ಮೈಷುಗರ್ ಕಾರ್ಖಾನೆ: 'ಓ ಅಂಡ್ ಎಂ' ಬೆಸ್ಟ್ ಎಂದ ಯದುವೀರ್; ಒಡೆಯರ್ ಹೇಳಿಕೆ ಸ್ವಾಗತಾರ್ಹ ಎಂದ ನಿರಾಣಿ

ಪುನರಾರಂಭಕ್ಕೆ ತವಕಿಸುತ್ತಿರುವ ಮಂಡ್ಯ ಜಿಲ್ಲೆಯ ರೈತರ ಜೀವನಾಡಿ ಮೈಷುಗರ್ ಕಾರ್ಖಾನೆಯ ಪರ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ದನಿ ಎತ್ತಿದ್ದಾರೆ.
ಮೈಷುಗರ್ ಕಾರ್ಖಾನೆ: 'ಓ ಅಂಡ್ ಎಂ' ಬೆಸ್ಟ್ ಎಂದ ಯದುವೀರ್; ಒಡೆಯರ್ ಹೇಳಿಕೆ ಸ್ವಾಗತಾರ್ಹ ಎಂದ ನಿರಾಣಿ

ಮಂಡ್ಯ: ಪುನರಾರಂಭಕ್ಕೆ ತವಕಿಸುತ್ತಿರುವ ಮಂಡ್ಯ ಜಿಲ್ಲೆಯ ರೈತರ ಜೀವನಾಡಿ ಮೈಷುಗರ್ ಕಾರ್ಖಾನೆಯ ಪರ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ದನಿ ಎತ್ತಿದ್ದಾರೆ.

ಮೈಷುಗರ್ ಕಾರ್ಖಾನೆ ಆರಂಭ ಕುರಿತಂತೆ ರಾಜಕೀಯ ಆರೋಪ-ಪ್ರತ್ಯಾರೋಪಗಳೂ ಜೋರಾಗಿರುವ ನಡುವೆಯೇ ಸಂಬಂಧ ಮೈಸೂರು ರಾಜವಂಶಸ್ಥ ಯದುವೀರ್ ಮೈಷುಗರ್ ಕಾರ್ಖಾನೆ ಬಗ್ಗೆ ಪ್ರತಿಕ್ರಿಯಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆಯ ಬಗ್ಗೆ ಮಂಗಳವಾರ (ಜೂ.೧೬ ರಂದು) ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಮೈಸೂರು ರಾಜಮನೆತನದ ಯದುವೀರ್ ಒಡೆಯರ್ ಅವರು, ಓ ಅಂಡ್ ಎಂ ಕಾರ್ಯಾಚರಣೆ ಮತ್ತು ನಿರ್ವಹಣೆಯ ವ್ಯವಸ್ಥೆಯಡಿಯಲ್ಲಿ ಮೈಷುಗರ್ ಕಾರ್ಖಾನೆಯನ್ನುಆರಂಭಿಸುವುದು ಉತ್ತಮ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಯದುವೀರ್ ಫೇಸ್ಬುಕ್ ಪೇಜ್ನಲ್ಲಿ ಏನಿದೆ?
ಮಂಡ್ಯ ಜಿಲ್ಲೆಯು ಕಬ್ಬು ಬೆಳೆ ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಸಮಾನವಾಗಿದೆ. ಮೈಷುಗರ್ ಕಾರ್ಖಾನೆಯ ಪರಂಪರೆ ದೃಷ್ಠಿಯಿಂದ ಖಾಸಗೀಕರಣಕ್ಕೆ ನಿರಂತರ ಪ್ರತಿರೋಧ ವ್ಯಕ್ತವಾಗುತ್ತಿರುವುದು ಅರ್ಥವಾಗುವಂತಹದ್ದಾಗಿದೆ. ಆದರೆ ಪ್ರತಿರೋಧವು ಕಳವಳಕ್ಕೆ ಕಾರಣವಾಗಿದೆ. ಏಕೆಂದರೆ ಮಂಡ್ಯ ಜಿಲ್ಲೆಯ ರೈತರು ಬೆಳೆದಿರುವ ಕಬ್ಬನ್ನು ಮಾರಾಟ ಮಾಡಲು ಕಾರ್ಖಾನೆಯ ಸಮಯೋಚಿತ ಆರಂಭದ ಅಗತ್ಯವಿದೆ. ಕಾರ್ಖಾನೆಯನ್ನು ನಡೆಸುವಲ್ಲಿ ಸರ್ಕಾರದ ವೈಫಲ್ಯ ಮತ್ತು ಸಂಪೂರ್ಣ ಖಾಸಗೀಕರಣದ ವಿರುದ್ದ ವಿರುದ್ದ ಸಾರ್ವಜನಿಕರ ಭಾವನೆಯ ನಡುವೆ ನಮಗೆ ಇರುವ ಒಂದು ಆಯ್ಕೆಯೆಂದರೆ, ಕಾರ್ಯಾಚರಣೆ ಮತ್ತು ನಿರ್ವಹಣೆ (oprations and maintenance) ವ್ಯವಸ್ಥೆಯಡಿಯಲ್ಲಿ ಸಕ್ಕರೆ ಕಾರ್ಖಾನೆಯನ್ನು ನಡೆಸುವುದು. ಈ ಮಧ್ಯಮ ವ್ಯವಸ್ಥೆಯು ಖಾಸಗೀಕರಣದ ವಿರುದ್ದ ಸಾರ್ವಜನಿಕರಿಗಿರುವ ಭಾವನೆಯನ್ನು ತೃಪ್ತಿಪಡಿಸುವುದಲ್ಲದೆ, ಕಾರ್ಖಾನೆಯು ಮತ್ತೊಮ್ಮೆ ಸಮೃದ್ದಿಯಾಗಿ ಕಾರ್ಯ ನಿರ್ವಹಿಸಬಹುದಾಗಿದೆ. ಇದರಿಂದ ಮಂಡ್ಯಜಿಲ್ಲೆಯ ಕಬ್ಬು ಬೆಳೆಗಾರರು ಯಾವುದೇ ಸಂಕಷ್ಠಗಳನ್ನು ಎದುರಿಸಬೇಕಾಗಿರುವುದಿಲ್ಲ ಎಂದು ತಮ್ಮ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಯದುವೀರ್ ಒಡೆಯರ್ ಹೇಳಿಕೆ ಸ್ವಾಗತಾರ್ಹ; ನಿರಾಣಿ
ಮಂಡ್ಯದ ಮೈಶುಗರ್ ಕಾರ್ಖಾನೆಯನ್ನು ಸಮಯೋಚಿತವಾಗಿ ಆರಂಭಿಸುವಂತೆ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ನೀಡಿರುವ ಹೇಳಿಕೆಯನ್ನು ತಾವು ಸ್ವಾಗತಿಸುವುದಾಗಿ ನಿರಾಣಿ ಸಕ್ಕರೆ ಕಾರ್ಖಾನೆಗಳ ಸಮೂಹದ ಅಧ್ಯಕ್ಷ ಮುರುಗೇಶ್ ನಿರಾಣಿ ಹೇಳಿದ್ದಾರೆ. ಈ ಕುರಿತು ಮಾದ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯಸರ್ಕಾರವೇ ಮೈಶುಗರ್ ಕಾರ್ಖಾನೆಯನ್ನು ಆರಂಭಿಸಲಿ ಅಥವಾ ಖಾಸಗಿಯವರಿಗೇ ನೀಡಲಿ ಕಬ್ಬಿನ ಬೆಳೆ ಕಟಾವಿಗೆ ಬರುವುದಕ್ಕೆ ಮುಂಚೆ ಸರ್ಕಾರ ನಿರ್ಧಾರ ಕೈಗೊಳ್ಳುವುದು ಎ ಸೂಕ್ತ ಎಂದು ಅವರು ತಿಳಿಸಿದ್ದಾರೆ. 
 
ಮಂಡ್ಯ ಜಿಲ್ಲೆಯ ರೈತರ ಪ್ರಮುಖ ವಾಣಿಜ್ಯ ಬೆಳೆ ಕಬ್ಬು. ಹೀಗಾಗಿ ಕಬ್ಬು ಕಟಾವಿಗೆ ಬರುವ ಮುಂಚೆಯೇ ಮೈಶುಗರ್ ಕಾರ್ಖಾನೆಯನ್ನು ಆರಂಭಿಸಬೇಕು, ಇಲ್ಲವಾದಲ್ಲಿ ಕಬ್ಬು ಬೆಳೆಗಾರರು ತಮ್ಮ ಕಬ್ಬನ್ನು ಬೇರೆ ಜಿಲ್ಲೆಗಳಿಗೆ ಅಥವಾ ಹೊರರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕೊಂಡೊಯ್ಯಬೇಕಾದ ಪರಿಸ್ಥಿತಿ ಎದುರಾಗಲಿದೆ. ಅನ್ನದಾತನ ಬವಣೆಯನ್ನು ನೀಗಿಸಲು ಹಾಗೂ ಸೂಕ್ತ ಸಮಯದಲ್ಲಿ ಕಬ್ಬನ್ನು ಹರಿದು ಅವರಿಗೆ ಹಣ ಪಾವತಿಸಲು ಅನುಕೂಲವಾಗುವಂತೆ ಮೈಶುಗರ್ ಕಾರ್ಖಾನೆಯನ್ನು ಸಕಾಲದಲ್ಲಿ ಆರಂಭಿಸಬೇಕು ಎಂದು ನಿರಾಣಿ ಹೇಳಿದ್ದಾರೆ.

ಇಡೀ ರಾಜ್ಯಕ್ಕೆ ಸರ್ಕಾರದ ಏಕೈಕ ಕಾರ್ಖಾನೆಯಾಗಿರುವ ಮೈಷುಗರ್ ಕಾರ್ಖಾನೆಯ ಪುನರಾರಂಭ ವಿಷಯ ಜಿಲ್ಲೆಯೊಳಗೆ ಮಾತ್ರವಲ್ಲದೆ ಇಡೀ ರಾಜ್ಯದಲ್ಲೇ ಚರ್ಚೆಯಾಗುತ್ತಿದ್ದು ಸರ್ಕಾರ ನಡೆಸುವುದೋ ಅಥವಾ ಖಾಸಗಿಯವರ ಪಾಲಾಗುವುದೊ ಇಲ್ಲಾ ಓ ಅಂಡ್ ಎಂ ಅಡಿಯಲ್ಲಿ ಅರಂಭವಾಗುವುದೊ ಎಂಬುದು ನಿಗೂಢವಾಗಿದೆ. ಒಟ್ಟಾರೆ ಕಬ್ಬು ಬೆಳೆದು ಕಾರ್ಖಾನೆಯ ಆರಂಭವಾಗುವಿಕೆಗಾಗಿ ಜಾತಕಪಕ್ಷಿಯಂತೆ ಕಾದು ಕುಳಿತಿರುವ ಮಂಡ್ಯ ರೈತರ ಸಮಸ್ಯೆಗೆ ಮುಕ್ತಿ ಹೇಗೆ ದೊರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

-ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com