ಹಂಪಿಯಲ್ಲಿ ಪ್ರವಾಸಿಗರಿಗೆ ನಿರ್ಬಂಧ: ಆಹಾರ-ನೀರಿಗಾಗಿ ಪರದಾಡುತ್ತಿರುವ ವಾನರಗಳಿಗೆ ಮಾನವನ ಸಹಾಯಹಸ್ತ!

ರಾಜ್ಯದಲ್ಲೂ ಕೊರೋನಾ ಭೀತಿ ತಾರಕಕ್ಕೇರಿದ್ದು, ನಿರ್ಬಂಧ ಮತ್ತು ಸರ್ಕಾರ ಕೈಗೊಂಡ ಮುಂಜಾಗ್ರತಾ ಕ್ರಮಗಳಿಂದಾಗಿ ಮಾನವರಷ್ಟೇ ಅಲ್ಲ ವನ್ಯಜೀವಿಗಳೂ ಕೂಡ ಪರದಾಡುವಂತಾಗಿದೆ.
ಹಂಪಿಯಲ್ಲಿ ವಾನರ ಸೇನೆ
ಹಂಪಿಯಲ್ಲಿ ವಾನರ ಸೇನೆ

ಹೊಸಪೇಟೆ: ರಾಜ್ಯದಲ್ಲೂ ಕೊರೋನಾ ಭೀತಿ ತಾರಕಕ್ಕೇರಿದ್ದು, ನಿರ್ಬಂಧ ಮತ್ತು ಸರ್ಕಾರ ಕೈಗೊಂಡ ಮುಂಜಾಗ್ರತಾ ಕ್ರಮಗಳಿಂದಾಗಿ ಮಾನವರಷ್ಟೇ ಅಲ್ಲ ವನ್ಯಜೀವಿಗಳೂ ಕೂಡ ಪರದಾಡುವಂತಾಗಿದೆ.

ಕೊರೋನ ಭೀತಿಯಿಂದ ದೇಶದ ಪ್ರತಿಯೊಂದು ಪ್ರವಾಸಿ ಸ್ಥಳಗಳಿಗೆ ಮತ್ತು ದೇವಸ್ಥಾನಗಳ ಪ್ರವೇಶಕ್ಕೆ ಸಾವರ್ಜನಿಕರಿಗೆ ನಿರ್ಭಂದ ಹೇರಲಾಗಿದ್ದು, ಇದರಿಂದ ಅವಲಂಬಿತರಾಗಿರುವ ಬಹುತೇಕ ವ್ಯಾಪಾರಿಗಳು ಮತ್ತು ದೇವಸ್ಥಾನದ ಅರ್ಚಕರು ಆದಾಯ ಇಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಅದೇ ರೀತಿ ದೇವಸ್ಥಾನಕ್ಕೆ ಬರುವ ಭಕ್ತರು ಮತ್ತು ಪ್ರವಾಸಿಗರು ಕೊಡುವ ತಿಂಡಿ ತಿನಿಸು ಹಣ್ಣುಗಳನ್ನೇ ನೆಚ್ಚಿಕೊಂಡು ಜೀವಿಸುತಿದ್ದ ಹಂಪಿಯ ವಾನರ ಸೈನ್ಯ ಇದೀಗ ಹಸಿವಿನಿಂದ ನರಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು ನಮ್ಮ ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಅತಿಹೆಚ್ಚು ವಾನರ ಸೈನ್ಯ ಕಂಡು ಬರುವ ಸ್ಥಳಗಳಲ್ಲಿ ವಿಶ್ವ ವಿಖ್ಯಾತ ಹಂಪಿ ಕೂಡ ಒಂದು. ಹಂಪಿಯ ಪ್ರವಾಸಕ್ಕೆ ನಿರ್ಬಂಧ ಹೇರಿರುವುದರಿಂದ ಯಾವೊಬ್ಬ ಪ್ರವಾಸಿಗರು ಇತ್ತ ಮುಖಮಾಡುತ್ತಿಲ್ಲ. ಸಾವಿರ ಸಾವಿರ ಸಂಖ್ಯೆಯಲ್ಲಿ ವಾಸವಾಗಿರುವ ಎರಡು ಬಗೆಯ ಕೋತಿಗಳಿಗೆ ಕಳೆದ ಒಂದು ವಾರದಿಂದ ಆಹಾರವೇ ಸಿಗುತ್ತಿಲ್ಲ. ಪರಿಣಾಮ ಕೋತಿಗಳು ಹಸಿವಿನಿಂದ ಬಳಲಿ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಕಲ್ಲು ಕಂಬಗಳ ಮದ್ಯ ಒರಗಿಕೊಂಡು ಮಲಗುವ ದೃಶ್ಯ ಸರ್ವೇ ಸಾಮಾನ್ಯವಾಗಿ ಕಾಣುತ್ತಿದೆ.

ಇದನ್ನ ಮನಗಂಡ ಇಲ್ಲಿನ ಸ್ಥಳೀಯ ಪ್ರವಾಸಿ ಮಿತ್ರ ಗಾರ್ಡ್ ಗಳು ಹಸಿದಿರುವ ವಾನರ ಸೈನ್ಯಕ್ಕೆ ಹಣ್ಣು ಹಂಪಲು ನೀಡುವ ಮೂಲಕ ಮಂಗಗಳ ಹಸಿವನ್ನು ನೀಗಿಸುವ ಕಾರ್ಯ ಮಾಡುತ್ತಿದ್ದಾರೆ. ಇನ್ನು ಈ ರೀತಿಯಾಗಿ ಪ್ರಾಣಿಗಳಿಗೆ ಹಣ್ಣು ತಿಂಡಿ ತಿನಿಸುಗಳನ್ನ ನೀಡುವುದು ಅರಣ್ಯ ಇಲಾಖೆಯ ನಿಯಮಕ್ಕೆ ವಿರುದ್ದವಾಗಿದ್ದರೂ ಅನಿವಾರ್ಯವಾಗಿ ಕೊಡಲೇಬೇಕಾದ ಪರಿಸ್ಥಿತಿ ಇಲ್ಲಿದೆ.

ಇಲ್ಲಿರುವ ಯಾವೊಂದು ಕೋತಿಗಳು ಹಂಪಿಯ ಪರಿಸರ ಬಿಟ್ಟು ಅಕ್ಕ ಪಕ್ಕದ ಕಾಡಿಗೆ ಹೋಗಿ ಆಹಾರ ಹುಡುಕಿ ತಿನ್ನುವುದಿಲ್ಲ, ಕಾರಣ ಅಕ್ಕಪಕ್ಕದ ಕಲ್ಲುಗುಡ್ಡಗಳಲ್ಲಿ ಚಿರತೆಗಳು ಹೆಚ್ಚಾಗಿ ಅಡಗಿಕೊಂಡಿದ್ದು ಒಂದು ವೇಳೆ ಚಿರತೆಗಳ ಕಣ್ಣಿಗೆ ಕೋತಿಗಳು ಬಿದ್ದರೆ ಚಿರತೆಗೆ ಬಲಿಯಾಗಿಬಿಡುತ್ತವೆ. ಈ ಭಯದಿಂದ ಇಲ್ಲಿನ ಕೋತಿಗಳು ಹಸಿವಿನಿಂದ ಬಳಲಿದರೂ ಜನನಿಬಿಡ ಪ್ರದೇಶ ಬಿಟ್ಟು  ಅಕ್ಕ ಪಕ್ಕದ ಕಾಡಿಗೆ ಹೋಗುವುದಿಲ್ಲ.  ಹಾಗಾಗಿ ಇಲ್ಲಿರುವ ವಾನರ ಸೈನ್ಯಕ್ಕೆ ಮಾನವನ ಸಹಾಯ ಹಸ್ತ ಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com