಂದು ಸಂಸದ ಸಂಗಣ್ಣ ಕರಡಿಯವರು ಹೇಳುತ್ತಾರೆ.

ಸಚಿವರಿಂದ ಉದ್ಘಾಟನೆ
ಜೂನ್ 16ರಂದು ಬೆಳಿಗ್ಗೆ 10ಕ್ಕೆ ಕುಷ್ಟಗಿ ಫ್ಲೈಓವರ್ ನ್ನು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ಅವರು ಮೇಲ್ಸೇತುವೆಯನ್ನು ಲೋಕಾಪರ್ಣೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸದ ಸಂಗಣ್ಣ ಕರಡಿಯವರು ವಹಿಸಲಿದ್ದಾರೆ. ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು, ಬಿಜೆಪಿ ಪಕ್ಷದ ಮುಖಂಡರು, ವಿವಿಧ ಇಲಾಖೆ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಅಪಘಾತಕ್ಕೆ ಬ್ರೇಕ್..
ಕುಷ್ಟಗಿ ಪಟ್ಟಣದ ಮಧ್ಯೆಯೆ ಹೆದ್ದಾರಿ ಹಾಯ್ದು ಹೋಗಿರುವ ಕಾರಣಕ್ಕೆ ಹೆಚ್ಚಿನ‌ ಸಂಖ್ಯೆಯಲ್ಲಿ ಇದುವರೆಗೂ ಅಪಘಾತದ ಪ್ರಕರಣಗಳು ನಡೆದಿವೆ. ಇದೀಗ ಮೇಲ್ಸೇತುವೆ ನಿರ್ಮಾಣದಿಂದಾಗಿ ಬರುವ ದಿನಗಳಲ್ಲಿ ಅಪಘಾತದ ಪ್ರಕರಣಗಳಿಗೆ ಬ್ರೇಕ್‌ಬೀಳಲಿದೆ. ಫ್ಲೈಓವರ್ ನಿರ್ಮಾಣ ಪಟ್ಟಣದ ಜನತೆಗೆ ನೆಮ್ಮದಿ ನಿಟ್ಟುಸಿರು ಬಿಡುವಂತೆ ಮಾಡಿದೆ.

ಬಹುವರ್ಷಗಳಿಂದ ಕುಷ್ಟಗಿ ಪಟ್ಟಣದಲ್ಲಿ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಿಸುವಂತೆ ಜನತೆಯ ಬೇಡಿಕೆ ಇತ್ತು. ಇಲ್ಲಿ ಫ್ಲೈಓವರ್ ನಿರ್ಮಿಸುವ ಅಗತ್ಯವೂ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ಹೆದ್ದಾರಿ ಸಚಿವರಿಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ 68.6 ಕೋಟಿ ನೀಡಿತ್ತು. ಇದೀಗ ಸೇತುವೆ ವೇಗವಾಗಿ ನಿರ್ಮಾಣವಾಗಿದೆ. ಜನತೆಗೆ ಅನುಕೂಲವಾಗಲು ಜೂನ್ 16ರಂದು ಲೋಕಾರ್ಪಣೆ ಮಾಡಲಾಗುವುದು. - ಸಂಗಣ್ಣ ಕರಡಿ, ಸಂಸದರು, ಕೊಪ್ಪಳ.

ವರದಿ: ಬಸವರಾಜ ಕರುಗಲ್​

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com