ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ಇಂಪ್ಯಾಕ್ಟ್: ಮತ್ತೆ ಕುಟುಂಬ ಸೇರಿಕೊಂಡ ಮಾಜಿ ಯೋಧ

ಕುಟುಂಬಸ್ಥರ ನಿರ್ಲಕ್ಷ್ಯದಿಂದಾಗಿ ಮನೆಯಿಂದ ಹೊರ ಬಂದು ಬೀದಿ ಬೀದಿ ಅಲೆಯುತ್ತ ಸಂಕಷ್ಟ ಎದುರಿಸುತ್ತಿದ್ದ ಮಾಜಿ ಯೋಧರೊಬ್ಬರು ಇದೀಗ ಮತ್ತೆ ಕುಟುಂಬ ಸೇರಿಕೊಂಡಿದ್ದಾರೆ. 
ಮಾಜಿ ಯೋಧ ರಾಮಪ್ಪ
ಮಾಜಿ ಯೋಧ ರಾಮಪ್ಪ

ಚಿಕ್ಕಮಗಳೂರು: ಕುಟುಂಬಸ್ಥರ ನಿರ್ಲಕ್ಷ್ಯದಿಂದಾಗಿ ಮನೆಯಿಂದ ಹೊರ ಬಂದು ಬೀದಿ ಬೀದಿ ಅಲೆಯುತ್ತ ಸಂಕಷ್ಟ ಎದುರಿಸುತ್ತಿದ್ದ ಮಾಜಿ ಯೋಧರೊಬ್ಬರು ಇದೀಗ ಮತ್ತೆ ಕುಟುಂಬ ಸೇರಿಕೊಂಡಿದ್ದಾರೆ. 

ಮಾಜಿ ಯೋಧ ರಾಮಪ್ಪ ಅವರು ಸಂಕಷ್ಟಕ್ಕೆ ಸಿಲುಕಿರುವ ಕುರಿತು ಈ ಹಿಂದೆ ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ವರದಿ ಮಾಡಿತ್ತು. 

ಇದನ್ನು ಗಮನಿಸಿದ ಕೊಪ್ಪ ತಾಲೂಕಿನ ಅಧಿಕಾರಿಗಳು ಕೂಡಲೇ ರಾಮಪ್ಪ ಅವರ ಪುತ್ರನೊಂದಿಗೆ ಮಾತನಾಡಿ, ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಇದೀಗ ರಾಮಪ್ಪ ಅವರು ಕುಟುಂಬವನ್ನು ಸೇರಿಕೊಂಡಿದ್ದಾರೆ. 

ಹರಿಹರಪುರ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕೃಷ್ಣಾ ಎಂಬುವವರು ಮಾತನಾಡಿ, ಪುತ್ರ ರಾಜಶಂಕರ್ ಹಾಗೂ ಸೊಸೊಯೊಂದಿಗೆ ರಾಮಪ್ಪ ಅವರು ಜಗಳ ಮಾಡಿಕೊಂಡಿದ್ದು, ಇದರ ಪರಿಣಾಮ ಮನೆ ಬಿಟ್ಟು ಹೋಗಿದ್ದರು. ಬಳಿಕ ಶಿವಮೊಗ್ಗದಲ್ಲಿರುವ ತಮ್ಮ ಪುತ್ರಿಯ ಮನೆಗೆ ತೆರಳಿ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು, ಮೇ.7 ರಂದು ಅವರ ಮಗಳೇ ರಾಮಪ್ಪ ಅವರನ್ನು ಊರಿಗೆ ಕರೆ ತಂದಿದ್ದಾರೆ. ಬಳಿಕ ತಂದೆಗೆ ಸಹೋದರನ ಪತ್ನಿ ಹಿಂಸೆ ನೀಡುತ್ತಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಪೊಲೀಸರು ರಾಮಪ್ಪ ಹಾಗೂ ಅವರ ಪುತ್ರ ಇಬ್ಬರನ್ನು ಕರೆಸಿಕೊಂಡು ಸಂಧಾನ ಮಾಡಿಸಿದ್ದಾರೆ. ಇದೀಗ ರಾಮಪ್ಪ ಅವರು ಪುತ್ರನೊಂದಿಗಿರಲು ಒಪ್ಪಿಕೊಂಡಿದ್ದಾರೆಂದು ಹೇಳಿದ್ದಾರೆ. 

ರಾಮಪ್ಪ ಪುತ್ರ ರಾಜಶಂಕರ್ ಮಾತನಾಡಿ, ತಂದೆ ಆಗಾಗ ನನ್ನ ಪತ್ನಿ ಜೊತೆಗೆ ಜಗಳ ಮಾಡುತ್ತಿದ್ದರು. ನನ್ನ ಪತ್ನಿ ಕೊಪ್ಪ ಜಿಲ್ಲೆಯ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನನಗೆ ಇಬ್ಬರು ಸಹೋದರಿಯರಿದ್ದು, ಇಬ್ಬರೂ ಶಿವಮೊಗ್ಗ ಹಾಗೂ ಬೆಳಗಾವಿಯಲ್ಲಿದ್ದಾರೆ. ಎರಡು ಎಕರೆ ಜಾಗವಿದ್ದು, ನನ್ನ ತಂದೆಯನ್ನು ಪ್ರಚೋದಿಸುತ್ತಿದ್ದಾರೆ. ಹೀಗಾಗಿ ನನ್ನ ತಂದೆ ನನ್ನ ಪತ್ನಿ ಜೊತೆಗೆ ಜಗಳ ಮಾಡುತ್ತಿರುತ್ತಾರೆ. ತಂದೆಯನ್ನು ಸಮಾಧಾನಪಡಿಸಲು ಸಾಕಷ್ಟು ಬಾರಿ ಯತ್ನಿಸಿದ್ದೆ. ಆದರೆ, ಅವರು ನನ್ನ ಮಾತನ್ನು ಕೇಳಲು ಸಿದ್ಧರಿರಲಿಲ್ಲ ಎಂದು ತಿಳಿಸಿದ್ದಾರೆ. 

ನನ್ನ ತಾಯಿ ಮೂರು ತಿಂಗಳ ಹಿಂದಷ್ಟೇ ನಿಧನ ಹೊಂದಿದ್ದರು. ಕೃಷಿ ಇಲಾಖೆಯಲ್ಲಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದೆ. ಇದೀಗ ನನ್ನ ತಾಯಿ ನಿಧನ ಹೊಂದಿದ ಬಳಿಕ ಕೆಲಸ ಬಿಟ್ಟಿದ್ದೆ. ನಿವೃತ್ತರಾಗಿರುವ ನನ್ನ ತಂದೆ ತಿಂಗಳಿಗೆ 22 ಸಾವಿರ ಪಿಂಚಣಿ ಪಡೆಯುತ್ತಿದ್ದಾರೆ. ಯಾವಾಗಲೂ ನನ್ನ ಸಹೋದರಿಯ ಮನೆಯಲ್ಲಿಯೇ ಇರುತ್ತಾರೆ. ಇದೀಗ ನನ್ನ ಮನೆಯಲ್ಲಿದ್ದಾರೆ. ಇನ್ನೆಷ್ಟು ದಿನ ಇಲ್ಲಿರುತ್ತಾರೋ ನನಗೆ ಗೊತ್ತಿಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com