ಅಸಂಘಟಿತ ನೇಕಾರರ ಪಾಲಿಗೆ ಪ್ಯಾಕೇಜ್ ಕನ್ನಡಿಯಲ್ಲಿನ ಗಂಟು: ನೇಕಾರ ಪ್ರಮಾಣ ಪತ್ರದ ಸಮಸ್ಯೆಗೆ ಸಿಕ್ಕುತ್ತಿಲ್ಲ ಪರಿಹಾರ!

ಸಂಘಟಿತ ವಲಯದ ನೇಕಾರರನ್ನು ಬಿಡಿ ಅವರಿಗೆಲ್ಲ ಕೆಎಚ್‌ಡಿಸಿ, ಖಾದಿ ಗ್ರಾಮೋದ್ಯೋಗ ಇಲ್ಲವೆ ನೇಕಾರ ಸಂಘ,ಸಂಸ್ಥೆಗಳು ನೇಕಾರ ಎನ್ನುವ ಪ್ರಮಾಣ ಪತ್ರ ನೀಡುತ್ತವೆ. ಹಾಗಾಗಿ ಅವರಿಗೆ ರಾಜ್ಯ ಸರ್ಕಾರ ನೇಕಾರರಿಗಾಗಿ ಘೋಷಿಸಿರುವ ವಿಶೇಷ ಪ್ಯಾಕೇಜ್‌ನ ಪ್ರಯೋಜನ ಲಭ್ಯವಾಗಲಿದೆ.
ನೇಕಾರರು
ನೇಕಾರರು

ಬಾಗಲಕೋಟೆ: ಸಂಘಟಿತ ವಲಯದ ನೇಕಾರರನ್ನು ಬಿಡಿ ಅವರಿಗೆಲ್ಲ ಕೆಎಚ್‌ಡಿಸಿ, ಖಾದಿ ಗ್ರಾಮೋದ್ಯೋಗ ಇಲ್ಲವೆ ನೇಕಾರ ಸಂಘ,ಸಂಸ್ಥೆಗಳು ನೇಕಾರ ಎನ್ನುವ ಪ್ರಮಾಣ ಪತ್ರ ನೀಡುತ್ತವೆ. ಹಾಗಾಗಿ ಅವರಿಗೆ ರಾಜ್ಯ ಸರ್ಕಾರ ನೇಕಾರರಿಗಾಗಿ ಘೋಷಿಸಿರುವ ವಿಶೇಷ ಪ್ಯಾಕೇಜ್‌ನ ಪ್ರಯೋಜನ ಲಭ್ಯವಾಗಲಿದೆ.

ಈಗ ಬಹುದೊಡ್ಡ ಪ್ರಶ್ನೆ ಎದುರಾಗಿರುವುದು ಅಸಂಘಟಿತ ವಲಯದಲ್ಲಿರುವ ಬಹುದೊಡ್ಡ ಪ್ರಮಾಣದಲ್ಲಿನ ನೇಕಾರರಿಗೆ. ರಾಜ್ಯ ಸರ್ಕಾರ ನೇಕಾರರಿಗೆ ವಿಶೇಷ ಪಾಕ್ಯೇಜ್‌ನ್ನೆನೋ ಘೋಷಿಸಿದೆ. ಆದರೆ ಅಸಂಘಟಿತ ವಲಯದಲ್ಲಿನ ನೇಕಾರರಿಗೆ “ನೇಕಾರ” ಎನ್ನುವ ಪ್ರಮಾಣ ಪತ್ರ ಕೊಡುವವರು ಯಾರು ಎನ್ನುವುದೇ ಯಕ್ಷಪ್ರಶ್ನೆಯಾಗಿ ಕಾಡಲಾರಂಭಿಸಿದೆ.

ನೇಕಾರರನ್ನು ದುಡಿಸಿಕೊಳ್ಳುವ ಬಹುತೇಕ ಮಾಲೀಕರು ನಾನಾ ಕಾರಣಗಳಿಗಾಗಿ “ನೇಕಾರ” ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಎಲ್ಲಿ ನಮ್ಮ ವ್ಯವಹಾರಗಳಿಗೆ ತೊಂದರೆ ಆಗುತ್ತದೋ ಎನ್ನುವ ಏಕೈಕ ಕಾರಣಕ್ಕಾಗಿ ತಮ್ಮಲ್ಲಿ ದುಡಿಯುತ್ತಿರುವ ನೇಕಾರರಿಗೆ ಪ್ರಮಾಣ ಪತ್ರ ಕೊಡಲು ಮುಂದೆ ಬರುತ್ತಿಲ್ಲ. ನೇಕಾರ ಎನ್ನುವ ಪ್ರಮಾಣ ಪತ್ರವಿಲ್ಲದೆ ಪರಿಹಾರ ಧನ ಸಿಕ್ಕುವುದಿಲ್ಲ. 

ನೇಕಾರರನ್ನು ದುಡಿಸಿಕೊಳ್ಳುವ ಸಾಹುಕಾರರು ಮಾನವೀಯ ದೃಷ್ಟಿಯಿಂದ ಪ್ರಮಾಣ ಪತ್ರ ನೀಡಬೇಕು ಎನ್ನುವ ವಾದಕ್ಕೆ ಯಾರೂ ಕ್ಯಾರೇ ಎನ್ನುತ್ತಿಲ್ಲ. ಬಹುಮುಖ್ಯವಾಗಿ ಗಮನಿಸಬೇಕಾಗಿರುವ ಅಂಶವೆAದರೆ, ನೇಕಾರರನ್ನು ಕೂಲಿಯಾಗಿ ದುಡಿಸಿಕೊಳ್ಳುತ್ತಿರುವ ಬಗ್ಗೆ ಸಾಹುಕಾರರು ಯಾವ ದಾಖಲೆಗಳನ್ನು ಇಟ್ಟಿಲ್ಲ. ವಾರವಿಡಿ ದುಡಿವ ಕೂಲಿ ನೇಕಾರರಿಗೆ ವಾರಕ್ಕೊಮ್ಮೆ ದುಡಿತಕ್ಕೆ ಕೂಲಿ ಕೊಟ್ಟು ಕೈತೊಳೆದುಕೊಳ್ಳುತ್ತಾರೆ. ತಮ್ಮ ಬಳಿ ಕೂಲಿ ನೇಕಾರರ ಬಗ್ಗೆ ದಾಖಲೆಗಳಿಲ್ಲದೆ ಎಲ್ಲಿಂದ ಅವರಿಗೆ ನೇಕಾರ ಎನ್ನುವ ಪ್ರಮಾಣ ಪತ್ರ ಕೊಡುವುದು. ಕೊಟ್ಟರೆ ತಮ್ಮ ವ್ಯವಹಾರಕ್ಕೆ ತೊಂದರೆ ಆಗುತ್ತದೆ. ಭವಿಷ್ಯದ ದಿನಗಳಲ್ಲಿ ಕೂಲಿ ನೇಕಾರರ ಬಗ್ಗೆ ಅನಿವಾರ್ಯವಾಗಿ ದಾಖಲೆಗಳನ್ನು ಇಡಬೇಕಾಗುತ್ತದೆ ಎನ್ನುವ ಭಯ ಸಾಹುಕಾರ ಜನರನ್ನು ಕಾಡುತ್ತಿದೆ.

ಜೀವನದುದ್ದಕ್ಕೂ ಒಂದೇ ಕಡೆ ದುಡಿದರೂ ಮಾಲೀಕರು ಒಂದು ಪ್ರಮಾಣ ಪತ್ರ ಕೊಡಲು ಹಿಂದೇಟು ಹಾಕುತ್ತಿರುವುದು ಕೂಲಿಕಾರರನ್ನು ಕಂಗೆಡಿಸುವಂತೆ ಮಾಡಿದೆ. ಇಷ್ಟು ವರ್ಷದಿಂದ ದುಡಿಯುತ್ತಿದ್ದೇವೆ. ನಮಗೊಂದು ಪ್ರಮಾಣಪತ್ರ ಕೊಡಿ ಎಂದು ಕೇಳುವ ಧೈರ್ಯ ಅವರಿಗೂ ಇಲ್ಲವಾಗಿದೆ. ಮುಂದಿನ ದಿನಗಳಲ್ಲಿ ಕುಟುಂಬದಲ್ಲಿ ಏನಾದರೂ ಸಮಸ್ಯೆಗಳು ಎದುರಾದಾಗ ಸಾಹುಕಾರ ಸಹಾಯಕ್ಕೆ ಬಾರದೇ ಕೈ ಕೊಟ್ಟರೆ ಏನು ಮಾಡುವುದು. ಯಾರಿಗೆ ಬೇಕು ಸರ್ಕಾರದ ಪರಿಹಾರ ಎನ್ನುವ ಸ್ಥಿತಿಗೆ ಕೂಲಿಕಾರರನ್ನು ತಂದಿಟ್ಟಿದೆ.

ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಚಿಕ್ಕ ಬಳ್ಳಾಪುರ, ದೊಡ್ಡಬಳ್ಳಾಪುರ, ಬೆಂಗಳೂರು ನಗರ ಜಿಲ್ಲೆಗಳು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿನ ನೇಕಾರರ ಸ್ಥಿತಿ ಭಿನ್ನವಾಗಿಲ್ಲ. ಹಾಗಿದ್ದರೆ ಸರ್ಕಾರ ಘೋಷಿಸಿರುವ ನೇಕಾರರ ಪರಿಹಾರ ಪ್ಯಾಕೇಜ್‌ನ್ನು ಅಸಂಘಟಿತ ವಲಯದಲ್ಲಿನ ಕೂಲಿ ನೇಕಾರರು ಪಡೆದುಕೊಳ್ಳುವುದು ಬೇಡವೇ ಎನ್ನುವ ಪ್ರಶ್ನೆಗೆ ಸರ್ಕಾರ ಉತ್ತರದ ಮಾರ್ಗವನ್ನು ಸೂಚಿಸಬೇಕಿದೆ.

ಸಂಘಟಿತ ವಲಯದಲ್ಲಿನ ಕಾರ್ಮಿಕರಿಗೆ ಪರಿಹಾರ ಸಿಕ್ಕುವಂತೆ ಅಸಂಘಟಿತ ವಲಯದಲ್ಲಿನ ಕೂಲಿ ನೇಕಾರರಿಗೆ ಸರ್ಕಾರ ಜವಳಿ ಇಲಾಖೆ ಮೂಲಕ ಪ್ರಮಾಣ ಪತ್ರ ವಿತರಿಸುವ ಕೆಲಸಕ್ಕೆ ಮುಂದಾಗಬೇಕು. ಇಲ್ಲದೆ ಹೋದಲ್ಲಿ ಅಸಂಘಟಿತ ವಲಯದಲ್ಲಿನ ಕೂಲಿ ನೇಕಾರರ ಪಾಲಿಗೆ ಪರಿಹಾರಧನ ಗಗನ ಕುಸುಮವಾಗಲಿದೆ. ಕಳೆದೊಂದು ವರ್ಷದಿಂದ ಪ್ರವಾಹ, ಕೊರೋನಾ ವೈರಸ್‌ನಿಂದಾಗಿ ಉದ್ಯೋಗವೆ ಇಲ್ಲದೆ ಕೂಲಿ ನೇಕಾರರು ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಳ್ಳಬೇಕಾಗುತ್ತದೆ.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com