'ಒಂದು ಹನಿ ನೀರೂ ಕೂಡ ಚೆಲ್ಲಲಿಲ್ಲ': ಕರ್ನಾಟಕ ರೈಲ್ವೇ ಅಧಿಕಾರಿಗಳ ಕಾರ್ಯಕ್ಕೆ ಕೇಂದ್ರ ಸಚಿವರ ಮೆಚ್ಚುಗೆ!

ಉತ್ತಮ ರೀತಿಯಲ್ಲಿ ರೈಲ್ವೇ ಹಳಿಗಳ ನಿರ್ವಹಣೆಗಾಗಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಕರ್ನಾಟಕ ರೈಲ್ವೇ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಚಲಿಸುತ್ತಿರುವ ಬೋಗಿಯಲ್ಲಿ ನೀರು ಇಟ್ಟ ಅಧಿಕಾರಿಗಳು
ಚಲಿಸುತ್ತಿರುವ ಬೋಗಿಯಲ್ಲಿ ನೀರು ಇಟ್ಟ ಅಧಿಕಾರಿಗಳು

ಮೈಸೂರು: ಉತ್ತಮ ರೀತಿಯಲ್ಲಿ ರೈಲ್ವೇ ಹಳಿಗಳ ನಿರ್ವಹಣೆಗಾಗಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಕರ್ನಾಟಕ ರೈಲ್ವೇ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಮೈಸೂರು- ಬೆಂಗಳೂರು ನಡುವಿನ ರೈಲ್ವೆ ಹಳಿಯ ಉತ್ತಮ ನಿರ್ವಹಣೆಗಾಗಿ ಪಿಯೂಷ್ ಗೋಯಲ್ ಅವರು ಕರ್ನಾಟಕ ಅಧಿಕಾರಿಗಳನ್ನು ಶ್ಲಾಘಿಸಿದ್ದಾರೆ. 

3-4 ತಿಂಗಳಿಂದ ಬೆಂಗಳೂರು ಮತ್ತು ಮೈಸೂರು ರೈಲ್ವೆ ಟ್ರ್ಯಾಕ್​ನಲ್ಲಿ ಸ್ವಲ್ಪ ನಿರ್ವಹಣೆ ಮಾಡಲಾಗಿತ್ತು. ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಬಲ್ಲಾಸ್ಟ್ ಇನ್ಸರ್ಷನ್, ಹಳಿಗಳ ಟ್ಯಾಂಪಿಂಗ್ ಹಾಗೂ ಎಂಬಾರ್ಕ್​ವೆುಂಟ್ ಸದೃಢಗೊಳಿಸುವುದೂ ಸೇರಿ ಅನೇಕ ಕಾರ್ಯಗಳನ್ನು  ಕೈಗೊಳ್ಳಲಾಗಿತ್ತು.

ರೈಲ್ವೆ ಇಲಾಖೆಯ ಬೆಂಗಳೂರು ವಿಭಾಗದ ಡಿಆರ್​ಎಂ ಅಶೋಕ್​ಕುಮಾರ್ ವರ್ವ ಗುರುವಾರ ಗೋಲ್​ಗುಂಬಜ್ ಎಕ್ಸ್​ಪ್ರೆಸ್ ರೈಲಿನಲ್ಲಿ ಬೆಂಗಳೂರಿನ ಸಂಗೊಳ್ಳಿ ರಾಯಣ ರೈಲ್ವೆ ನಿಲ್ದಾಣದಿಂದ ಮೈಸೂರು ರೈಲ್ವೆ ನಿಲ್ದಾಣದವರೆಗೂ ಟ್ರ್ಯಾಕ್ ಪರಿಶೀಲನೆ ನಡೆಸಿದ್ದರು. ಬೆಂಗಳೂರಿನಲ್ಲಿಯೇ ಒಂದು  ಲೋಟದಲ್ಲಿ ನೀರು ತುಂಬಿ ರೈಲಿನ ಕೊನೇ ಬೋಗಿಯಲ್ಲಿ ಇಟ್ಟಿದ್ದರು. ರೈಲು ಗಂಟೆಗೆ 100 ಕಿ.ಮೀ. ವೇಗದಲ್ಲಿ ಮೈಸೂರು ತಲುಪಿದರೂ ಒಂದು ಹನಿ ನೀರೂ ಚೆಲ್ಲಿರಲಿಲ್ಲ. ಇದನ್ನು ವಿಡಿಯೋ ಮಾಡಿ, ರೈಲ್ವೆ ಸಚಿವರಿಗೆ ವರ್ವ ವರದಿ ನೀಡಿದ್ದರು.

ಈ ವರದಿ ಮತ್ತು ವಿಡಿಯೋ ನೋಡಿದ ಸಚಿವ ಪಿಯೂಷ್ ಗೋಯಲ್ ಅವರು, ಮೈಸೂರು- ಬೆಂಗಳೂರು ನಡುವಿನ ರೈಲ್ವೆ ಹಳಿಯ ನಿರ್ವಹಣೆ ಕಾರಣದಿಂದಾಗಿ, ಇಂತಹ ಕಾರ್ಯ ಸಾಧ್ಯವಾಗಿದೆ. ಇದೀಗ ಸಂಚಾರ ಎಷ್ಟು ಸಲೀಸಾಗಿದೆಯೆಂದರೆ, ರೈಲು ಅತಿ ವೇಗದಲ್ಲಿದ್ದರೂ ಲೋಟದಲ್ಲಿದ್ದ ನೀರಿನ ಒಂದು ಹನಿಯೂ  ಹೊರಬಿದ್ದಿಲ್ಲ ಎಂದು ಟ್ವೀಟ್ ಮಾಡಿದ್ದು ಮಾತ್ರವಲ್ಲದೇ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com