ಕೊರೋನಾ ವೈರಸ್ ಹರಡದಂತೆ ತಡೆಯಲು ಸಮಿತಿ ರಚನೆ: ಸಿಎಂ ಯಡಿಯೂರಪ್ಪ

ರಾಜ್ಯದಲ್ಲಿ ನಾಲ್ವರಿಗೆ ಕೋವಿಡ್‌ 19 ಸೋಂಕು ತಗುಲಿದ್ದು, ಸೋಂಕು ಹರಡದಂತೆ ತಡೆಯಲು ಸಮಿತಿ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ನಾಲ್ವರಿಗೆ ಕೋವಿಡ್‌ 19 ಸೋಂಕು ತಗುಲಿದ್ದು, ಸೋಂಕು ಹರಡದಂತೆ ತಡೆಯಲು ಸಮಿತಿ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ತಿಳಿಸಿದ್ದಾರೆ.

ಇಂದು ಕೊರೋನಾ ಸೋಂಕು ಸಂಬಂಧ ಸಚಿವರು ಮತ್ತು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಹಲವು ದೇಶಗಳನ್ನು ಬಾಧಿಸಿರುವ ನೊವೆಲ್ ಕರೋನಾ ವೈರಸ್ ಅನ್ನು ವಿಶ್ವ ಆರೋಗ್ಯ ಸಂಸ್ಥೆಯು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಿದೆ. 
ಕಳೆದ ಎರಡು ದಿನಗಳಲ್ಲಿ ಕರ್ನಾಟಕದಲ್ಲಿ ನಾಲ್ಕು ಮಂದಿಗೆ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ರಾಜ್ಯದ ಪರಿಸ್ಥಿತಿ ಹಾಗೂ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ರಾಜ್ಯದಲ್ಲಿ ಈ ಸೋಂಕು ಹರಡುವ ಸಾಧ್ಯತೆಯನ್ನು ತಡೆಗಟ್ಟಲು ನಮ್ಮ ಸರ್ಕಾರ ಎಲ್ಲ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ ಎಂದರು.

ಈವರೆಗೆ ಕರೋನಾ ವೈರಸ್ ಸೋಂಕು ಇರುವ ದೇಶಗಳಿಂದ ಪ್ರಯಾಣಿಸಿರುವ ಹಾಗೂ ಸೋಂಕಿತರ ಸಂಪರ್ಕದಲ್ಲಿದ್ದ 1048 ಜನರನ್ನು ಅವಲೋಕನೆಗಾಗಿ ಗುರುತಿಸಲಾಗಿದೆ. ಈ ವರೆಗೆ ರೋಗ ಲಕ್ಷಣ ಇರುವ 446 ಮಾದರಿಗಳನ್ನು ಪರೀಕ್ಷೆಗಾಗಿ ಕಳಿಸಲಾಗಿದೆ. 389 ಮಾದರಿಗಳು ನೆಗೆಟಿವ್ ಎಂದು ವರದಿಯಾಗಿದ್ದು, 4 ಮಾದರಿಗಳು ಪಾಸಿಟಿವ್ ಎಂದು ತಿಳಿದುಬಂದಿದೆ. ಬಾಕಿ ಮಾದರಿಗಳ ವರದಿಯನ್ನು ನಿರೀಕ್ಷಿಸಲಾಗಿದೆ. ಅಮೆರಿಕದಿಂದ ಬಂದ ಟೆಕ್ಕಿ, ಅವರ ಪತ್ನಿ, ಮಗು ಸೋಂಕಿತರು. ಇವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಂಡಿದ್ದಾರೆ. ಮತ್ತೊಬ್ಬ ವ್ಯಕ್ತಿಗೆ ಸೋಂಕು ತಗುಲಿರುವುದು ಖಚಿತ ಪಟ್ಟಿದೆ ಎಂದು ತಿಳಿಸಿದರು.

ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ಬೆಂಗಳೂರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮಂಗಳೂರು ಹಾಗೂ ಕಾರವಾರ ಕಡಲ ಬಂದರುಗಳಲ್ಲಿ ಸುಮಾರು 95 ಸಾವಿರಕ್ಕೂ ಹೆಚ್ಚು ಪ್ರಯಾಣಿಕರ ತಪಾಸಣೆ ಮಾಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ಕಟ್ಟುನಿಟ್ಟಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಮುನ್ನೆಚ್ಚರಿಕೆಯ ಕ್ರಮವಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಶಿಶುವಿಹಾರ, ಎಲ್‍ಕೆಜಿ, ಯುಕೆಜಿ ಶಾಲೆಗಳು, ಅಂಗನವಾಡಿಗಳಿಗೂ ರಜೆ ಘೋಷಿಸಲಾಗಿದೆ. ಪ್ರತಿ ದಿನ ವೈದ್ಯಕೀಯ ಶಿಕ್ಷಣ ಸಚಿವರು, ಆರೋಗ್ಯ ಸಚಿವರು ಅಧಿಕಾರಿಗಳ ಸಭೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡುಗಳನ್ನು ಸ್ಥಾಪಿಸಲಾಗಿದೆ. ಕರ್ನಾಟಕದಲ್ಲಿ ನ್ಯಾಷನಲ್ ಇನ್ಸ್‌ ಟಿಟ್ಯೂಟ್ ಆಫ್ ವೈರಾಲಜಿ ಬೆಂಗಳೂರು ಘಟಕ ಹಾಗೂ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ರಕ್ತ ಪರೀಕ್ಷೆಯ ಸೌಲಭ್ಯ ಕಲ್ಪಿಸಲಾಗಿದೆ. ಮೈಸೂರು, ಹಾಸನ ಹಾಗೂ ಶಿವಮೊಗ್ಗ ಮೆಡಿಕಲ್ ಕಾಲೇಜುಗಳ ಪ್ರಯೋಗಾಲಯಗಳಲ್ಲಿ ಸೋಂಕು ಪರೀಕ್ಷೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸೋಂಕಿತರ ಚಿಕಿತ್ಸೆಗೆ 700 ಹಾಸಿಗೆಗಳನ್ನು ಗುರುತಿಸಲಾಗಿದೆ. 600-700 ಜನರ ತಾತ್ಕಾಲಿಕ ಕ್ವಾರಂಟೈನ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಸರ್ಜಿಕಲ್ ಮಾಸ್ಕ್, ಔಷಧಿ ಇತ್ಯಾದಿ ಯಾವುದೇ ಕೊರತೆ ಇಲ್ಲ. ಎಲ್ಲರೂ ಮಾಸ್ಕ್ ಧರಿಸುವ ಅಗತ್ಯ ಇಲ್ಲ. ಸೋಂಕಿತರು ಮತ್ತು ಅವರ ನಿಕಟ ಸಂಪರ್ಕ ಹೊಂದಿರುವವರು ಮಾಸ್ಕ್ ಧರಿಸಿದರೆ ಸಾಕು. ಜನರು ಆತಂಕಕ್ಕೆ ಒಳಗಾಗುವುದು ಬೇಡ. ಹೆಚ್ಚು ಹಣ ವಸೂಲಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಡ್ರಗ್ ಕಂಟ್ರೋಲರ್ ಅವರಿಗೆ ಸೂಚಿಸಿದೆ. ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಈ ಸೋಂಕು ಹರಡದಂತೆ ತಡೆಗಟ್ಟುವುದು ನಮ್ಮ ಆದ್ಯತೆಯಾಗಿದೆ. ಇದಕ್ಕೆ ಜನರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಭಾರತ ಸರ್ಕಾರದ ಆರೋಗ್ಯ ಇಲಾಖೆಯ ಮಾರ್ಗ ಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿದೆ. ಚೀನಾ, ಇರಾನ್, ದಕ್ಷಿಣ ಕೊರಿಯಾ, ಜಪಾನ್, ಇಟಲಿ ಅಥವಾ ಇತರ ಬಾಧಿತ ದೇಶಗಳಿಂದ ಅಥವಾ ಅವುಗಳ ಮೂಲಕ ಪ್ರಯಾಣಿಸಿದವರು ಹತ್ತಿರದ ಆಸ್ಪತ್ರೆಗೆ ವರದಿ ಮಾಡಿಕೊಳ್ಳಬೇಕು ಅಥವಾ ಆರೋಗ್ಯ ಸಹಾಯವಾಣಿ 104 ಕ್ಕೆ ಕರೆ ಮಾಡಬೇಕು. ಈ ದೇಶಗಳಿಂದ ಅಥವಾ ಈ ದೇಶಗಳ ಮೂಲಕ ಹಿಂತಿರುಗಿದವರು ಬಂದ ದಿನದಿಂದ 14 ದಿನಗಳ ಕಾಲ ಪ್ರತ್ಯೇಕವಾಗಿರಬೇಕು. ಈ ಅವಧಿಯಲ್ಲಿ ಉಸಿರಾಟದ ತೊಂದರೆ, ಕೆಮ್ಮು, ನೆಗಡಿ, ಗಂಟಲ ಉರಿಯೂತ ಅಥವಾ ಯಾವುದೇ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆದುಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ ಎಂದರು.

ಈ ಸೋಂಕು ಹರಡದಂತೆ ರಾಜ್ಯ ಸರ್ಕಾರ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದೆ. ನಾಗರಿಕರು ಆತಂಕ ಪಡಬೇಕಾಗಿಲ್ಲ. ಆರೋಗ್ಯ ಇಲಾಖೆ ಸೂಚಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೆ ಪಾಲಿಸುವ ಮೂಲಕ ಈ ಸೋಂಕನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com