ಪಿಜಿ, ಹಾಸ್ಟೆಲ್ ನಲ್ಲಿದ್ದವರು ಊರಿಗೆ ತೆರಳಿ: ಬಿಬಿಎಂಪಿ ಆಯುಕ್ತರ ಆದೇಶ
ಬೆಂಗಳೂರು: ಕೊರೊನಾ ವೈರಸ್ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯದ್ಯಂತ ಈಗಾಗಲೇ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ವಸತಿ ನಿಲಯಗಳನ್ನು ಖಾಲಿ ಮಾಡುವಂತೆ ನಿರ್ದೇಶನ ನೀಡಲಾಗಿದೆ.
ಅಲ್ಲದೇ, ಒಂದು ವಾರ ಕಾಲ ಶಾಲಾ-ಕಾಲೇಜು, ಮಾಲ್, ಥಿಯೇಟರ್ ಬಂದ್ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಬೆಂಗಳೂರಿನ ಪಿಜಿ, ಹಾಸ್ಟೆಲ್ಗಳಲ್ಲಿರುವ ವಿದ್ಯಾರ್ಥಿಗಳು, ಉದ್ಯೋಗಿಗಳ ಮೇಲೂ ಪಾಲಿಕೆ ಹದ್ದಿನ ಕಣ್ಣಿಟ್ಟಿದೆ.
ಸದ್ಯ ಪೇಯಿಂಗ್ ಗೆಸ್ಟ್ ಅಥವಾ ಹಾಸ್ಟೆಲ್ಗಳಲ್ಲಿರುವ ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ತೆರಳುವಂತೆ ನಗರ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಮನವಿ ಮಾಡಿದ್ದಾರೆ.
ಬಿಬಿಎಂಪಿ ಆದೇಶದ ಮುನ್ನವೇ ಹಲವು ವಿದ್ಯಾರ್ಥಿಗಳು ಹಾಗೂ ಕೆಲಸ ಮಾಡಿಕೊಂಡು ಪಿಜಿಯಲ್ಲಿದ್ದವರು ಪಿಜಿ, ಹಾಸ್ಟೆಲ್ ಬಿಟ್ಟು ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಸರ್ಕಾರಿ ಹಾಸ್ಟೆಲ್ ಗಳಲ್ಲಿರುವ ವಿದ್ಯಾರ್ಥಿಗಳು ಬುಕ್ಸ್, ಬಟ್ಟೆ ಸಮೇತ ಬೆಂಗಳೂರು ತೊರೆದಿದ್ದಾರೆ. ಖಾಲಿಯಾಗಿರುವ ಹಾಸ್ಟೆಲ್ ಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ.
ಪಿಜಿಗಳಲ್ಲಿರುವವರು ಕೂಡ ತಮ್ಮ ಊರುಗಳಿಗೆ ತೆರಳುವಂತೆ ನಿರ್ದೇಶನ ನೀಡಲಾಗಿದೆ. ನಗರದ ಬಹುತೇಕ ಪಿಜಿಗಳಲ್ಲಿ ಜನ ಕಡಿಮೆಯಾಗಿದ್ದಾರೆ.
ರಾಜಸ್ಥಾನ, ಗುಜರಾತ್, ಕೊಲ್ಕತಾ ಸೇರಿದಂತೆ ಬೇರೆ ರಾಜ್ಯಗಳ ಜನ ಪಿಜಿಗಳಲ್ಲಿ ಉಳಿದುಕೊಂಡಿದ್ದಾರೆ. ಏಕಾಏಕಿ ಪಿಜಿಗಳಿಂದ ಹೊರ ಕಳುಹಿಸಿದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಪಿಜಿಯಲ್ಲಿ ಉಳಿದುಕೊಂಡವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ