

ಬೆಂಗಳೂರು: ಕಾರ್ಮಿಕರೊಬ್ಬರಿಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿರಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ಡೈರಿ ಸರ್ಕಲ್ ಮತ್ತು ಗೊಟ್ಟಿಗೆರೆ ನಡುವಿನ ನಮ್ಮ ಮೆಟ್ರೊ ಕಾಮಗಾರಿ ನಿಲುಗಡೆಯಾಗಿದೆ.
ಕಳೆದ ಬುಧವಾರ ಇಲ್ಲಿ ಕೆಲಸ ಮಾಡುತ್ತಿದ್ದ 44 ವರ್ಷದ ವ್ಯಕ್ತಿಯಲ್ಲಿ ಕಫ ಕಾಣಿಸಿಕೊಂಡಿತು. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿದಾಗ ಕೊರೋನಾ ನೆಗೆಟಿವ್ ಬಂದಿತ್ತು. ಕಳೆದ ಎರಡು ವರ್ಷಗಳಿಂದ ವ್ಯಕ್ತಿ ಅಸ್ತಮಾದಿಂದ ಬಳಲುತ್ತಿದ್ದರು.
ಇಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 170 ಕಾರ್ಮಿಕರನ್ನು ಕೊರೋನಾ ಪರೀಕ್ಷೆಗೊಳಪಡಿಸಿದ್ದು ಯಾರಲ್ಲಿಯೂ ಕೊರೋನಾ ಪಾಸಿಟಿವ್ ಬಂದಿಲ್ಲ. ಕಳೆದೆರಡು ದಿನಗಳಿಂದ ಕೆಲಸ ಸ್ಥಗಿತಗೊಂಡಿದೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇತ್ ತಿಳಿಸಿದ್ದಾರೆ.