ವಲಸೆ ಕಾರ್ಮಿಕರಿಗೆ ತಲಾ 5 ಕೆಜಿ ಅಕ್ಕಿ, 2 ಕೆಜಿ ಕಡಲೆಕಾಳು: ಸಚಿವ ಗೋಪಾಲಯ್ಯ

ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಾದ ಬೆನ್ನಲ್ಲೇ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಪ್ಯಾಕೇಜ್ -2 ಬಿಡುಗಡೆ ಮಾಡಿದ್ದು, ವಲಸೆ ಕಾರ್ಮಿಕರಿಗೆ ಮೇ ಮತ್ತು ಜೂನ್ ನಲ್ಲಿ ಆಹಾರ ಧಾನ್ಯಗಳನ್ನು ವಿತರಿಸಲು ನಿರ್ಧಾರ ಕೈಗೊಂಡಿದೆ.
ಗೋಪಾಲಯ್ಯ
ಗೋಪಾಲಯ್ಯ
Updated on: 

ಬೆಂಗಳೂರು: ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಾದ ಬೆನ್ನಲ್ಲೇ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಪ್ಯಾಕೇಜ್ -2 ಬಿಡುಗಡೆ ಮಾಡಿದ್ದು, ವಲಸೆ ಕಾರ್ಮಿಕರಿಗೆ ಮೇ ಮತ್ತು ಜೂನ್ ನಲ್ಲಿ ಆಹಾರ ಧಾನ್ಯಗಳನ್ನು ವಿತರಿಸಲು ನಿರ್ಧಾರ ಕೈಗೊಂಡಿದೆ.

ವಲಸೆ ಕಾರ್ಮಿಕರಿಗೆ ಇದೇ ತಿಂಗಳ 26 ರಿಂದ 31ರವರೆಗೆ ಪ್ರತಿ ವ್ಯಕ್ತಿಗೆ 5ಕೆ.ಜಿ ಅಕ್ಕಿ ಉಚಿತವಾಗಿ ನೀಡಲು ನಿರ್ಧರಿಸಿದ್ದು ಮುಂದಿನ ತಿಂಗಳು ಜೂನ್ 1 ರಿಂದ ಜೂನ್ 10 ರವರೆಗೆ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ಮತ್ತು ಪ್ರತಿ ಕುಟುಂಬಕ್ಕೆ 2 ಕೆಜಿ ಕಡಲೆಕಾಳು ಉಚಿತವಾಗಿ ನೀಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕರ ಸರಬರಾಜು ಸಚಿವ ಕೆ. ಗೋಪಾಲಯ್ಯ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಇನ್ನು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಪ್ಯಾಕೇಜ್ 2ರ ಸಂಪೂರ್ಣ ವೆಚ್ಚ ಕೇಂದ್ರ ಸರ್ಕಾರ ವಹಿಸಿಕೊಂಡಿದೆ. ಇದಕ್ಕೆ 40.193 ಮೆಟ್ರಿಕ್ ಟನ್. ಅಕ್ಕಿ ಹಾಗೂ 2,544 ಟನ್ ಕಡಲೆಕಾಳು ಅವಶ್ಯಕತೆಯಿದ್ದು, ಇದರಲ್ಲಿ ಏನಾದರೂ ಕಡಿಮೆಯಾದರೆ ಕೇಂದ್ರದಿಂದ ಕಳಿಸಿಕೊಡಲಾಗುತ್ತದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ ಎಂದು ಸಚಿವ ಗೋಪಾಲಯ್ಯ ಅವರು ಹೇಳಿದರು. 

ದೂರವಾಣಿ ಮೂಲಕ ಕೇಂದ್ರ ಆಹಾರ ಸಚಿವರ ಬಳಿ ಈ ಕುರಿತು ಈಗಾಗಲೇ ಮಾತನಾಡಿದ್ದೇನೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ಕಷ್ಟಕ್ಕೆ ಸ್ಪಂದಿಸುತ್ತಿರುವ ಅವರಿಗೆ ನಾನು ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.

ವಲಸೆ ಕಾರ್ಮಿಕರನ್ನು ಗುರುತಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದ್ದು ನಮ್ಮ ರಾಜ್ಯದಲ್ಲಿ 40.19ಲಕ್ಷ ವಲಸೆ ಕಾರ್ಮಿಕರಿದ್ದಾರೆ. ಅವರೆಲ್ಲರು ಈ ಪ್ಯಾಕೇಜ್ 2ರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದರು.

ಪ್ರಧಾನ ಮಂತ್ರಿ ಗರೀಬ್ ಅನ್ನಯೋಜನೆಯ ಪ್ಯಾಕೇಜ್ -2 ರ ಪ್ರಯೋಜನವನ್ನು ಪಡೆದುಕೊಳ್ಳಲು ವಲಸೆ ಕಾರ್ಮಿಕರಲ್ಲಿ ಈ ಮಾನದಂಡಗಳನ್ನು ಕಡ್ಡಾಯ ಮಾಡಲಾಗಿದೆ. ವಲಸೆ ಕಾರ್ಮಿಕರು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಂದವರಾಗಿರಬೇಕು. ಇವರು ಯಾವುದೇ ಅಂತ್ಯೋದಯ / ಬಿಪಿಎಲ್/ ಎಪಿಎಲ್/ ಕಾರ್ಡ್ ಹೊಂದಿರಬಾರದು. ಇವರು ಸ್ವಂತ ಮನೆ ಹೊಂದಿರಬಾರದು ಹಾಗೂ ಆದಾಯ ತೆರಿಗೆ ಪಾವತಿದಾರರಾಗಿರಬಾರದು ಎಂದು ಸಚಿವರು ತಿಳಿಸಿದರು.

ಇನ್ನು ಪಡಿತರನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲಾಗುವುದು.‌ ಬೆಂಗಳೂರಿನಲ್ಲಿ ಬಿ.ಬಿ.ಎಂ.ಪಿ / ಕಾರ್ಮಿಕ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ ಪಡಿತರ ವಿತರಿಸಲಾಗುವುದು ಎಂದು ಆಹಾರ ಸಚಿವ ಗೋಪಾಲಯ್ಯ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com