ಕ್ವಾರಂಟೈನ್ ಗೆ 20ಸಾವಿರ ಹೊಟೇಲ್ ಕಾಯ್ದಿರಿಸಲಾಗಿದ್ದು ದೇಶದಲ್ಲಿ 5 ಲಕ್ಷ ಮಂದಿಗೆ ಸೋಂಕು ಸಾಧ್ಯತೆ: ಡಾ. ಅಶ್ವತ್ಥ ನಾರಾಯಣ್

ದೇಶಾದ್ಯಂತ ಸುಮಾರು 5ಲಕ್ಷ ಮಂದಿಗೆ ಕರ್ನಾಟಕದಲ್ಲಿ 1ಲಕ್ಷ ಮಂದಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆಯಿದ್ದು, ರಾಜ್ಯದಲ್ಲಿ ಪರಿಸ್ಥಿತಿ ನಿಭಾಯಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ್ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ.
ಅಶ್ವತ್ಥ ನಾರಾಯಣ್
ಅಶ್ವತ್ಥ ನಾರಾಯಣ್
Updated on

ಬೆಂಗಳೂರು: ದೇಶಾದ್ಯಂತ ಸುಮಾರು 5ಲಕ್ಷ ಮಂದಿಗೆ ಕರ್ನಾಟಕದಲ್ಲಿ 1ಲಕ್ಷ ಮಂದಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆಯಿದ್ದು, ರಾಜ್ಯದಲ್ಲಿ ಪರಿಸ್ಥಿತಿ ನಿಭಾಯಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ್ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ.

ಕೊರೊನಾ ಮೇಲೆ ಪ್ರತಿಪಕ್ಷಗಳ ಸದಸ್ಯರು ಮಾಡಿದ ಪ್ರಸ್ತಾಪಕ್ಕೆ ಆರೋಗ್ಯ ಸಚಿವ ಶ್ರೀರಾಮುಲು ಸಮರ್ಪಕವಾಗಿ ಉತ್ತರಿಸಲು ಸಾಧ್ಯವಾಗದೇ ಇದ್ದಾಗ ರಾಮುಲು ಬೆಂಬಲಕ್ಕೆ ಬಂದ ಅಶ್ವತ್ಥ ನಾರಾಯಣ್, ವೈರಸ್ ಸೋಂಕು ಹರಡುವಿಕೆ ಹಿನ್ನಲೆಯಲ್ಲಿ ಸರ್ಕಾರದಿಂದ ಕ್ವಾರಂಟೈನ್ ಮಾಡಲು 20 ಸಾವಿರ ಹೊಟೇಲ್ ಕೊಠಡಿಗಳನ್ನು ಪಡೆಯಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದರು. 

ರಾಜ್ಯದಲ್ಲಿ ಒಂದು ಲಕ್ಷ ಜನಕ್ಕೆ ಸೋಂಕು ತಗುಲಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದ್ದು ಸರ್ಕಾರದಿಂದ ಒಂದು ಸಾವಿರ ವೆಂಟಿಲೇಟರ್ ಹಾಗೂ 15 ಲಕ್ಷ ಎನ್-95 ಮಾಸ್ಕ್ ಖರೀದಿಸುತ್ತಿದ್ದು, ಫೀವರ್ ಕ್ಲಿನಿಕ್ ಗಳನ್ನು ತೆರೆಯಲಾಗುತ್ತಿದೆ ಎಂದರು.

ಪ್ರಸಕ್ತ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ 700 ವೆಂಟಿಲೇಟರ್ ಗಳು ಇದ್ದು, ಹೆಚ್ಚುವರಿಯಾಗಿ 1 ಸಾವಿರ ವೆಂಟಿಲೇಟರ್ ಗಳನ್ನು ಆರ್ಡರ್ ಮಾಡಲಾಗಿದೆ ಎಂದರು.

ಆಗ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿ, 17 ಸಾವಿರ ನಿಗಾ ಘಟಕ ಮಾಡಲಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ 17 ಸಾವಿರ ವೆಂಟಿಲೇಟರ್ ತರಿಸಿ ಎಂದು ಒತ್ತಾಯಿಸಿದರು.

ಇದಕ್ಕೂ ಮುನ್ನ ಶ್ರೀರಾಮುಲು ಉತ್ತರಿಸಿ, ಕೋರಾನ ಸೋಂಕಿತರಿಗಾಗಿ ಇಡೀ ರಾಜ್ಯದಲ್ಲಿ 2 ಸಾವಿರ ಹಾಸಿಗೆಗಳನ್ನು ಮೀಸಲಿಡಲಾಗಿದೆ. 10 ಸಾವಿರ ಮಂದಿಗೆ ಸೋಂಕು ತಗಲಿದರೂ ಅದನ್ನು ನಿಯಂತ್ರಿಸುವ ಸಾಮರ್ಥ್ಯದ ಕೇಂದ್ರ ತೆರೆದಿದ್ದೇವೆ. ಹೋಮ್ ಕ್ವಾರಂಟೇನ್ ಮೇಲೆ ನಿಗಾ ವಹಿಸಿದ್ದೇವೆ. 1 ಲಕ್ಷ ಜನರಿಗೆ ಸಮಸ್ಯೆ ಆಗದ ರೀತಿಯ ಮುಂಜಾಗ್ರತಾ ಕ್ರಮ ವಹಿಸಿದ್ದೇವೆ.

ಶೇ 30 ರಷ್ಟು ಉಚಿತವಾಗಿ ವೆಂಟಿಲೇಟರ್ ಕೊಡುವುದಾಗಿ ಖಾಸಗಿ ಆಸ್ಪತ್ರೆ ವೈದ್ಯರು ತಿಳಿಸದ್ದಾರೆ. 1ಸಾವಿರ ವೆಂಟಿಲೇಟರ್ ಗೆ ಈಗಾಗಲೇ ಆರ್ಡರ್ ಮಾಡಿದ್ದೇವೆ ಎಂದರು.

ಈ ವೇಳೆ ಆಸ್ಪತ್ರೆಗಳ ಬಗ್ಗೆ ಮಾಹಿತಿ ನೀಡುವಂತೆ ಕಾಂಗ್ರೆಸಿನ ಸಿ.ಎಂ. ಇಬ್ರಾಹಿಂ ಆಗ್ರಹಿಸಿದರು.

ಆಗ ಡಾ. ಅಶ್ವತ್ ನಾರಾಯಣ್ ಉತ್ತರಿಸಿ, ಕೊರೊನಾಗೆ ಮೆಡಿಸನ್ ಇಲ್ಲ. ಔಷಧಿ ಕಂಡು ಹಿಡಿಯುವ ಕೆಲಸ ಆಗುತ್ತಿದೆ. ರಾಜ್ಯದಲ್ಲಿ ಯಾರಿಗೂ ವೆಂಟಿಲೇಟರ್ ಹಾಕುವ ಅಗತ್ಯ ಈವರೆಗೆ ಬಂದಿಲ್ಲ .
ಸೋಂಕಿತರು ಸಾಮಾನ್ಯ ಚಿಕಿತ್ಸೆ ಪಡೆದು ಗುಣ ಆಗುತ್ತಿದ್ದಾರೆ ಎಂದರು.

ಶ್ರೀರಾಮುಲು ಮಾತನಾಡಿ, ಕೊರೊನ ಎದುರಿಸಲು ಯಾವುದೇ ಹಣಕಾಸಿನ ತೊಂದರೆ ಇಲ್ಲ. ರಾಜ್ಯ ಸರ್ಕಾರ 200 ಕೋಟಿ ಕೊರೊನಾಗೆ ಮೀಸಲಿಟ್ಟಿದೆ. ಕೇಂದ್ರ ಸರ್ಕಾರ 186 ಕೋಟಿ ರೂ. ನೀಡಿದೆ. ಕೊರೊನ ಎದುರಿಸಲು ರಾಜ್ಯ ಸರಕಾರ ಸನ್ನದ್ಧವಾಗಿದೆ ಎಂದರು. 

ಈ ವೇಳೆ ವಿಧಾನ ಪರಿಷತ್ ನಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಗದ್ದಲ ಉಂಟಾಯಿತು. ಕೊರೊನಾ ಎದುರಿಸಲು ಸರಕಾರ ವಿಫಲವಾಗಿದೆ. ಕನಿಷ್ಠ 10 ಸಾವಿರ ಕೋಟಿ ರೂ ಮೀಸಲಿಡಬೇಕು. ಇಲ್ಲದಿದ್ದರ ಮುಂದಿನ ದಿನಗಳಲ್ಲಿ ಲಬೊ ಲಬೊ ಎಂದು ಬಾಯಿ ಬಡಿದುಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಂದು ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ಗದ್ದಲ ಹೆಚ್ಚದಾಗ ಸಭಾಪತಿಗಳು ಸದನವನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರು.

ಮತ್ತೆ ಸದನ ಸಮಾವೇಶಗೊಂಡಾಗ ಪ್ರತಿಪಕ್ಷಗಳು ಲ್ಯಾಪ್ ಟಾಪ್ ಹಗರಣದ ಕುರಿತು ಸದನ ಸಮಿತಿ ರಚಿಸುವಂತೆ ಧರಣಿ ಮುಂದುವರೆಸಿದವು. 

ಆಗ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಕೊರೋನಾ ಎದುರಿಸಲು ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಅಗತ್ಯ ಪ್ರಮಾಣ ವೆಂಟಿಲೇಟರ್ ರಾಜ್ಯದಲ್ಲಿ ಇಲ್ಲ. ತಪಾಸಣೆಗೆ ಕಠಿಣ ಕ್ರಮ ಇಲ್ಲ. ಕೇರಳ ರಾಜ್ಯದಲಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಲಾಗಿದೆ. ಅಲ್ಲಿ ಕೊರೋನಾ ಎದುರಿಸಲು 20 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಕೊರೋನಾಗೆ ಸೂಕ್ತ ನೆರವು ನಿಗದಿಮಾಡಬೇಕು ಎಂದು ಎಸ್ ಆರ್ ಪಾಟೀಲ್ ಆಗ್ರಹಿಸಿದರು.

ಪ್ರತಿಪಕ್ಷ ಸದಸ್ಯರ ಧರಣಿ ನಡುವೆ ಮೇಲ್ಮನೆಯಲ್ಲಿ ಎರಡು ವಿಧೇಯಕಗಳ ಅಂಗೀಕರಿಸಲಾಯಿತು.

ಹಣಕಾಸಿನ ಮಸೂದೆ ಹಾಗೂ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ವಿಧೇಯಕಗಳನ್ನು ಅಂಗೀಕರಿಸಲಾಯಿತು. ವಿಧೇಯಕ ಅಂಗೀಕಾರ ನಂತರ ಕಲಾಪವನ್ನು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅನಿರ್ದಿಷ್ಟಕಾಲ ಮುಂದೂಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com