ಆಂಫಾನ್ ಚಂಡಮಾರುತದಿಂದ ಒಡಿಶಾ, ಪ. ಬಂಗಾಳ ರೈಲು ರದ್ದು: ಬೆಂಗಳೂರಲ್ಲಿ ಸಿಕ್ಕಿಹಾಕಿಕೊಂಡ ಸಾವಿರಾರು ವಲಸೆ ಕಾರ್ಮಿಕರು
ಬೆಂಗಳೂರು: ಒಡಿಶಾ ಮತ್ತು ಪಶ್ಚಿಮ ಬಂಗಾಳ ಮೂಲದ ವಲಸೆ ಕಾರ್ಮಿಕರಿಗೆ ತಮ್ಮೂರಿಗೆ ಹೋಗಲು ಕೊನೆಗೂ ರೈಲು ಸಿಕ್ಕಿದರೂ ಕೂಡ ಇದೀಗ ಆಂಫಾನ್ ಚಂಡಮಾರುತದಿಂದಾಗಿ 1,500ಕ್ಕೂ ಹೆಚ್ಚು ವಲಸೆ ಕಾರ್ಮಿಕರು ನಗರದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ.
ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಹೋಗಬೇಕಾಗಿದ್ದ ವಿಶೇಷ ಶ್ರಮಿಕ್ ರೈಲು ರದ್ದಾಗಿದೆ. ಈ ಬಗ್ಗೆ ಗೊತ್ತಿಲ್ಲದೆ ಅನೇಕ ವಲಸೆ ಕಾರ್ಮಿಕರು ವರ್ತೂರು ಪೊಲೀಸ್ ಠಾಣೆ ಎದುರು ಕಳೆದ ಸೋಮವಾರ ಜಮಾಯಿಸಿದ್ದರು. ಕೆಲವರು ರಸ್ತೆಬದಿ, ಬಸ್ ನಿಲ್ದಾಣಗಳಲ್ಲಿ ಮಲಗಿ ರಾತ್ರಿ ಕಳೆದರು.
ಇವರ ಹೀನಸ್ಥಿತಿ ಕಂಡು ವೈಟ್ ಫೀಲ್ಡ್ ರೈಸಿಂಗ್ ಸ್ವಯಂಸೇವಾ ಸಂಸ್ಥೆಯ ಕಾರ್ಯಕರ್ತರು ವಲಸೆ ಕಾರ್ಮಿಕರಿಗೆ ಆಹಾರ, ಬಟ್ಟೆ, ಸೊಳ್ಳೆ ಕಾಯಿಲ್ ನೀಡಿದ್ದರು. ಕೊಳಕು ಪ್ರದೇಶದಲ್ಲಿ ಮುಕ್ತ ಪ್ರದೇಶಗಳಲ್ಲಿ ಕಾರ್ಮಿಕರು ರಾತ್ರಿ ಹಗಲು ಕಳೆಯುತ್ತಿದ್ದಾರೆ. ವಲಸೆ ಕಾರ್ಮಿಕರ ಜನದಟ್ಟಣೆ ಹೆಚ್ಚಾಗಿದೆ. ಇವರಿಗೆ ಆಹಾರ, ವಸತಿ, ಬಾತ್ ರೂಂ ವ್ಯವಸ್ಥೆ ಎಲ್ಲದಕ್ಕೂ ಸಮಸ್ಯೆಯೇ. ತುಂಬಾ ಆತಂಕ, ಗೊಂದಲದಲ್ಲಿರುವ ಕೂಲಿ ಕಾರ್ಮಿಕರಿಗೆ ಈ ಸಂದರ್ಭದಲ್ಲಿ ಮನವೊಲಿಸುವುದು ಕಷ್ಟವಾಗುತ್ತಿದೆ ಎಂದು ವೈಟ್ ಫೀಲ್ಡ್ ರೈಸಿಂಗ್ ಸದಸ್ಯರೊಬ್ಬರು ಹೇಳುತ್ತಾರೆ.
ಪಶ್ಚಿಮ ಬಂಗಾಳ, ಒಡಿಶಾಕ್ಕೆ ಹೋಗುವ ರೈಲು ರದ್ದಾಗಿರುವುದರಿಂದ ಅಲ್ಲಿನ ವಲಸೆ ಕಾರ್ಮಿಕರಿಗೆ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಇಲ್ಲಿ ಸಂವಹನದ ಕೊರತೆ ಎದ್ದು ಕಾಣುತ್ತಿದೆ. ಸೇವಾ ಸಿಂಧು ಆಪ್ ನಲ್ಲಿ ದಾಖಲಾತಿ ಮಾಡಿಕೊಂಡಿದ್ದರೂ ಸಹ ಇವರಿಗೆ ರೈಲು ರದ್ದತಿ ಬಗ್ಗೆ ಮಾಹಿತಿ ಬಂದಿರಲಿಲ್ಲ. ಹೀಗಾಗಿ ರೈಲು ಸಿಕ್ಕಿ ತಮ್ಮೂರಿಗೆ ಹೋಗಲು ಅತ್ತಿಂದಿತ್ತ ಅಲೆದಾಡುತ್ತಿದ್ದಾರೆ ಎಂದು ಸಂಸ್ಥೆಯ ನಿತ್ಯಾ ರಾಮಕೃಷ್ಣನ್ ಹೇಳುತ್ತಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ