ಗಡಿ ವಿಚಾರಗಳನ್ನು ಮುಚ್ಚಿಡುವುದು ಸರಿಯಲ್ಲ: ಮಲ್ಲಿಕಾರ್ಜುನ ಖರ್ಗೆ

ನೆಲ, ಜಲ ಭಾಷೆ,ರಾಷ್ಟ್ರೀಯತೆ ಬಂದಾಗ ಒಟ್ಟಾಗಿ ಎದುರಿಸಬೇಕು. ಇರುವ ವಿಚಾರವನ್ನು ಪ್ರಧಾನಿಯವರು ದೇಶದ ಮುಂದಿಡಬೇಕು. ಗಡಿ ವಿಚಾರಗಳನ್ನು ಮುಚ್ಚಿಡುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರದ ನಡೆಗೆ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
Updated on

ಬೆಂಗಳೂರು: ಗಡಿ ವಿಚಾರದಲ್ಲಿ ಇಡೀ ದೇಶದ ಜನ ಒಂದಾಗಿದ್ದಾರೆ. ಇವತ್ತು ಭಿನ್ನಾಬಿಪ್ರಾಯ ಹೇಳಿಕೆಗಳು ಸರಿಯಲ್ಲ. ನೆಲ, ಜಲ ಭಾಷೆ,ರಾಷ್ಟ್ರೀಯತೆ ಬಂದಾಗ ಒಟ್ಟಾಗಿ ಎದುರಿಸಬೇಕು. ಇರುವ ವಿಚಾರವನ್ನು ಪ್ರಧಾನಿಯವರು ದೇಶದ ಮುಂದಿಡಬೇಕು. ಗಡಿ ವಿಚಾರಗಳನ್ನು ಮುಚ್ಚಿಡುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರದ ನಡೆಗೆ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚೀನಾ- ಭಾರತ ಗಡಿಯಲ್ಲಿ ಸೈನಿಕರ ಘರ್ಷಣೆ ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಖರ್ಗೆ, ನಾವು ಹೋಗಿಲ್ಲ, ಅವರೂ ಬಂದಿಲ್ಲವೆಂದು ಪ್ರಧಾನಿ ಹೇಳಿದ್ದಾರೆ. ಎಐಸಿಸಿ ನಾಯಕ ರಾಹುಲ್ ಗಾಂಧಿ ಕೆಲವೊಮ್ಮೆ ಪ್ರಶ್ನೆ ಕೇಳುತ್ತಾರೆ. ಆದರೆ ಈ ಬಗ್ಗೆ ತಿರುಚಿ ಮುರುಚಿ ವರದಿಯಾಗುತ್ತಿವೆ ಎಂದರು.

ಸರ್ವಪಕ್ಷ ಸಭೆ ನಡೆಸಲಾಗಿದ್ದು, ಗಡಿ ವಿವಾದ ಸಂಬಂಧ ಸಭೆಯಲ್ಲಿ ಕೆಲವು ನಾಯಕರು ಸಲಹೆ ನೀಡಿದ್ದಾರೆ. ಒಂದು ಕಡೆ ಕೊವಿಡ್, ಮತ್ತೊಂದೆಡೆ ಚೀನಾ ಕುತಂತ್ರದ ಪರಿಸ್ಥಿತಿ ಎದುರಾಗಿದೆ. ಹಿಂದೆ ನೆಹರು ಅವರ ಕಾಲದಲ್ಲಿಯೂ ಚೀನಾದವರು ದಾಳಿ ಮಾಡಿದ್ದರು. ಮೋದಿಜಿ ಚೀನಾದವರಿಗೆ ಅಷ್ಟೊಂದು ಬೆಲೆ ಕೊಡಬಾರದಿತ್ತು. ನೆರೆಹೊರೆಯವರು ಎಂದು ಮೋದಿ ಅಲ್ಲಿಗೆ ಹೋಗಿದ್ದಾರೆ. ಅವರು ಇಲ್ಲಿಗೆ ಬಂದಿದ್ದಾರೆ ಇಷ್ಟಾದರೂ ಚೀನಾ ಹಿಂದಿನಿಂದ ಇರಿಯುವ ಪ್ರವೃತ್ತಿ ಬಿಟ್ಟಿಲ್ಲ ಎಂದರು.

ಗುಪ್ತಚರ ಇಲಾಖೆ ವಿಫಲವಾಗಿದ್ದರೂ ಕೇಂದ್ರ ಸ್ಪಷ್ಟಪಡಿಸಬೇಕು. ಸೈನಿಕರಿಗೆ ಶಸ್ತ್ರಾಸ್ತ್ರ ಪೂರೈಕೆಯಾಗದಿದ್ದರೂ ಹೇಳಬೇಕು. ಜನರಿಗೆ ತಪ್ಪು ಭಾವನೆ ಹೋಗಬಾರದು‌. ಚೀನಾದ್ದು ಯಾವಾಗಲೂ ನರಿಬುದ್ಧಿಯೇ. ಪ್ರಧಾನಿಯವರು ಇದರ ಬಗ್ಗೆ ಯಾವುದನ್ನೂ‌ ಮುಚ್ಚಿಡಬಾರದು ಎಂದು ಮಲ್ಲಿಕಾರ್ಜುನ ಖರ್ಗೆ ಮಾರ್ಮಿಕವಾಗಿ ನುಡಿದರು.

ನಾವು ಅಲ್ಲಿಗೆ ಹೋಗಿಲ್ಲ, ಅವರು ಬಂದಿಲ್ಲ ಎಂದು ನುಣುಚಿಕೊಳ್ಳುವ ಪ್ರಯತ್ನ ಸಲ್ಲದು. ನಮ್ಮ ಸೈನಿಕರು ಹುತಾತ್ಮರಾಗಿದ್ದು ಹೇಗೆ?. ಅವರಿಗೆ ಶಸ್ತ್ರಾಗಳನ್ನು ಪೂರೈಸಿಲ್ಲ‌ ಎಂದರೇನು ಅರ್ಥ?ಈ ಎಲ್ಲಾ ಪ್ರಶ್ನೆಗಳು ಸಹಜವಾಗಿಯೇ ಉದ್ಭವವಾಗುತ್ತವೆ‌. ರಕ್ಷಣಾ ದೃಷ್ಟಿಯಿಂದ ಕೆಲವೊಂದನ್ನು ಬಹಿರಂಗ ಪಡಿಸಲು ಕಷ್ಟವಾಗಬಹುದು. ಆದರೆ ಮಾಧ್ಯಮಗಳಲ್ಲಿ ಸುದ್ದಿ ಬಂದ ನಂತರ ನಿಜಸ್ಥಿತಿಯನ್ನು ತಿಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com