ಕಾರ್ಮಿಕರ ಬಸ್ ಪ್ರಯಾಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು: ಸಿದ್ದರಾಮಯ್ಯ

ಹೊರ ರಾಜ್ಯದ ಹಾಗೂ ಹೊರ ಜಿಲ್ಲೆಗಳ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಬಸ್ ಗಳ ವ್ಯವಸ್ಥೆ ಮಾಡಲು ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ ಅವರ ಪ್ರಯಾಣ ವೆಚ್ಚವನ್ನು ಸ್ವತಃ ಕಾರ್ಮಿಕರೇ ಭರಿಸಬೇಕೆಂದು ತೀರ್ಮಾನಿಸಿರುವುದು ಸರಿಯಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಪ್ರತಿಪಕ್ಷ ನಾಯಕರ ಸಭೆ(ಸಾಂದರ್ಭಿಕ ಚಿತ್ರ)
ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಪ್ರತಿಪಕ್ಷ ನಾಯಕರ ಸಭೆ(ಸಾಂದರ್ಭಿಕ ಚಿತ್ರ)

ಬೆಂಗಳೂರು: ಹೊರ ರಾಜ್ಯದ ಹಾಗೂ ಹೊರ ಜಿಲ್ಲೆಗಳ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಬಸ್ ಗಳ ವ್ಯವಸ್ಥೆ ಮಾಡಲು ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ ಅವರ ಪ್ರಯಾಣ ವೆಚ್ಚವನ್ನು ಸ್ವತಃ ಕಾರ್ಮಿಕರೇ ಭರಿಸಬೇಕೆಂದು ತೀರ್ಮಾನಿಸಿರುವುದು ಸರಿಯಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ.

ಕೊರೋನಾ ವೈರಸ್ ಲಾಕ್ ಡೌನ್ ಕಾರಣದಿಂದಾಗಿ ಕಳೆದ 40 ದಿನಗಳಿಂದ ಸಾವಿರಾರು ವಲಸೆ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದಾರೆ. ದಿನನಿತ್ಯದ ಆಹಾರಕ್ಕೆ ಅವರು ಪರದಾಡುತ್ತಿರುವಾಗ ದೂರದೂರುಗಳಿಗೆ ಹೋಗಲು ಬಸ್ ಟಿಕೆಟ್ ಗೆ ಅವರ ಬಳಿ ಹಣವೆಲ್ಲಿರುತ್ತದೆ?ಹೀಗಿರುವಾಗ ಅಮಾನವೀಯವಾಗಿ ವರ್ತಿಸದೆ ಊರಿಗೆ ತೆರಳಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಸರ್ಕಾರವನ್ನು ಅವರು ಆಗ್ರಹಿಸಿದ್ದಾರೆ.

ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಸಾಂಪ್ರದಾಯಿಕ ವೃತ್ತಿ ಮಾಡುವವರ ನೆರವಿಗೆ ಸರ್ಕಾರ ನಿಲ್ಲಬೇಕು. ಕೆಲಸ ಕಾರ್ಯಗಳು ಸ್ಥಗಿತಗೊಂಡು ಈ ವಲಯದ ಜನ ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಲಾಕ್‌ಡೌನ್ ವಿಸ್ತರಣೆಯಾಗುತ್ತಾ ಹೋದಂತೆ ಇವರ ಕಷ್ಟ ನಷ್ಟ ಇನ್ನಷ್ಟು ಹೆಚ್ಚಲಿದೆ ಎಂದು ಸಹ ಸರ್ಕಾರದ ಗಮನಕ್ಕೆ ತಂದಿದ್ದಾರೆ.

ನಿಗಮ-ಮಂಡಳಿಗಳಲ್ಲಿ ಆಗುತ್ತಿರುವ ಅನಗತ್ಯ ವೆಚ್ಚಕ್ಕೆ ಮೊದಲು ಕಡಿವಾಣ ಹಾಕಬೇಕು. ಅಲ್ಲಿಯ ಅಧಿಕಾರಿಗಳಿಗೆ ನೀಡುತ್ತಿರುವ ಸವಲತ್ತು ನಿಲ್ಲಿಸಿ, ತೀರಾ ಅಗತ್ಯ ಎನಿಸುವ ವಿಚಾರಗಳಿಗೆ ಮಾತ್ರ ವೆಚ್ಚ ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳು ಚಿಂತನೆಯನ್ನೇ ಮಾಡುತ್ತಿಲ್ಲ, ಅಧಿಕಾರಿಗಳು ಬರೆದುಕೊಟ್ಟಿದ್ದನ್ನು ಮಾತ್ರ ಹೇಳುತ್ತಾರೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com