ಎಸ್ಎಸ್ಎಲ್‌ಸಿ ಪರೀಕ್ಷೆ: ಹಠಕ್ಕೆ ಬಿದ್ದ ಸರ್ಕಾರ, ಶಿಕ್ಷಣ ತಜ್ಞರ ವಿರೋಧ, ಹೆಚ್ಚಿದ ಪೋಷಕರ ಆತಂಕ

ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಸಿಯೇ ಸಿದ್ಧ ಎಂಬ ಹಠಕ್ಕೆ ಬಿದ್ದಿರುವುದು ಶಿಕ್ಷಣ ತಜ್ಞರು, ಪೋಷಕರ ಆತಂಕ, ಆಕ್ರೋಶಕ್ಕೆ ಕಾರಣವಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಸಿಯೇ ಸಿದ್ಧ ಎಂಬ ಹಠಕ್ಕೆ ಬಿದ್ದಿರುವುದು ಶಿಕ್ಷಣ ತಜ್ಞರು, ಪೋಷಕರ ಆತಂಕ, ಆಕ್ರೋಶಕ್ಕೆ ಕಾರಣವಾಗಿದೆ. 

ರಾಜಧಾನಿ ಬೆಂಗಳೂರು ನಗರದಲ್ಲಿ ಸೋಂಕು ಸಮುದಾಯಕ್ಕೆ ಹರಡಿದೆ ಎಂದು ಹಿರಿಯ ವೈದ್ಯರು ಬಹಿರಂಗ ಹೇಳಿಕೆ ನೀಡಿದ್ದಾರೆ. ಇತರ ಜಿಲ್ಲೆಗಳಲ್ಲಿ ಕೂಡ ಕೋವಿಡ್ -19 ಪ್ರಕರಣಗಳು ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೂ.25ರಿಂದ ನಿಗದಿಯಾಗಿರುವ ಎಸ್ಎಸ್ಎಲ್‌ಸಿ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಪೋಷಕರು ಒತ್ತಾಯಿಸುತ್ತಿದ್ದಾರೆ.

ಕೊರೋನಾ ಸಾಂಕ್ರಾಮಿಕ ಮತ್ತು ಪರೀಕ್ಷೆ ನಡೆಸಿಯೇ ಸಿದ್ಧ ಎಂಬ ಸರ್ಕಾರದ ಹಠದಿಂದ 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಆರೋಗ್ಯ ಆತಂಕಕ್ಕೆ ಸಿಲುಕಿದೆ. ಪ್ರತಿ ಕೋಣೆಯಲ್ಲೂ 24 ಮಕ್ಕಳು ಸುಮಾರು ಏಳು ದಿನಗಳ ಕಾಲ ಪರೀಕ್ಷೆ ಬರೆಯುವುದರಿಂದ, ಯಾರೊಬ್ಬರಿಗೆ ಸೋಂಕು ತಗುಲಿದರೂ ಇತರ ಎಲ್ಲಾ ಮಕ್ಕಳು, ಅವರ ಪೋಷಕರು, ಶಿಕ್ಷಕರು ಕೂಡ ಸೋಂಕಿಗೆ ಗುರಿಯಾಗುವ ಸಾಧ್ಯತೆಗಳಿವೆ. ಆದ್ದರಿಂದ ಸರ್ಕಾರ ಪರೀಕ್ಷೆ ಹಮ್ಮಿಕೊಳ್ಳುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ.

ಶಿಕ್ಷಣ ತಜ್ಞರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಸರ್ಕಾರ ಮಾತ್ರ ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಸಿಯೇ ಸಿದ್ಧ ಎಂಬ ಹಠಕ್ಕೆ ಬಿದ್ದಿದೆ. ಮಕ್ಕಳಿಗೆ ಸೋಂಕು ಹರಡದಂತೆ ತಡೆಯಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಕ್ಕಳು, ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡುತ್ತಿದೆ. ಪರೀಕ್ಷೆ ನಡೆಸದಂತೆ ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿರುವುದು ಸರ್ಕಾರಕ್ಕೆ ಇನ್ನಷ್ಟು ಬಲ ದೊರೆತಿದೆ. ಆದರೆ, ಪೋಷಕರ ಆತಂಕ ಮಾತ್ರ ಗಗನಕ್ಕೇರಿದೆ.

ಶಿಕ್ಷಕರು ಮತ್ತು ಪೋಷಕರು ಪರೀಕ್ಷಾ ಕೊಠಡಿಯಿಂದ 200 ಮೀಟರ್‌ ದೂರವಿರಬೇಕು. ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂಬ ನಿಯಮಗಳನ್ನು ಪಾಲಿಸುವುದು ಮಕ್ಕಳಿಗೆ ಕಷ್ಟವಾಗಬಹುದು. 
ಮೂರು ಗಂಟೆಗಳ ಕಾಲ ಮಕ್ಕಳಿಗೆ ಮಾಸ್ಕ್ ಧರಿಸಿ ಪರೀಕ್ಷೆ ಬರೆಯುವುದು ಸುಲಭವಲ್ಲ. ಅಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗೆ ಪರೀಕ್ಷಾ ಕೊಠಡಿ ತಲುಪುವುದೇ ಕಷ್ಟವಾಗಬಹುದು. ಈ ಎಲ್ಲಾ ಸಾಧ್ಯತೆಗಳನ್ನು ಗಮನದಲ್ಲಿರಿಸಿಕೊಂಡು ತಮಿಳುನಾಡು, ತೆಲಂಗಾಣ ಮಾದರಿಯಲ್ಲಿ ಪರೀಕ್ಷೆ ರದ್ದುಗೊಳಿಸಿ, ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವುದೇ ಸೂಕ್ತ ಎಂದು ಅಭಿಪ್ರಾಯಗಳು ಶಿಕ್ಷಣ ಕ್ಷೇತ್ರದಲ್ಲಿ ಕೇಳಿಬರುತ್ತಿದೆ. 

ಕೊರೋನಾ ಸೋಂಕು ವ್ಯಾಪಿಸುತ್ತಿರುವುದರಿಂದ ಈ ಹಿಂದೆ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಬೆಂಬಲಿಸುತ್ತಿದ್ದ ಶಿಕ್ಷಕರು ಕೂಡ ಈಗ ಪರೀಕ್ಷೆಯನ್ನು ವಿರೋಧಿಸುತ್ತಿದ್ದಾರೆ. ಶಿಕ್ಷಣ ಸಂಸ್ಥೆಯೊಂದರ ಪ್ರಾಂಶುಪಾಲರಾದ ಗೀತಾ ಮೋಹನ್, "ನಾನು ಈ ಮೊದಲು ಪ್ರತಿ ಮಕ್ಕಳು ಪರೀಕ್ಷೆ ಬರೆಯಬೇಕು ಎಂದು ಪ್ರತಿಪಾದಿಸುತ್ತಿದ್ದೆ. ಆದರೆ, ಈಗಿನ ಪರಿಸ್ಥಿತಿ ನೋಡಿದರೆ ಪರೀಕ್ಷೆ ನಡೆಸುವುದು ಅಪಾಯಕಾರಿ ಎಂಬ ಆತಂಕ ಎದುರಾಗಿದೆ. ಪರೀಕ್ಷಾ ಸಮಯಕ್ಕೂ ಎರಡು ಗಂಟೆ ಮುಂಚೆ ಹಾಜರಾಗಿ ತಪಾಸಣೆಗೊಳಪಡುವಂತೆ ಶಾಲೆಗಳಿಗೆ ಸೂಚಿಸಲಾಗಿದೆ. ಇದರಿಂದ ಮಕ್ಕಳ ಮೇಲಿನ ಒತ್ತಡ ಹೆಚ್ಚುತ್ತದೆ. ಮಕ್ಕಳು ನಿರಾತಂಕವಾಗಿ ಪರೀಕ್ಷೆ ಬರೆಯಲಾಗದು. ಆದರೆ, ಪರೀಕ್ಷೆ ರದ್ದುಗೊಳಿಸುವ ಬದಲು ಅದನ್ನು ಮುಂದೂಡಬಹುದು" ಎಂದಿದ್ದಾರೆ.

ಇಂತಹ ಒತ್ತಡಗಳನ್ನು ಸಹಿಸಿಕೊಂಡು ದೃಢವಾಗಿ ಪರೀಕ್ಷೆ ಬರೆಯುವಷ್ಟು ಮಕ್ಕಳ ಮನಸ್ಸು ಸದೃಢವಾಗಿರುವುದಿಲ್ಲ. ಜ್ವರದ ಲಕ್ಷಣಗಳುಳ್ಳ ಮಕ್ಕಳಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡುವುದರಿಂದ ಅವರ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದನ್ನು ಕೇವಲ ಆರೋಗ್ಯದ ದೃಷ್ಟಿಯಿಂದ ನೋಡದೆ ಮಕ್ಕಳ ಮಾನಸಿಕ ಆರೋಗ್ಯದ ಕಡೆಗೂ ಗಮನಹರಿಸಿ, ಪರೀಕ್ಷೆ ನಡೆಸದಿರುವುದು ಸೂಕ್ತ ಎಂದು ಚೈಲ್ಡ್ ರೈಟ್ ಟ್ರಸ್ಟ್ ನ ಜಿ.ನಾಗಸಿಂಹ ಅಭಿಪ್ರಾಯಪಟ್ಟಿದ್ದಾರೆ. 

ಜಗತ್ತು ಕೇಳರಿಯದ ಸಾಂಕ್ರಾಮಿಕದ ಆತಂಕ ಎದುರಿಸುತ್ತಿರುವಾಗ ಸರ್ಕಾರ ಪರೀಕ್ಷೆ ನಡೆಸಿಯೇ ಸಿದ್ಧ ಎಂಬ ಹಠಕ್ಕೆ ಬಿದ್ದಿರುವುದೇಕೋ ತಿಳಿದಿಲ್ಲ. ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ವರ್ಷದ ಮೂರು ತ್ರೈಮಾಸಿಕ ಪರೀಕ್ಷೆಯ ಅಂಕಗಳು ಇಲ್ಲವೇ ಕಳೆದ ಮೂರು ವರ್ಷಗಳ ಸಾಧನೆಯನ್ನು ಪರಿಗಣಿಸಿ ಫಲಿತಾಂಶ ನೀಡಬಹುದು. ಈಗಾಗಲೇ ಶೇ.82ರಷ್ಟು ವಿದ್ಯಾರ್ಥಿಗಳು ಎಸ್ಎಸ್ಎಲ್ಸಿಯಲ್ಲಿ ತೇರ್ಗಡೆ ಹೊಂದುತ್ತಿದ್ದು, ಉಳಿದ ಶೇ. 20ರಷ್ಟು ಮಕ್ಕಳನ್ನು ತೇರ್ಗಡೆ ಮಾಡುವುದರಿಂದ ಯಾವುದೇ ನಷ್ಟವಿಲ್ಲ ಎಂದು ಶಿಕ್ಷಣ ತಜ್ಞೆ ಗಾಯತ್ರಿದೇವಿ ಅಭಿಪ್ರಾಯಪಟ್ಟಿದ್ದಾರೆ. 

ಆದರೆ, ಶಿಕ್ಷಣ ಇಲಾಖೆ ಮಾತ್ರ ಪೋಷಕರು ಆತಂಕಪಡಬೇಕಿಲ್ಲ ಎಂದಿದೆ. ಸರ್ಕಾರ ಎಲ್ಲಾ ಆಯಾಮಗಳಲ್ಲಿ ಚರ್ಚಿಸಿ, ಚಿಂತಿಸಿಯೇ ನಿರ್ಧಾರ ಕೈಗೊಂಡಿದೆ. ಪೋಷಕರು ಆತಂಕಪಡಬೇಕಿಲ್ಲ. ಮಕ್ಕಳ ಸುರಕ್ಷತೆಗೆ ಎಲ್ಲಾಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಯೋರ್ವರು ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com