
ಬೆಂಗಳೂರು: ಅಂತಾರಾಜ್ಯ ಕುಖ್ಯಾತ ಕಳ್ಳನೋರ್ವನನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿ, 30 ಲಕ್ಷ ರೂ. ಬೆಲೆಯ ಚಿನ್ನಾಭರಣ ಸೇರಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ಗುಂಟುರು ಮೂಲದ ರಾಯಪತಿ ವೆಂಕಣ್ಣ ಅಲಿಯಾಸ್ ವೆಂಕಯ್ಯ ( 44 ) ಬಂಧಿತ ಆರೋಪಿಗಳು. ಬಂಧಿತನಿಂದ ಸುಮಾರು 30 ಲಕ್ಷ ರೂ. ಬೆಲೆ ಬಾಳುವ 600 ಗ್ರಾಂ ಚಿನ್ನಾಭರಣ ಮತ್ತು 5 ಕೆ.ಜಿ. ಬೆಳ್ಳಿ ಸಾಮಾನುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಹಾಲಕ್ಷ್ಮೀಲೇಔಟ್ ಪೊಲೀಸರು ತಿಳಿಸಿದ್ದಾರೆ.
ಯೋಗೇಶ್ ( 27) ಎಂಬುವರು ಜ.30ರಂದು ಯಾರೋ ತಮ್ಮ ಮನೆಯ ಬಾಗಿಲು ಒಡೆದು ಬೀರುವಿನಲ್ಲಿಟ್ಟಿದ್ದ ಸುಮಾರು 119 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂದು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ಜಾಡು ಹಿಡಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗೆ ಜೂಜಾಟದ ಹವ್ಯಾಸವಿದ್ದು, ಈತ 2010 ನೇ ಸಾಲಿನಿಂದ ಆಂಧ್ರಪ್ರದೇಶದ ಗುಂಟೂರು ಮತ್ತು ವಿಜಯವಾಡ ಜಿಲ್ಲೆಗಳಲ್ಲಿ 36 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, 5 ಬಾರಿ ಜೈಲು ಶಿಕ್ಷೆ ಅನುಭವಿಸಿದ್ದಾನೆ. 2012 ರಲ್ಲಿ ಬಳ್ಳಾರಿಯಲ್ಲಿ ಒಂದು ಕಳವು ಪ್ರಕರಣದಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸಿದ್ದ..
ಈತ ಆಂದ್ರ ಪ್ರದೇಶದಿಂದ ಬಂದು ಆರ್.ಎಂ.ಸಿ.ಯಾರ್ಡ್‍ನ ಲಾಡ್ಜಿನಲ್ಲಿ ರೂಮ್ ಮಾಡಿಕೊಂಡಿದ್ದು, ಪೀಣ್ಯ ಪೊಲೀಸ್ ಠಾಣಾ ಸರಹದ್ದಿನಲ್ಲಿ ಒಂದು ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಬಂದು ಅದೇ ವಾಹನದಲ್ಲಿ ಬಂದು ಮಹಾಲಕ್ಷ್ಮೀಲೇಔಟ್‍ನಲ್ಲಿ ಕಳವು ಮಾಡಿದ್ದಾನೆ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆಯಲ್ಲಿ- 2 ಮತ್ತು ಪೀಣ್ಯ ಪೊಲೀಸ್ ಠಾಣೆ -1 ದ್ವಿಚಕ್ರವಾಹನ ಪ್ರಕರಣ ಪತ್ತೆಯಾಗಿವೆ. ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ಕೆ. ಎಸ್. ವೆಂಕಟೇಶ್ ನಾಯ್ಡು ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
Advertisement