ಮಿಡತೆ ದಾಳಿ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು: ಕೃಷಿ ಸಚಿವ ಬಿ.ಸಿ. ಪಾಟೀಲ್

ಶಿವನ ಕುದುರೆ ಜಾತಿಗೆ ಸೇರಿದ ಲೋಕಸ್ಟ್ ಮಿಡತೆಯು ಈಗ ಮಹಾರಾಷ್ಟ್ರದ ನಾಗಪುರದಲ್ಲಿ ಇರುವ ಬಗ್ಗೆ ಮಾಹಿತಿ ಇದ್ದು, ಈ ಮಿಡತೆ ಬೀದರ್ ಗೆ ಲಗ್ಗೆ ಇಡುವ ಸಂಭವವಿದೆ. ಈ ಸಂಬಂಧ ಮುನ್ನೆಚ್ಚರಿಕೆ ಕ್ರಮವಾಗಿ ಬೀದರ್ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎರಡು ಸುತ್ತಿನ ತುರ್ತು ಸಭೆಗಳನ್ನು ನಡೆಸಲಾಯಿತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಪ್ಪಳ: ಶಿವನ ಕುದುರೆ ಜಾತಿಗೆ ಸೇರಿದ ಲೋಕಸ್ಟ್ ಮಿಡತೆಯು ಈಗ ಮಹಾರಾಷ್ಟ್ರದ ನಾಗಪುರದಲ್ಲಿ ಇರುವ ಬಗ್ಗೆ ಮಾಹಿತಿ ಇದ್ದು, ಈ ಮಿಡತೆ ಬೀದರ್ ಗೆ ಲಗ್ಗೆ ಇಡುವ ಸಂಭವವಿದೆ. ಈ ಸಂಬಂಧ ಮುನ್ನೆಚ್ಚರಿಕೆ ಕ್ರಮವಾಗಿ ಬೀದರ್ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎರಡು ಸುತ್ತಿನ ತುರ್ತು ಸಭೆಗಳನ್ನು ನಡೆಸಲಾಯಿತು.

ಸಭೆಯಲ್ಲಿ ಆಯಾ ತಾಲೂಕುಗಳಲ್ಲಿ ಇರುವ ಬೆಳೆಗಳನ್ನು ಮೊದಲು ಗುರುತಿಸಲು ಮತ್ತು ಬೆಳೆಗಳನ್ನು ಉಳಿಸಿಕೊಳ್ಳಲು ರೈತರಿಗೆ ತಿಳಿಸಲು ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ತಿಳಿಸಿದ್ದಾರೆ.
ಒಂದು ವೇಳೆ ಮಿಡತೆಗಳು ದಾಳಿ ಮಾಡಿದಲ್ಲಿ ಜೈವಿಕ ಕೀಟನಾಶಕಗಳ ಕೊರತೆಯಾಗದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಏನಿದು ಲೋಕಸ್ಟ್ ಮಿಡತೆ: ಈ ಮಿಡತೆಗಳ ಹೆಸರೇ ಡೆಸರ್ಟ್ ಲೋಕಸ್ಟ್ ಅಂದರೆ ಮರುಭೂಮಿ, ಒಣ ಪ್ರದೇಶದಲ್ಲಿ ಬದುಕುವ ಕೀಟಗಳಾಗಿವೆ. ಈ ಮಿಡತೆಗಳು ತಮ್ಮ ದೇಹದ ತೂಕದಷ್ಟೇ ಆಹಾರ ತಿನ್ನಬಲ್ಲವು. ಸೂರ್ಯಾಭಿಮುಖವಾಗಿ ಚಲಿಸುತ್ತವೆ. ಸೂರ್ಯ ಮುಳುಗಿದ ಮೇಲೆ ಬಹುತೇಕ ಚಲಿಸುವುದಿಲ್ಲ. ಸೂರ್ಯ ಮುಳುಗಿದ ಮೇಲೆ ಒಂದು ವೇಳೆ ಹಾರಾಟ ಆರಂಭಿಸಿದರೆ ೧೦ ಗಂಟೆವರೆಗೆ ನಿರಂತರ ಹಾರಬಲ್ಲ ಸಾಮರ್ಥ್ಯ ಹೊಂದಿದ ಮಿಡತೆ ಇದಾಗಿದೆ.

ಒಂದು ಹಿಂಡಿನಲ್ಲಿ 5 ಕೋಟಿ ಮಿಡತೆಗಳಿರುತ್ತವೆ. ಒಂದೇ ಬಾರಿಗೆ ದಾಳಿ ಮಾಡುತ್ತವೆ. ಇವುಗಳ ಸಂತಾನೋತ್ಪತ್ತಿ ಮರಭೂಮಿಯಂತಹ ಪ್ರದೇಶದಲ್ಲಿಯೇ ಹೆಚ್ಚು. ಒಂದು ಕೀಟ ಕನಿಷ್ಟ 600 ಮೊಟ್ಟೆ ಇಡುತ್ತವೆ. ಮೊದಲು ಆಫ್ರಿಕಾದಲ್ಲಿ ಈ ಮಿಡತೆಗಳು ಈಗ ಏಷಿಯಾಕ್ಕೂ ಬಂದಿದ್ದು, ಸೋಮಾಲಿಯಾ, ಪಾಕಿಸ್ಥಾನದ ಮೂಲಕ ಭಾರತಕ್ಕೆ ಪ್ರವೇಶಿಸಿವೆ. ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ, ಮಧ್ಯಪ್ರದೇಶ ದಾಟಿ ಈಗ ಮಹಾರಾಷ್ಟ್ರಕ್ಕೆ ಆಗಮಿಸಿವೆ.

ಮಧ್ಯಪ್ರದೇಶ ಸೇರಿದಂತೆ ಇತರೆ ರಾಜ್ಯಗಳಲ್ಲಿ ರೈತರ ಜಮೀನುಗಳಿಗೆ ಬಾಧಿಸಿರುವ ಕೀಟಗಳ ಹಾವಳಿ ರಾಜ್ಯಕ್ಕೆ ಬಾರದಂತೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ವಹಿಸಿದೆ.

ಮಿಡತೆಗಳ ಹಾವಳಿಯಿಂದ ಕೃಷಿ ಸಮುದಾಯವನ್ನು ರಕ್ಷಿಸಲು, ಇಂದು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ಮಿಡತೆ ದಾಳಿಯನ್ನು ತಡೆಗಟ್ಟಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಹ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com